ಸೋಮವಾರ, ಜನವರಿ 17, 2022
19 °C

ಮಾದಕ ವಸ್ತು: ಪೊಲೀಸರ ಕ್ರಮ ಎತ್ತಿಹಿಡಿದ ಹೈಕೋರ್ಟ್

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾದಕ ವಸ್ತು ಸಾಗಣೆ ಆರೋಪದಡಿ ಬಂಧಿಸಿ ಸ್ಥಾನಬದ್ಧತೆಯಲ್ಲಿ ಇಟ್ಟಿರುವ ಆರೋಪಿಯನ್ನು ಬಿಡುಗಡೆ ಮಾಡಲು ನಿರಾಕರಿಸಿರುವ ಹೈಕೋರ್ಟ್‌, ರಾಜ್ಯ ಪೊಲೀಸರ ಕ್ರಮವನ್ನು ಎತ್ತಿಹಿಡಿದಿದೆ. 

’ಪೊಲೀಸರು ನನ್ನ ಪತಿಯನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದು ಕೂಡಲೇ ಬಿಡುಗಡೆ ಮಾಡುವಂತೆ ನಿರ್ದೇಶಿಸಬೇಕು‘ ಎಂದು ಕೋರಿ ನಗರದ ಅನ್ನಸಂದ್ರಪಾಳ್ಯದ ಮುಸ್ಲಿಂ ಕಾಲೋನಿ ನಿವಾಸಿ ಖತೀಜುತಲ್‌ ನಜ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. 

ವಿಚಾರಣೆ ವೇಳೆ ಅರ್ಜಿದಾರರ ಆರೋಪಗಳನ್ನು ಬಲವಾಗಿ ಅಲ್ಲಗಳೆದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವೈ.ಎಚ್‌. ವಿಜಯಕುಮಾರ್ ಮತ್ತು ರಾಜ್ಯ ಪ್ರಾಸಿಕ್ಯೂಷನ್‌ ವಕೀಲ ಪಿ.ತೇಜಸ್‌, ’ಪ್ರಕರಣದಲ್ಲಿ ಪ್ರಾಧಿಕಾರ, ಸರ್ಕಾರ ಮತ್ತು ಸಲಹಾ ಮಂಡಳಿಗೆ ಮನವಿ ನೀಡುವ ಹಕ್ಕಿನ ಕುರಿತು ಬಂಧಿತನಿಗೆ ತಿಳಿಸಲಾಗಿದೆ. ಹೀಗಾಗಿ ಬಂಧನದ ಆದೇಶ ಮತ್ತು ಬಂಧಿಸಿರುವ ಕ್ರಮಗಳಲ್ಲಿ ಯಾವುದೇ ಲೋಪವಿಲ್ಲ‘ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಪೀಠ, ’ಆರೋಪಿ, ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಅಕ್ರಮ ಸಾಗಣೆ ಪ್ರತಿಬಂಧಕ ಕಾಯ್ದೆ–1988ರ ಕಲಂ 12 (1) (ಎ) ಉಲ್ಲಂಘಿಸಿದ್ದು, ಸ್ಥಾನಬದ್ಧತೆಯಲ್ಲಿಟ್ಟಿರುವ ಆದೇಶ ಸರಿಯಾಗಿಯೇ ಇದೆ. ‘ ಎಂದು ತೀರ್ಪು ನೀಡಿದೆ.

’ಮಾದಕ ವಸ್ತುಗಳ ಅಕ್ರಮ ಸಾಗಣೆ ಆರೋಪದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಆ ಕುರಿತು ಮೇಲ್ವಿಚಾರಣೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೆ, ಬಂಧನದ ಆದೇಶ ಮತ್ತು ಬಂಧನಕ್ಕೆ ಆಧಾರಗಳನ್ನು ಒಳಗೊಂಡ ವರದಿ ಸ್ವೀಕರಿಸಿದ ನಂತರವೇ ಈ ಅಧಿಕಾರ ಚಲಾಯಿಸಬಹುದು. ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂಬ ಅಂಶವನ್ನು ತಿಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇಲ್ಲ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಮಾದಕ ವಸ್ತುಗಳ ಸಾಗಣೆ ದಂಧೆಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ದೂರಿನ ಮೇರೆಗೆ ಎಚ್‌ಎಎಲ್ ಠಾಣೆ ಪೊಲೀಸರು ಅನ್ನಸಂದ್ರಪಾಳ್ಯದ ಮುಸ್ಲಿಂ ಕಾಲೋನಿ ನಿವಾಸಿ ಕಾಸಿಫ್ ಎಂಬುವರನ್ನು 2021ರ ಆಗಸ್ಟ್ 31 ರಂದು ಬಂಧಿಸಿದ್ದರು. ದಂಧೆಗೆ ಸಂಬಂಧಿಸಿದಂತೆ ಕಾಸಿಫ್ ಐದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡಿತ್ತು. ನಂತರ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 

’ಪೊಲೀಸರು ನನ್ನ ಪತಿಯನ್ನು ಅಕ್ರಮವಾಗಿ ಬಂಧಿಸಿ ಸ್ಥಾನಬದ್ಧತೆಯಲ್ಲಿಇರಿಸಿದ್ದಾರೆ. ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಇರುವ ಅವಕಾಶದ ಬಗ್ಗೆ ತಿಳಿಸಿಲ್ಲ. ಇದು ಸಂವಿಧಾನದ 22 (5) ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನ ಉಲ್ಲಂಘನೆ‘ ಎಂದು ಖತೀಜುತಲ್‌ ನಜ್ಮಾ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.