ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ ಜಯಂತಿ: ಪ್ರಧಾನಿ ಮೋದಿ, ರಾಹುಲ್‌ ಸೇರಿ ಗಣ್ಯರಿಂದ ನಮನ 

Last Updated 1 ಏಪ್ರಿಲ್ 2022, 9:47 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಪ್ರಯುಕ್ತ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಗೌರವ ನಮನ ಸಲ್ಲಿಸಿದ್ದಾರೆ.

‘ಪೂಜನೀಯರಾದ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ನಾನು ಗೌರವ ನಮನ ಸಲ್ಲಿಸುತ್ತೇನೆ. ಸ್ವಾಮೀಜಿಯವರು ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

‘ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಶಿವಕುಮಾರ ಸ್ವಾಮೀಜಿ ಅವರು ನೀಡಿದ ಪ್ರಾಮುಖ್ಯತೆ ಹಾಗೂ ಸಾಮಾಜಿಕ ಸೇವೆಯಿಂದಾಗಿಅವರು ಸದಾ ಸ್ಮರಣೀಯರು. ಅವರ ಕನಸುಗಳನ್ನು ಈಡೇರಿಸಲು ನಾವು ಶ್ರಮಿಸೋಣ’ ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ತ್ರಿವಿಧ ದಾಸೋಹಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 115 ನೇ ಜಯಂತ್ಯೋತ್ಸವ ಸಂದರ್ಭದಲ್ಲಿ ಅವರ ಗದ್ದುಗೆಗೆ ಭೇಟಿ ನೀಡಿ ನಮನ‌ ಸಲ್ಲಿಸಿದರು.

ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಲಿಂಗೈಕ್ಯ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಜ್ಞಾನ, ಅನ್ನ ಮತ್ತು ಕಾಯಕಗಳ ತ್ರಿವಿಧ ದಾಸೋಹದ ಮೂಲಕ ಲೋಕವನ್ನು ಪೊರೆದು ಅಭಿನವ ಬಸವಣ್ಣನೆಂದೇ ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ‌‌ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಅವರನ್ನು ಗೌರವದಿಂದ ನೆನೆಯುತ್ತೇನೆ. ಶ್ರೀಗಳ ಜೀವನ ಮತ್ತು ಸಾಧನೆ ನಮ್ಮೆಲ್ಲರ ಆದರ್ಶವಾಗಲಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ‌ ಡಾ. ಶಿವಕುಮಾರ ಸ್ವಾಮೀಜಿಯವರು ಜಾತಿ-ಮತದ ತಾರತಮ್ಯವಿಲ್ಲದೇ ಶಿಕ್ಷಣಕ್ರಾಂತಿಗೈದ ಮಹಾತ್ಮರು. ಅವರ ಜನ್ಮದಿನದಂದು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಸುಮಾರು ಎಂಟು ದಶಕಗಳ ಕಾಲ ನಾಡಿಗೆ ಅಧ್ಯಾತ್ಮದ ಮಾರ್ಗ ತೋರಿದ ಸಂತ, ತ್ರಿವಿಧ ದಾಸೋಹದಿಂದ ಬಡ ಮಕ್ಕಳ ಬದುಕಿಗೆ ದಾರಿ ಮಾಡಿದ ನಡೆದಾಡುವ ದೇವರು, ಪದ್ಮಭೂಷಣ, ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅನಂತ ಪ್ರಣಾಮಗಳು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.

‘ಶಾಲೆಯಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರು ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹದ ಮೂಲಕ ತಮ್ಮ ಇಡೀ ಜೀವನವನ್ನ ಬಡ ಮಕ್ಕಳ ಕಲ್ಯಾಣಕ್ಕಾಗಿ ಸಮರ್ಪಿಸಿದ ಶ್ರೀಗಳಿಗೆ ಇದು ಅತ್ಯಂತ ಸೂಕ್ತ ಶ್ರದ್ಧಾಂಜಲಿ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT