ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿ ವಿರೋಧಿಸಿದರೆ ದೇಶದ ಅಭಿವೃದ್ಧಿ ವಿರೋಧಿಸಿದಂತೆ: ಅಶ್ವತ್ಥ ನಾರಾಯಣ

ಎನ್‌ಇಪಿ ಅಡಿ 23ರಿಂದ ಪ್ರವೇಶ ಪ್ರಕ್ರಿಯೆ ಆರಂಭ
Last Updated 18 ಆಗಸ್ಟ್ 2021, 12:44 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಕಲಿಕೆಗೆ ಇದೇ 23ರಿಂದಲೇ ಪ್ರವೇಶ ‍‍ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಪ್ರವೇಶ ಪ್ರಕ್ರಿಯೆಗೆ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು’ ಎಂದು ಉನ್ನತಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತು ಬುಧವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನೂತನ ನೀತಿಯ ಜಾರಿಯ ಹಿಂದೆ ವಿದ್ಯಾರ್ಥಿಯ ಹಿತ ಮಾತ್ರ ಅಡಗಿದೆ. ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಅಥವಾ ಅದನ್ನು ಸರಿಯಾಗಿ ಗ್ರಹಿಸದೇ ಟೀಕೆ ಮಾಡುವುದು ಸರಿಯಲ್ಲ. ಶಿಕ್ಷಣ ನೀತಿಯನ್ನು ವಿರೋಧ ಮಾಡುವುದೂ ದೇಶದ ಅಭಿವೃದ್ಧಿಯನ್ನು ವಿರೋಧಿಸುವುದು ಎರಡೂ ಒಂದೇ’ ಎಂದು ಅಭಿಪ್ರಾಯಪಟ್ಟರು.

‘ವಿಶಾಲ ದೃಷ್ಟಿಕೋನದಿಂದ ರೂಪಿತವಾಗಿರುವ ಶಿಕ್ಷಣ ನೀತಿಯಲ್ಲಿ ಬಹು ಆಯ್ಕೆಯ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ. ಇಷ್ಟು ದಿನ ನಾವು ಹೇಳಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅವಕಾಶ ಇರಲಿಲ್ಲ. ಇನ್ನು ಮುಂದೆ ಅವರ ಇಚ್ಛೆಯ ವಿಷಯವನ್ನು ಕಲಿಯಲಿದ್ದಾರೆ’ ಎಂದರು.

‘ಯಾವುದೇ ಕ್ಷೇತ್ರದಲ್ಲಿ ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಎನ್‌ಇಪಿಯಲ್ಲಿ ಉತ್ತರವಿದೆ’ ಎಂದೂ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ‘ವಿದ್ಯಾರ್ಥಿಗಳ ಕೌಶಲ ಮತ್ತು ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಮಾತ್ರವಲ್ಲದೆ, ಆರೋಗ್ಯ ವಿಷಯದ ಕಡೆಗೂ ಆದ್ಯತೆ ನೀಡಲಾಗಿದೆ. ಕೌಶಲ ಆಧಾರಿತ ಪಠ್ಯಕ್ರಮ, ವೈಜ್ಞಾನಿಕ ಶಿಕ್ಷಣ ಶಾಸ್ತ್ರ, ಗುಣಮಟ್ಟದ ಮೌಲ್ಯಮಾಪನದಂತಹ ಅಂಶಗಳು ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸಲಿವೆ’ ಎಂದರು.

ಕ್ರಿಸ್ತು ಜಯಂತಿ ಕಾಲೇಜಿನ ಪ್ರಾಚಾರ್ಯ ಡಾ.ಅಗಸ್ಟೀನ್ ಜಾರ್ಜ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಕುಮುದಾ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT