ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿಗೌಡ, ನಂಜೇಗೌಡರ ಇತಿಹಾಸ ಸಿಕ್ಕರೆ ಮಠಕ್ಕೆ ಒಪ್ಪಿಸಿ: ನಿರ್ಮಲಾನಂದ ಸ್ವಾಮೀಜಿ

ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಯತ್ನ; ಚರ್ಚೆ ನಿಲ್ಲಿಸುವಂತೆ ಚುಂಚಶ್ರೀಗಳ ಸೂಚನೆ
Last Updated 20 ಮಾರ್ಚ್ 2023, 13:24 IST
ಅಕ್ಷರ ಗಾತ್ರ

ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಶಾಸನಗಳಿದ್ದರೆ, ಇತಿಹಾಸದಲ್ಲಿ ಸಮರ್ಪಕ ಉಲ್ಲೇಖ ಸಿಕ್ಕಿದರೆ ಅವುಗಳನ್ನು ಆದಿಚುಂಚನಗಿರಿ ಮಠಕ್ಕೆ ತಂದು ಒಪ್ಪಿಸಲಿ. ಎಲ್ಲವನ್ನೂ ಕ್ರೂಡೀಕರಿಸಿ, ಪರಿಶೀಲಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಶಾಸನವನ್ನು ಪರಿಶೀಲನೆ ಮಾಡುವ ತಾಂತ್ರಿಕ (ಕಾರ್ಬನ್ ಡೇಟಿಂಗ್‌) ವಿಧಾನವಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ತಜ್ಞರು ನಮ್ಮಲ್ಲಿದ್ದಾರೆ. ತಂದು ಕೊಟ್ಟ ಮಾಹಿತಿಯನ್ನು ಓರೆಗೆ ಹಚ್ಚಿ ಪರಿಶೀಲನೆ ಮಾಡಲಾಗುವುದು’ ಎಂದರು.

‘ಪ್ರಸ್ತುತ ಉರಿಗೌಡ, ದೊಡ್ಡನಂಜೇಗೌಡರ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು ಗೊಂದಲ ಸೃಷ್ಟಿಸಿವೆ, ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವಂತಿದೆ. ಕೂಡಲೇ ಚರ್ಚೆ ನಿಲ್ಲಿಸಬೇಕು ಎಂಬುದು ನನ್ನ ಆಗ್ರಹ. ಸರಿಯಾದ ಸಂಶೋಧನೆಯಾಗದೇ ಎಲ್ಲೆಂದರಲ್ಲಿ ಈ ವಿಚಾರ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ವಿಚಾರ ಚರ್ಚೆ ಮಾಡುತ್ತಿರುವ ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ ಮುಂತಾದವರಿಗೆ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಡಲಾಗಿದ್ದು ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ’ ಎಂದರು.

‘ಸಚಿವ, ನಿರ್ಮಾಪಕ ಮುನಿರತ್ನ ಅವರು ಈ ಕುರಿತು ಸಿನಿಮಾ ಮಾಡುತ್ತಾರೆ ಎಂಬುದು ಗೊತ್ತಾಯಿತು, ಅವರನ್ನು ಕರೆದು ಮಾತನಾಡಿದ್ದೇನೆ. ಐತಿಹಾಸಿಕ ಹಿನ್ನೆಲೆ ಸ್ಪಷ್ಟತೆ ಇಲ್ಲದಿರುವ ವಿಚಾರದ ಸಿನಿಮಾ ಮಾಡುವುದು ಸೂಕ್ತ ಅಲ್ಲ. ಒಂದು ಸಮುದಾಯದ ಅಸ್ಮಿತೆ, ಪ್ರತಿನಿಧಿಸುತ್ತಿರುವ ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸರಿ ಇಲ್ಲ ಎಂದು ತಿಳಿಸಿದ್ದೇನೆ’ ಎಂದರು.

‘ಕಲ್ಪನೆ ಮಾಡಿ ಬರೆಯುವುದು ಕಾದಂಬರಿಯಾಗುತ್ತದೆ. ಶಾಸನ ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆಯುವಂಥದ್ದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ. ಉರಿಗೌಡ, ನಂಜೇಗೌಡ ವಿಚಾರದಲ್ಲಿ ಯಾವುದೇ ಕುರುಹುಗಳು ಕಂಡು ಬಾರದ ಹಿನ್ನೆಲೆಯಲ್ಲಿ ಸಿನಿಮಾ ಮಾಡುವ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗುತ್ತದೆ. ಯುವ ಸಮುದಾಯಕ್ಕೆ ಕೆಟ್ಟ ಸಂದೇಶ ನೀಡಬಾರದು’ ಎಂದರು.

‘ಇತಿಹಾಸ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಸಾಧ್ಯ. ಆಯಾ ಕಾಲದ ಶಿಲಾ ಶಾಸನಗಳು, ತಾಳೆಗರಿಗಳು, ಆ ಕಾಲದ ವ್ಯಕ್ತಿಗಳು ಬರೆದ ಚರಿತ್ರೆಗಳಿಂದ ಇತಿಹಾಸ ಅರಿಯಬೇಕು. ಇಂತಹ ಯಾವುದೇ ಕುರುಹುಗಳು ಇಲ್ಲದಿರುವಾಗ ಏನೇ ಬರೆದರೂ ಅದು ಗೊಂದಲ, ಅನುಮಾನ ಸೃಷ್ಟಿಸುತ್ತದೆ’ ಎಂದರು.

ಸಿನಿಮಾ ಮಾಡುವುದಿಲ್ಲ: ಮುನಿರತ್ನ

‘ಉರಿಗೌಡ, ದೊಡ್ಡನಂಜೇಗೌಡರ ವಿಚಾರವನ್ನಿಟ್ಟಕೊಂಡು ನಾನು ಸಿನಿಮಾ ಮಾಡುವುದಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿಗಳ ಸಲಹೆಯಂತೆ ಸಿನಿಮಾ ವಿಚಾರವನ್ನು ನಾನು ಇಲ್ಲಿಗೇ ಕೈಬಿಡುತ್ತೇನೆ’ ಎಂದು ಸಚಿವ, ನಿರ್ಮಾಪಕ ಮುನಿರತ್ನ ಹೇಳಿದರು.

ತಾಲ್ಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಆದಿಚುಂಚನಗಿರಿ, ವಿಶ್ವಮಾನವ ಶಾಖಾ ಮಠದ ಆವರಣದಲ್ಲಿ ಸೋಮವಾರ ಡಾ.ನಿರ್ಮಲಾನಂದನಾಥ ಅವರೊಂದಿಗೆ ಚರ್ಚೆ ನಡೆಸಿ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಮೈಸೂರು ಸಂಸ್ಥಾನ, ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಒಂದಷ್ಟು ದಾಖಲೆಗಳು ಸಿಕ್ಕಿದ್ದವು. ಹೀಗಾಗಿ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೆ. ಆದರೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿದ ನಂತರ ಸಿನಿಮಾ ಮಾಡುವ ವಿಚಾರ ಬಿಟ್ಟಿದ್ದೇನೆ. ಯಾರ ಮನಸ್ಸನ್ನೂ ನೋಯಿಸಿ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ ಎನಿಸಿತು’ ಎಂದರು.

‘ವಿಚಾರದ ನೈಜತೆ, ಗೊಂದಲಗಳ ಬಗ್ಗೆ ಸ್ವಾಮೀಜಿ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತಿನಂತೆ ನಾನು ಸಿನಿಮಾ ಮಾಡುವುದಿಲ್ಲ. ಈ ಕುರಿತು ಸ್ವಾಮೀಜಿಗೆ ಮಾತುಕೊಟ್ಟಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT