ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಯಡಿಯೂರಪ್ಪ

Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರು ಶನಿವಾರ ಸಂಜೆಯೊಳಗೆ ಹಸಿರುನಿಶಾನೆ ತೋರಬಹುದೆಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ಹುಸಿಯಾಗಿದೆ. ಹೀಗಾಗಿ, ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಸೋಮವಾರ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಅದಕ್ಕೂ ಮೊದಲೇ ಪುನಾರಚನೆ ಮಾಡಲು ಯಡಿಯೂರಪ್ಪ ಉತ್ಸುಕರಾಗಿದ್ದರು. ಅದಕ್ಕೆ ಅವಕಾಶ ಸಿಗದೇ ಇದ್ದರೆ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳ ಪೈಕಿ ನಾಲ್ಕನ್ನು ಭರ್ತಿ ಮಾಡುವ ವಿಸ್ತರಣೆ ಪ್ರಕ್ರಿಯೆ ನಡೆಸುವ ಅಪೇಕ್ಷೆಯಲ್ಲಿದ್ದರು. ಈ ಪ್ರಸ್ತಾವ ಹೊತ್ತಿಕೊಂಡೇ, ಗುರುವಾರ ದೆಹಲಿಗೆ ತೆರಳಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿ ಚರ್ಚಿಸಿದ್ದರು.

ಪಕ್ಷದ ಪ್ರಮುಖರ ಜತೆ ಚರ್ಚಿಸಿದ ಬಳಿಕ ಈ ಸಂಬಂಧ ಸೂಚನೆ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ಶನಿವಾರ ತಡ ರಾತ್ರಿಯವರೆಗೂ ಬಿಜೆಪಿ ವರಿಷ್ಠರಿಂದ ಯಾವುದೇ ನಿರ್ದೇಶನ ಬಂದಿಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕವೇ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ನಿರ್ದಿಷ್ಟವಾಗಿ ಹೇಳಲಾಗದು: ದೆಹಲಿಯಿಂದ ವಾಪಸಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ವಿಧಾನ ಮಂಡಲ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ನಡೆಸಬೇಕೆಂಬುದು ನನ್ನ ಯೋಚನೆಯಾಗಿತ್ತು. ವರಿಷ್ಠರ ಸೂಚನೆಗಾಗಿ ಕಾಯುತ್ತಿರುವೆ’ ಎಂದರು.

ಆಕಾಂಕ್ಷಿಗಳೂ ವಾಪಸ್‌: ಸಂಪುಟ ಸೇರಲು ಉತ್ಸುಕರಾಗಿದ್ದ ಬಿಜೆಪಿಯ ಕೆಲವು ಶಾಸಕರೂ ದೆಹಲಿಗೆ ತೆರಳಿದ್ದರು. ಆದರೆ, ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ದೊರೆಯದೇ ಇರುವುದರಿಂದ ಅವರಲ್ಲಿ ಬಹುತೇಕರು ಶನಿವಾರವೇ ಬೆಂಗಳೂರಿಗೆ ವಾಪಸಾಗಿದ್ದಾರೆ.

ಭಾನುವಾರವೇ ಸಂಪುಟ ವಿಸ್ತರಣೆ ಆಗಬಹುದು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ನಿರೀಕ್ಷಿಸಿದ್ದರು. ಸಂಪುಟದಲ್ಲಿ ಆರು ಸ್ಥಾನಗಳು ಖಾಲಿ ಇದ್ದು, ನಾಲ್ಕನ್ನು ಭರ್ತಿ ಮಾಡುವ ಕುರಿತು ಪಕ್ಷದಲ್ಲಿ ಚರ್ಚೆ ಆರಂಭವಾಗಿತ್ತು. ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿಯೂ ಶುರುವಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT