ಬುಧವಾರ, ನವೆಂಬರ್ 25, 2020
20 °C

ಫಿರಂಗಿ ಬಳಸಿ ಪಾಕ್ ದಾಳಿ: ಬಿಎಸ್‌ಎಫ್‌ ಇನ್‌ಸ್ಪೆಕ್ಟರ್‌ ಜನರಲ್ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಡುವಣ ಗಡಿ ನಿಯಂತ್ರಣಾ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಸೇನೆಯು ಗುರುವಾರ ನಡೆಸಿದ ದಾಳಿಯಲ್ಲಿ ಫಿರಂಗಿಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಇದರಿಂದಲೇ ನಮ್ಮಲ್ಲಿ ಹೆಚ್ಚು ಹಾನಿ ಸಂಭವಿಸಿದೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಇನ್‌ಸ್ಪೆಕ್ಟರ್‌ ಜನರಲ್ ರಾಜೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಸೇನೆಯು ಗುರುವಾರ ರಾತ್ರಿ ಎಲ್‌ಒಸಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನ ಸೇನೆಯ 11 ಸೈನಿಕರು ಮೃತಪಟ್ಟಿದ್ದರು. ಪಾಕಿಸ್ತಾನ ಸೇನೆಯ ಬಂಕರ್‌ಗಳಿಗೆ ಹಾನಿಯಾಗಿತ್ತು. ಆದರೆ ಪಾಕಿಸ್ತಾನದ ಸೈನಿಕರು ಮತ್ತೆ ದಾಳಿ ನಡೆಸಿದ್ದರು. ದಾಳಿ ಶುಕ್ರವಾರ ಸಂಜೆಯವರೆಗೆ ಮುಂದುವರಿದಿತ್ತು. ಪಾಕಿಸ್ತಾನದ ದಾಳಿಯಲ್ಲಿ ಭಾರತದ 11 ಜನರು ಮೃತಪಟ್ಟಿದ್ದರು.

‘ಪಾಕಿಸ್ತಾನದ ಸೇನೆಯು ಫಿರಂಗಿಗಳನ್ನು ಬಳಸಿ ದಾಳಿ ನಡೆಸಿದ್ದರಿಂದ ವಿಪರೀತ ಹಾನಿಯಾಗಿದೆ. ಜನ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಇದರಿಂದ ಹಲವು ಮನೆಗಳು ಧ್ವಂಸವಾಗಿವೆ. ನಾಗರಿಕರೂ ಮೃತಪಟ್ಟಿದ್ದಾರೆ. ಪಾಕಿಸ್ತಾನ ಸೇನೆಯು ಮಾನವ ಹಕ್ಕುಗಳಿಗೆ ಧಕ್ಕೆ ತಂದಿದೆ’ ಎಂದು ರಾಜೇಶ್ ಮಿಶ್ರಾ ಹೇಳಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಬಿಎಸ್‌ಎಫ್‌ನ ಒಬ್ಬ ಯೋಧನಿಗೆ ಅಂತಿಮ ನಮನ ಸಲ್ಲಿಸುವ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ.

‘ಭಾರತದ ಒಳಕ್ಕೆ ನುಸುಳುವುದಕ್ಕಾಗಿ ಎಲ್‌ಒಸಿಯಿಂದ ಆ ಕಡೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 300 ಉಗ್ರರು ಕಾಯುತ್ತಿದ್ದಾರೆ. ಚಳಿಗಾಲ ತೀವ್ರವಾಗುವ ಮುನ್ನ ಅವರು ನುಸುಳಲು ಯತ್ನಿಸಲಿದ್ದಾರೆ. ಆದರೆ, ಈ ಯತ್ನವನ್ನು ವಿಫಲ ಮಾಡಲು ಬಿಎಸ್‌ಎಫ್‌ನ ಯೋಧರು ಸಿದ್ಧರಿದ್ದಾರೆ. ಗುರುವಾರದ ದಾಳಿಯ ವೇಳೆಯಲ್ಲೂ ಉಗ್ರರು ನುಸುಳಲು ಯತ್ನಿಸಿದ್ದರು. ಆ ಯತ್ನವನ್ನು ಬಿಎಸ್‌ಎಫ್‌ ಯೋಧರು ವಿಫಲಗೊಳಿಸಿದರು’ ಎಂದು ಅವರು ಹೇಳಿದ್ದಾರೆ.

ಕದನ ವಿರಾಮ ಉಲ್ಲಂಘನೆ: ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲೇ ಪಾಕಿಸ್ತಾನ ಸೇನೆಯು ಎಲ್‌ಒಸಿಯಲ್ಲಿ ಪದೇಪದೇ ಕದನ ವಿರಾಮ ಉಲ್ಲಂಘಿಸಿದೆ. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಮೂಲಗಳು ಹೇಳಿವೆ.

‘ಮಾತುಕತೆ ಸಾಧ್ಯವಿಲ್ಲ’: ಕಾಶ್ಮೀರದ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಮುಂದಾಗಬೇಕು ಎಂದು ಜಮ್ಮು-ಕಾಶ್ಮೀರದ ಪಕ್ಷಗಳ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್’ (ಪಿಎಜಿಡಿ) ನಾಯಕರು ನೀಡಿದ್ದ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

‘ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಚುಂಗ್ರೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು