ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಹಿತಕ್ಕೆ ಸಮಾಜ ಒಡೆಯಬೇಡಿ: ಮುರುಗೇಶ ನಿರಾಣಿಗೆ ಪಂಚಮಸಾಲಿ ಶ್ರೀ ಎಚ್ಚರಿಕೆ

‘ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಮೂರನೇ ಪೀಠ ಸ್ಥಾಪನೆಗೆ ಹೊರಟ ನಿರಾಣಿ’
Last Updated 22 ಜನವರಿ 2022, 18:22 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಂತ ಹಿತಕ್ಕೆ ಸಮಾಜ ಒಡೆಯಲು ಮುಂದಾದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರಿಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನೀವು ಶಾಸಕ, ಮಂತ್ರಿ ಅಥವಾ ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕಾಗಿ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗೊಂದು ಪೀಠ ಮಾಡಿಕೊಳ್ಳಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ. ಆದರೆ, ನಿಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಂಡರೆ ಸರಿ ಇರುವುದಿಲ್ಲ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.

‘ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರನ್ನು ಸೂಚಿಸಬೇಕೆಂದು ಎಂದು ನಿರಾಣಿ ಕೋರಿದ್ದರು. ಸಮುದಾಯದ ಮೂವರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಿ ಎಂದು ನಾವು ಹೇಳಿದ್ದೆವು. ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ಯಾವಾಗ ಕೈ ತಪ್ಪಿತೊ ಅಂದಿನಿಂದ ನಮ್ಮ ಮೇಲೆ ಮುನಿಸಿಕೊಂಡು ಮೂರನೇ ಪೀಠ ಸ್ಥಾಪಿಸುವ ಯತ್ನ ನಡೆಸಿದ್ದಾರೆ. ಇದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಹೇಳಿಕೊಂಡಿದ್ದಾರೆ. ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡಲು ಮೂರನೇ ಪೀಠ ಸ್ಥಾಪನೆ ಆಯಿತೇ’ ಎಂದೂ ಅವರು ಪ್ರಶ್ನಿಸಿದರು.

‘ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸಲು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ್ ಹೀಗೆ ಎಲ್ಲರೂ ಸೇರಿಕೊಂಡು ಹೋರಾಟ ಮಾಡಿದ್ದೇವೆ. ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕರೆ ಜಯಮೃತ್ಯುಂಜಯಸ್ವಾಮೀಜಿ, ಯತ್ನಾಳ ಮತ್ತು ಕಾಶಪ್ಪನವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಆತಂಕ ನಿರಾಣಿ ಅವರದ್ದಾಗಿದೆ. ಅದಕ್ಕಾಗಿ ಮೂರನೇ ಪೀಠ ಸ್ಥಾಪಿಸಲು ಮುಂದಾಗಿದ್ದಾರೆ. ನೀವು ಮೂರನೇ ಪೀಠ ಪ್ರಾರಂಭಿಸಿದರೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

‘ಸಮುದಾಯದ ಅನೇಕ ಹಿರಿಯರು ತ್ಯಾಗ, ಬಲಿದಾನ ಮಾಡಿ ಪಂಚಮಶಾಲಿ ಪೀಠವನ್ನು ಕಟ್ಟಿದ್ದಾರೆ. ಸಮುದಾಯದ ಒಗ್ಗಟ್ಟಿಗಾಗಿ ಅನೇಕರು ಶ್ರಮಿಸಿದ್ದಾರೆ. ಮೀಸಲಾತಿ ಹೋರಾಟಕ್ಕೆ ಎಲ್ಲ ಶಾಸಕರೂ ಬೆಂಬಲವಾಗಿ ನಿಂತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ ನ್ಯಾಯ ಕೊಡುವ ಭರವಸೆ ಇದೆ’ ಎಂದು ಹೇಳಿದರು.

‘ನೀವು ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ತಕರಾರು ಇಲ್ಲ. ನಿಮ್ಮ ಹಣೆಬರಹದಲ್ಲಿ ಅದು ಬರೆದಿದ್ದರೆ ಆಗಿಯೇ ಆಗುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲಾಗದು. ಸ್ವಂತ ಹಿತಾಸಕ್ತಿಯ ನಿಮ್ಮ ಚಟುವಟಿಕೆಗಳನ್ನು ಕೈಬಿಡಿ. ಎಲ್ಲರೂ ಕಷ್ಟಪಟ್ಟು ಒಗ್ಗೂಡಿಸಿರುವ ಸಮುದಾಯವನ್ನು ಒಡೆಯುವ ಕೆಲಸವನ್ನು ನಿಲ್ಲಿಸಿ’ ಎಂದು ಸ್ವಾಮೀಜಿ ಅವರು ಮನವಿ ಮಾಡಿದರು.

‘ಮೊದಲು ಸಚಿವ ಸ್ಥಾನ ಉಳಿಸಿಕೊಳ್ಳಿ’

‘ಮುಖ್ಯಮಂತ್ರಿ ಆಗಲು ಹೊರಟಿರುವ ಮುರುಗೇಶ ನಿರಾಣಿ, ಆ ಉದ್ದೇಶಕ್ಕಾಗಿ ಅದಕ್ಕಾಗಿ ಮೂರನೇ ಪೀಠ ಸ್ಥಾಪಿಸುತ್ತಿದ್ದಾರೆ. ನೀವು ಮುಖ್ಯಮಂತ್ರಿ ಆಗುವುದು ಇರಲಿ, ಮೊದಲು ನಿಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಿ’ ಎಂದು ಅಖಿಲ ಭಾರತ ಪಂಚಮಶಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.

‘ಸಂಪುಟದಿಂದ ಕೈ ಬಿಡಬಹುದೆಂಬ ಭಯದಿಂದಾಗಿ ಮೂರನೇ ಪೀಠ ಸ್ಥಾಪಿಸಲು ನಿರಾಣಿ ಹೊರಟಿದ್ದಾರೆ. ಸಚಿವರಾಗುವುದಕ್ಕಾಗಿ ಕೂಡಲಸಂಗಮ ಪೀಠ, ಹರಿಹರ ಪೀಠವನ್ನು ಬಳಸಿಕೊಂಡರು. ಎರಡೂ ಪೀಠಗಳು ಕೈಬಿಟ್ಟಿದ್ದರಿಂದ ಮೂರನೇ ಪೀಠ ರಚನೆಗೆ ಮುಂದಾಗಿದ್ದಾರೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸಮುದಾಯ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.

‘ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪಿಸಿದರೆ ತಪ್ಪೇನಲ್ಲ’

ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಯ ವಿಷಯ ನನಗೆ ಗೊತ್ತಿಲ್ಲ. ಹಾಗೊಂದು ವೇಳೆ ಸಮಾಜದ ಮುಖಂಡರು ಈ ಬಗ್ಗೆ ತೀರ್ಮಾನ ಮಾಡಿದ್ದರೆ ಅದು ತಪ್ಪೇನಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳುಬೆಂಗಳೂರಿನಲ್ಲಿ ತಮ್ಮ ಬಗ್ಗೆ ನೀಡಿರುವ ಹೇಳಿಕೆಗೆ ನಿರಾಣಿ ಅವರು, ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ದೊಡ್ಡ ಸಮಾಜವಾಗಿದ್ದು, ಈಗಿರುವ ಎರಡು ಪೀಠಗಳ ಶ್ರೀಗಳಿಗೆ ಇಡೀ ರಾಜ್ಜದಲ್ಲಿ ಸಮಾಜದ ಜನರಿಗೆ ಸ್ಪಂದಿಸಲು ಆಗುವುದಿಲ್ಲ. ಸಮಾಜದ ಎಲ್ಲರಿಗೂ ಶ್ರೀಗಳ ಲಭ್ಯತೆ ಆಗಬೇಕಾದಲ್ಲಿ ಇನ್ನೊಂದು ಪೀಠದ ಅವಶ್ಯಕತೆಯಿದೆ ಎಂಬುದನ್ನು ಸಮಾಜದ ಮುಖಂಡರು ಅರಿತು ಈ ಬಗ್ಗೆ ತೀರ್ಮಾನಿಸಿರಬಹುದು ಎಂದರು.

ಈ ಬಗ್ಗೆ ಯಾರೂ ಅಸಮಾಧಾನ ಪಡುವುದು ಬೇಡ. ಎಲ್ಲರೂ ಸೇರಿ ಹೊಸ ಪೀಠವನ್ನು ಬೆಳೆಸುವ ಕೆಲಸ ಮಾಡಬೇಕೇ ಹೊರತು ಟೀಕೆ-ಟಿಪ್ಪಣೆ ಮಾಡುವುದು ಬೇಡ ಎಂದು ಹೇಳಿದರು.

ಸಮಾಜದ ಬೆಳವಣಿಗೆಯಲ್ಲಿ ಎಲ್ಲ ಪೀಠಗಳೂ ಕೆಲಸ ಮಾಡಬೇಕು. ಅದು ಬೇರೆ ಇದು ಬೇರೆ ಎನ್ನುವುದು ಸಲ್ಲದು. ಆದರೆ 3ನೇ ಪೀಠದ ವಿಷಯದಲ್ಲಿ ಸುಖಾಸುಮ್ಮನೆ ನನ್ನ ಹೆಸರು ಮುಂದೆ ಮಾಡಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದ ಅವರು, ನಾನು ಯಾವತ್ತೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಯಾರು ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ನಾನೂ ಬಾಗಲಕೋಟೆ, ವಿಜಯಪುರ ಜಿಲ್ಲೆಯ ನೀರು ಕುಡಿದಿದ್ದು ಎಲ್ಲವೂ ಗೊತ್ತಿದೆ. ಯಾರೋ ಏನೋ ಮಾತಾಡ್ತಾರೆ ಅಂದ್ರೆ ಉತ್ತರ ಕೊಡೋದಕ್ಕೆ ಆಗೋದಿಲ್ಲ ಎಂದು ಹೇಳಿದರು.

ಸಿಎಂ.ಕನಸು ಇಲ್ಲ: ನಾನು ಮುಖ್ಯಮಂತ್ರಿಯಾಗೋದಕ್ಕೆ ಹಾಗೂ ಸಚಿವನಾಗೋದಕ್ಕೆ ಈ ರೀತಿ ಸಮಾಜವನ್ನು ನಡೆಸಿಕೊಳ್ಳುತ್ತಿದ್ದೇನೆ ಎನ್ನುವುದು ಸರಿಯಲ್ಲ. ನಾನು ಸಿಎಂ ಆಗುವ ಕನಸು ಕಂಡವನಲ್ಲ. ಇದಕ್ಕಾಗಿ ಯಾರಿಂದಲೂ ಏನನ್ನೂ ಅಪೇಕ್ಷೆ ಪಟ್ಟಿಲ್ಲ. ಸಮಾಜದ ವಿಷಯದಲ್ಲಿ ನಾನು ತಪ್ಪು ಮಾಡಿದ್ದರೆ ಆ ಬಗ್ಗೆ ಹೇಳಿದರೆ ನಾನು ತಪ್ಪು ತಿದ್ದಿಕೊಂಡು ಕೆಲಸ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT