ಭಾನುವಾರ, ಏಪ್ರಿಲ್ 18, 2021
25 °C
ಪಿಇಎಸ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ

ವಿದ್ಯಾರ್ಥಿಗಳ ಉಪಗ್ರಹ ‘ಸಿಂಧುನೇತ್ರ’ ನಭಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದ ಕಿರು ಉಪಗ್ರಹವನ್ನು (ಆರ್‌ಎಸ್‌ಎಟಿ) ಆಂಧ್ರಪ್ರದೇಶದಲ್ಲಿನ ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಎಚ್‌ಎಆರ್‌) ಭಾನುವಾರ ಮಧ್ಯಾಹ್ನ 1ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು.

ಈ ಉಪಗ್ರಹಕ್ಕೆ ‘ಸಿಂಧುನೇತ್ರ’ ಎಂದು ಹೆಸರಿಡಲಾಗಿದ್ದು, ಪ್ರಾಥಮಿಕ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಪಿಇಎಸ್‌ ತಂಡದಲ್ಲಿನ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈದರಾಬಾದ್‌ನಲ್ಲಿರುವ ಇಸ್ರೊದ ನಿಯಂತ್ರಣ ಕೇಂದ್ರವು ಈ ಉಪಗ್ರಹ ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಆರ್‌ಎಸ್‌ಎಟಿಯಿಂದ ಸಂದೇಶಗಳು ಬಂದಿವೆ. ಉಪಗ್ರಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಟರಿ ಸಾಮರ್ಥ್ಯ ಉತ್ತಮವಾಗಿದೆ’ ಎಂದು ಅವರು ಹೇಳಿದರು.

‘ಉಪಗ್ರಹವು ನಿಗದಿತ ಕಕ್ಷೆ ಸೇರಿದ್ದರ ಬಗ್ಗೆ ಮಂಗಳವಾರ (ಮಾ.1) ಮಾಹಿತಿ ಗೊತ್ತಾಗುತ್ತದೆ. ಸಂಪೂರ್ಣ ಕಾರ್ಯಾಚರಣೆಯನ್ನೂ ಮಂಗಳವಾರದಿಂದಲೇ ಪ್ರಾರಂಭಿಸಲಿದೆ’ ಎಂದು ಅವರು ಹೇಳಿದರು.

ಪಿಇಎಸ್‌ನ ಡಾ. ಸಾಂಬಶಿವ ರಾವ್ ಮತ್ತು ಡಾ. ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೆರವಿನಿಂದ ಈ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದಾರೆ. ಡಿಆರ್‌ಡಿಒ ಈ ಕಾರ್ಯಕ್ಕೆ ₹2.2 ಕೋಟಿ ಧನಸಹಾಯ ನೀಡಿದೆ.

ವಿದ್ಯಾರ್ಥಿಗಳಾದ ಎಂ. ಯೋಗೇಶ್, ಪರ್ವೇಜ್ ಮಹಮ್ಮದ್‌, ಕಾವ್ಯಶ್ರೀ, ಅಜಿತ್ ಕುಮಾರ್‌, ಮಹಾಂತೇಶ್, ಅಬ್ದುಲ್‌, ಅಭಿರಾಮಿ ಉಪಗ್ರಹ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.

‘ಸಿಂಧುನೇತ್ರ’ ಉಡಾವಣೆಯು ಯಶಸ್ವಿಯಾಗಿದ್ದು, ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿಜ್ಞಾನ ದಿನದಂದೇ ಕಾಲೇಜಿನ ಈ ತಂಡ ಇಂತಹ ವಿಶಿಷ್ಟ ಸಾಧನೆ ಮಾಡಿರುವುದು ಅಭಿನಂದನಾರ್ಹ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು