ಸೋಮವಾರ, ಮಾರ್ಚ್ 27, 2023
22 °C
ತಹಶೀಲ್ದಾರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ

‘ಪಿಂಜಾರರಿಗೆ ದೊರಕದ ನೈಜ ಮೀಸಲಾತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರದ ಸ್ಪಷ್ಟ ಆದೇಶವಿದ್ದರೂ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಪಿಂಜಾರ, ನದಾಫ್‌ ಸಮುದಾಯಕ್ಕೆ ಪ್ರವರ್ಗ 1ರ ಮೀಸಲಾತಿ ಪ್ರಮಾಣಪತ್ರ ನೀಡದ ತಹಶೀಲ್ದಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಮುಖಂಡರು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘ ಹಮ್ಮಿಕೊಂಡಿದ್ದ 30ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ದಕ್ಷಿಣ ಜಿಲ್ಲೆಗಳ ಸಮಾವೇಶದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಜಿ.ಡಿ.ನದಾಫ್‌, ಪಿಂಜಾರರನ್ನು 1996ರಲ್ಲೇ ಪ್ರವರ್ಗ 1ಕ್ಕೆ ಸೇರಿಸಲಾಗಿದೆ. ಆದರೆ, ಹಲವೆಡೆ ಪ್ರವರ್ಗ 2ಬಿ ಪ್ರಮಾಣಪತ್ರ ನೀಡುತ್ತಿದ್ದಾರೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ನಂತರ ಕಳೆದ ಅಕ್ಟೋಬರ್‌ನಲ್ಲೇ ಮರು ಆದೇಶ ಹೊರಡಿಸಲಾಗಿದೆ. ಆದರೂ, ಸಮಸ್ಯೆ ಮುಂದುವರಿದಿದೆ ಎಂದರು. 

ಶೈಕ್ಷಣಿಕವಾಗಿಯೂ ಹಿಂದುಳಿದ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಪಿಂಜಾರರು ಯಾವ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ. ಸಮುದಾಯದ ಇಬ್ಬರಿಗಾದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ಅಂತಹ ರಾಜಕೀಯ ಪಕ್ಷಗಳನ್ನೇ ಬೆಂಬಲಿಸಲಾಗುವುದು ಎಂದು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.  

ಶಾಸಕ ಉದಯ ಬಿ. ಗರುಡಾಚಾರ್, ‘ಪಿಂಜಾರರು ನೇಯ್ಗೆ, ಹಾಸಿಗೆ ದುರಸ್ತಿ ಕಾರ್ಯ ಮಾಡಿಕೊಂಡು ಜೀವನ ನಡೆಸುವ ಸಮುದಾಯ. ಪ್ರವರ್ಗ 1ರಲ್ಲಿ ಪರಿಗಣಿಸಲು ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು. ಮಾಜಿ ಕೇಂದ್ರ ಸಚಿವ ಕೆ.ರೆಹಮಾನ್‌ ಖಾನ್‌, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಂಘದ ಅಧ್ಯಕ್ಷ ಜಲೀಲ್ ಸಾಬ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಾದಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎನ್.ದ್ವಾರಕಾನಾಥ್‌, ಸಂಘದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಡಿ ಮುನಾಫ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು