ಹಿರೀಸಾವೆ (ಹಾಸನ ಜಿಲ್ಲೆ): ‘ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ವ್ಯಕ್ತಿಗೆ (ಫೈಟರ್ ರವಿ) ಪ್ರಧಾನಿ ನರೇಂದ್ರ ಮೋದಿ ತಲೆಬಾಗಿ ನಮಸ್ಕಾರ ಮಾಡಿದ್ದಾರೆ. ಇದನ್ನು ನೋಡಿದರೆ ಬಿಜೆಪಿ ಎಂತಹ ಪರಿಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಇಲ್ಲಿ ಪಂಚರತ್ನ ರಥಯಾತ್ರೆ ವೇಳೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಬಂದಿದ್ದರಿಂದ ನಮಗೆ ಯಾವುದೇ ತಳಮಳ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಯಾವುದೇ ಸರಕಿಲ್ಲ. ಎಚ್.ಡಿ.ದೇವೇಗೌಡರು ಮತ್ತು ನಾನು ಅಧಿಕಾರದಲ್ಲಿದ್ದಾಗ ಯಾವುದೇ ಹಗರಣ ಮಾಡಿಲ್ಲ’ ಎಂದು ಹೇಳಿದರು.
‘ಉರಿಗೌಡ, ನಂಜೇಗೌಡ ಎನ್ನುವವರು ಟಿಪ್ಪುವನ್ನು ಕೊಂದರು ಎಂಬ ವಿಚಾರಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿಲ್ಲ. ಬಿಜೆಪಿ ಹೆಸರು ಹೇಳುವ ಮೂಲಕ ಕೀಳು ರಾಜಕೀಯ ಮಾಡುತ್ತಿದೆ. ಬಿಜೆಪಿ ನಾಯಕರು ಇದನ್ನು ಮುಂದುವರಿಸಿದರೆ, ಒಕ್ಕಲಿಗರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ’ ಎಂದು ಗುಡುಗಿದರು. ‘ಸಂಸದೆ ಸುಮಲತಾ ಅಂಬರೀಶ್ ಪ್ರಧಾನಿ ನರೇಂದ್ರ ಮೋದಿಗೆ ಬೆಲ್ಲ ಕೊಟ್ಟಿದ್ದಾರೆ. ಈ ಮೂಲಕವಾದರೂ ಮಂಡ್ಯ ಜಿಲ್ಲೆಗೆ ಒಳ್ಳೆಯ ಯೋಜನೆ ಬರಲಿ’ ಎಂದು ಆಶಿಸಿದರು.
ಹಾಸನ ಟಿಕೆಟ್: ‘ಪಕ್ಷದ ಕಾರ್ಯಕರ್ತರನ್ನೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಡಲು ಆದ್ಯತೆ ಕೊಡುತ್ತೇವೆ. ಮಾರ್ಚ್ 18ರೊಳಗೆ ಅಭ್ಯರ್ಥಿ ಗೊಂದಲ ಬಗೆಹರಿಯುತ್ತದೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.