ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮೋಡಿ: ಕರಾವಳಿಯಲ್ಲಿ ಅಭಿಮಾನದ ಅಲೆ

Last Updated 2 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಶುಕ್ರವಾರ ನಡೆದ ನವಮಂಗಳೂರು ಬಂದರಿನ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕರಾವಳಿಯ ಜನತೆ ಹೊಂದಿರುವ ಅಭಿಮಾನದ ಪರಾಕಾಷ್ಠೆಯ ಪ್ರದರ್ಶನಕ್ಕೆ ವೇದಿಕೆಯಾಯಿತು. ನಗರದ ತುಂಬಾ ಮೋದಿ ‘ಅಭಿಮಾನದ ಅಲೆ’ ಉಕ್ಕಿ ಹರಿಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಮಾತ್ರವಲ್ಲ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಕಾಸರಗೋಡು ಜಿಲ್ಲೆಗಳಿಂದಲೂ ಮೋದಿ ಅವರ ಅಭಿಮಾನಿಗಳು ತಂಡೋಪ‍ತಂಡವಾಗಿ ಬಂದಿದ್ದರು.

ಜಿಲ್ಲಾಡಳಿತವು ವಿವಿಧ ಯೋಜನೆಗಳ ಸಾವಿರಾರು ಸಂಖ್ಯೆಯ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆಸಿತ್ತು. ಇನ್ನೊಂದೆಡೆ ಬಿಜೆಪಿ ಮುಖಂಡರು ಮನೆಗೆ ಮನೆಗೆ ತೆರಳಿ ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸಿದ್ದರು. ಶುಕ್ರವಾರ ಮುಂಜಾನೆಯಿಂದಲೇ ನಗರದತ್ತ ಮೋದಿ ಅಭಿಮಾನಿಗಳು ಬರಲಾರಂಭಿಸಿದ್ದರು. ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಬಂಗ್ರಕೂಳೂರನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ದೂರದ ಊರುಗಳಿಂದ ಜನರನ್ನು ಕರೆತಂದಿದ್ದ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು.

ಎಲ್ಲೆಲ್ಲೂ ಕೇಸರಿ: ನಗರದ ರಸ್ತೆಗಳೆಲ್ಲವೂ ಕೇಸರಿಮಯಗಿದ್ದವು. ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿ ಶಾಲು, ಕೇಸರಿ ರುಮಾಲು, ಕೇಸರಿ ಪೇಟಗಳೇ ರಾರಾಜಿಸುತ್ತಿದ್ದವು. ಅಭಿಮಾನ ಪ್ರದರ್ಶಿಸಲು ಕೆಲವರು ಮೋದಿ ಅವರ ಭಾವಚಿತ್ರ ಇರುವ ಟೀ–ಶರ್ಟ್‌ಗಳನ್ನು ಧರಿಸಿ ಬಂದಿದ್ದರು. ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದವರ ಕೈಯಲ್ಲಿ ಭಾರಿ ಗಾತ್ರದ ಕೇಸರಿ ಬಾವುಟಗಳು ಹಾರಾಡುತ್ತಿದ್ದವು. ಸಾವರ್ಕರ್‌ ಹಾಗೂ ಶಿವಾಜಿಯ ಭಾವಚಿತ್ರಗಳಿದ್ದ ಧ್ವಜಗಳೂ ನಡು ನಡುವೆ ಹಾರಾಡಿದವು.

ಬಿಸಿಲಿನ ಝಳ ಜೋರಾಗಿದ್ದರೂ ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳ ಉತ್ಸಾಹ ಎಳ್ಳಿನಿತೂ ಕಡಿಮೆಆಗಿರಲಿಲ್ಲ. ಕೆಲವರಂತೂ ಒಂದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳನ್ನೂ ಜೊತೆಯಲ್ಲಿ ಕರೆತಂದಿದ್ದರು. 80 ವರ್ಷ ದಾಟಿದವರೂ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಕಾರ್ಯಕ್ರಮಕ್ಕೆ ಬಂದಿದ್ದರು.

ಕಾರ್ಯಕ್ರಮಕ್ಕೆ ಕೊಟ್ಟಾರ ಚೌಕಿಯ 83 ವರ್ಷದ ಕೃಷ್ಣ ನಾವಡ ಅವರನ್ನು ಅಳಿಯ ಕರೆ ತಂದಿದ್ದರು. ಅವರು ಗಣ್ಯರ ಪಾಸ್‌ ಹೊಂದಿದ್ದರೂ, ಸಭಾಂಗಣ ತುಂಬಿದ್ದರಿಂದ ಅವರಿಗೆ ಒಳಗೆ ಹೋಗಲು ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಅವರು ಪರಿಪರಿಯಾಗಿ ಬೇಡಿಕೊಂಡ ಬಳಿಕ ಸಭಾಂಗಣದೊಳಗೆ ಹೋಗಲು ಭದ್ರತಾ ಸಿಬ್ಬಂದಿ ಅನುವು ಮಾಡಿಕೊಟ್ಟರು.

ಪುತ್ತೂರಿನ ಅಜ್ಜಿ ದುರ್ಗಾ ಅವರು ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಂಬಲವನ್ನು ಬಿಜೆಪಿ ಮುಖಂಡರ ಬಳಿ ತೋಡಿಕೊಂಡಿದ್ದರು. ’ದುರ್ಗ ಅವರು ನಿತ್ಯವೂ ಪಕ್ಷದ ಕಚೇರಿಗೆ ಬಂದು ಗಣ್ಯರ ಪಾಸ್‌ ಕೊಡಿಸುವಂತೆ ಕೋರುತ್ತಿದ್ದರು. ಅವರಿಗೆ ಪಾಸ್‌ ಕೊಡಿಸಿ ಕಾರ್ಯಕ್ರಮಕ್ಕೆ ಕರೆತಂದಿದ್ದೇವೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ: ಕಾರ್ಯಕ್ರಮಕ್ಕೆ ಪ್ರವೇಶ ಸಿಗದಿದ್ದುದಕ್ಕೆ ಮೋದಿ ಅಭಿಮಾನಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತರು.

‘ನಾವು ಮೋದಿ ಅವರನ್ನು ನೋಡುವ ಆಸೆಯಿಂದ ಧರ್ಮಸ್ಥಳದಿಂದ ಬಂದಿದ್ದೇವೆ. ಸ್ವಲ್ಪ ತಡವಾಯಿತು ಎಂಬ ಕಾರಣಕ್ಕೆ ಸಭಾಂಗಣದೊಳಗೆ ಬಿಡದಿದ್ದರೆ ಹೇಗೆ’ ಎಂದು ಶಿಲ್ಪಾ ಬೇಸರ ತೋಡಿಕೊಂಡರು.

ಸಭಾಂಗಣದಲ್ಲಿ ಶಕ್ತಿನಗರ ಪದವು ಪ್ರದೇಶದ ಆಶಾ ಕಾರ್ಯಕರ್ತೆ ಸುಮಲತಾ ಕುಸಿತು ಬಿದ್ದರು. ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು.

ಕಾರ್ಯಕ್ರಮ ಮುಗಿದ ಬಳಿಕ ಸಭಿಕರು ನಿರ್ಗಮಿಸುವಾಗ ಜನಜಂಗುಳಿಯಲ್ಲಿ ಸಿಲುಕಿದ ಮಹಿಳೆಯೊಬ್ಬರು ಬಿದ್ದು ಕೈಗೆ ಏಟಾಯಿತು. ಅವರನ್ನು ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಯಿತು.

ಸಿಗದ ಪ್ರವೇಶ–ಪೊಲೀಸರ ವಿರುದ್ಧ ಆಕ್ರೋಶ

ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸಭಾಂಗಣದ ಅಷ್ಟು ಆಸನಗಳು ಮಧ್ಯಾಹ್ನ 11 ಗಂಟೆಯಾಗುವಷ್ಟರಲ್ಲಿ ಭರ್ತಿಯಾಗಿದ್ದವು. 12 ಗಂಟೆ ನಂತರ ಗಣ್ಯರ (ವಿಐಪಿ) ಪಾಸ್‌ ಇದ್ದವರನ್ನೂ ಸಭಾಂಗಣದ ಒಳಗೆ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಮೋದಿ ಅವರನ್ನು ನೋಡಲು 70–80 ಕಿ.ಮೀ ದೂರದಿಂದ ಬಂದಿದ್ದ ಅಭಿಮಾನಿಗಳಿಗೆ ಇದರಿಂದ ಬೇಸರ ಉಂಟಾಯಿತು.

ಪಾಸು ಹೊಂದಿದ್ದವರನ್ನೂ ಸಭಾಂಗಣದ ಒಳಗೆ ಬಿಟ್ಟುಕೊಳ್ಳದೇ ಇದ್ದುದು ಕೆಲವು ಅಭಿಮಾನಿಗಳ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿತು. ಕೆಲ ಯುವಕರಂತೂ ಈ ವಿಚಾರವಗಿ ಪೊಲೀಸರ ಜೊತೆ ಜಗಳಕ್ಕಿಳಿದರು. ಈ ವೇಳೆ ಕೆಲವು ಭದ್ರತಾ ಸಿಬ್ಬಂದಿ ಲಾಠಿ ತೋರಿಸಿ ಗದರಿದ್ದು, ಯುವಕರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು. ಅವರು ಪೊಲೀಸ್‌ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ಮೋದಿ ಅವರಿಗೆ ಜೈಕಾರ ಕೂಗುತ್ತ ಗದ್ದಲವೆಬ್ಬಿಸಿದ ಯುವಕರ ತಂಡ ಏಕಾಏಕಿ, ‘ಪೊಲೀಸರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಲು ಶುರುಹಚ್ಚಿಕೊಂಡಿತು.

ಕೆಲವರಂತೂ ಬ್ಯಾರಿಕೇಡ್‌ಗಳನ್ನು ತಳ್ಳಿ ಸಭಾಂಗಣದ ಒಳಗೆ ಪ್ರವೇಶಿಸಲು ಯತ್ನಿಸಿದರು. ಆದರೆ ಇಂದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಅಭಿಮಾನಿಗಳನ್ನು ಸಮಾಧಾನಪಡಿಸಿದರು.

ಪ್ರಧಾನಿ ಅವರು ಸಭಾಂಗಣದಿಂದ ನಿರ್ಗಮಿಸುವ ಸಂದರ್ಭದಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಕ್ಕೆ ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್‌) ಸಿಬ್ಬಂದಿಯನ್ನು ಹಾಗೂ ಜಲಫಿರಂಗಿಗಳನ್ನು ತರಿಸಲಾಯಿತು. ಭಾರಿ ಗಾತ್ರದ ಹಗ್ಗವನ್ನು ತರಿಸಿ ಅಭಿಮಾನಿಗಳು ರಸ್ತೆಗೆ ನುಗ್ಗದಂತೆ ತಡೆಯಲಾಯಿತು.

ಹಾದಿಯುದ್ದಕ್ಕೂ ‘ಮೋದಿ... ಮೋದಿ...’

ಸಭಾಂಗಣಕ್ಕೆ ಪ್ರವೇಶ ಸಿಗದ ಅಭಿಮಾನಿಗಳು ಬಂಗ್ರಕೂಳೂರಿನಿಂದ ಪಣಂಬೂರಿನವರೆಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾಲುಗಟ್ಟಿ ನಿಂತಿದ್ದರು. ಕಾರ್ಯಕ್ರಮ ಮುಗಿಸಿ ನಿರ್ಗಮಿಸುವಾಗ ಪ್ರಧಾನಿ ಮೋದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಬಿಮಾನಿಗಳತ್ತ ಕೈಬೀಸಿದರು. ಮೋದಿ ಅವರ ಮುಖ ದರ್ಶನವಾಗುತ್ತಿದ್ದಂತೆಯೇ ಅಭಿಮಾನಿಗಳು ಕೇಕೆ ಹಾಕಿ ಪುಳಕ ಅನುಭವಿಸಿದರು. ಹಾದಿಯುದ್ದಕ್ಕೂ ‘ಮೋದಿ... ಮೋದಿ...’, ಹರ್ ಹರ ಮೋದಿ– ಘರ್‌ ಘರ್‌ ಮೋದಿ... ಘೋಷಣೆ ಮುಗಿಲು ಮುಟ್ಟಿತ್ತು.

ಮೋದಿ ಅವರು ನಿರ್ಗಮಿಸುವಾಗ ವ್ಯಕ್ತಿಯೊಬ್ಬರು ರಸ್ತೆಗೆ ಜಿಗಿದು ಕೈ ಬೀಸಲು ಯತ್ನಿಸಿದರು. ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದರು.

‘ಗಾಂಧಿ ವೇಷಧಾರಿ’ಗೆ ಸಿಗದ ಪ್ರವೇಶ

ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈನ ಆಗಸ್ಟಿನ್‌ ಡಿ ಆಲ್ಮೆಡಾ ಅವರು ಮಹಾತ್ಮ ಗಾಂಧಿ ವೇಷ ಧರಿಸಿ ಬಂದಿದ್ದರು. ಬಿಜೆಪಿ ಮುಖಂಡರೊಬ್ಬರು ಕಾರಿನಲ್ಲಿ ಅವರನ್ನು ಕರೆತಂದು ಸಭಾಂಗಣದ ಬಳಿ ಬಿಟ್ಟರು. ಆದರೆ, ಅವರ ಬಳಿ ಪಾಸ್‌ ಇರದ ಕಾರಣಸಭಾಂಗಣದ ಪ್ರವೇಶಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ಕಲ್ಪಿಸಲಿಲ್ಲ. ಕಾರ್ಯಕ್ರಮ ಮುಗಿಯುವರೆಗೂ ಅವರು ಗಣ್ಯರ ಪ್ರವೇಶ ದ್ವಾರದ ಬಳಿಯೇ ಕಾದರು.

ಮೋದಿಗೆ ಭಾವಚಿತ್ರ ಕೊಡುವಾಸೆ

ಸುರತ್ಕಲ್‌ನ ಚಿತ್ರ ಕಲಾವಿದ ಹಾಗೂ ಮರಳು ಶಿಲ್ಪ ಕಲಾವಿದ ಪ್ರಸಾದ್‌ ಮೂಲ್ಯ ಅವರು ನರೇಂದ್ರ ಮೋದಿ ಅವರ ಪೆನ್ಸಿಲ್ ಸ್ಕೆಚ್ ತಯಾರಿಸಿದ್ದರು. ಈ ಭಾವಚಿತ್ರಕ್ಕೆ ಫ್ರೇಮ್‌ ಹಾಕಿಸಿ ಅದನ್ನು ಮೋದಿ ಅವರಿಗೆ ನೀಡಬೇಕು ಎಂಬ ಹಂಬಲದೊಂದಿಗೆ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಹಾಗಾಗಿ ಅವರು ಭಾವಚಿತ್ರವನ್ನು ನಿರಾಸೆಯಿಂದಲೇ ಮನೆಗೊಯ್ದರು.

ನಾಪತ್ತೆಯಾದ ಬಾಲಕಿ ಪತ್ತೆ

ಕಾರ್ಯಕ್ರಮಕ್ಕೆ ತಾಯಿ ಜೊತೆ ಬಂದಿದ್ದ 10 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆಕೆಯನ್ನು ಎಸಿಪಿ ಗೀತಾ ಕುಲಕರ್ಣಿ ನೇತೃತ್ವದ ಪೊಲೀಸರ ತಂಡವು ಪತ್ತೆಹಚ್ಚಿ ಪೋಷಕರ ವಶಕ್ಕೆ ಒಪ್ಪಿಸಿದರು.

’ಮಗಳು ಪ್ರಜ್ಞಾ ಮೇಟಿ ಆಹಾರ ಪೊಟ್ಟಣನ ನೀಡುತ್ತಿದ್ದ ಜಾಗಕ್ಕೆ ನನ್ನ ಪತ್ನಿ ದೇವಕಿ ಜೊತೆ ತೆರಳಿದ್ದಳು. ಜನಜಂಗುಳಿಯಲ್ಲಿ ಕಳೆದು ಹೋಗಿದ್ದ ಆಕೆಯನ್ನು ಎಸಿಪಿಯವರ ತಂಡದವರು ಹುಡುಕಿಕೊಟ್ಟರು’ ಎಂದು ಬಾಲಕಿಯ ತಂದೆ, ಕಾವೂರು ನಿವಾಸಿ ಯಮುನಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT