ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಬೀಜ ಖರೀದಿಗೆ ನೂಕು ನುಗ್ಗಲು

ಪೊಲೀಸರಿಂದ ಲಘು ಲಾಠಿ ಪ್ರಹಾರ
Last Updated 14 ಜೂನ್ 2021, 22:24 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ತೋಟಗಾರಿಕೆ ಕಚೇರಿ ಮುಂಭಾಗ ಸೋಮವಾರ ರೈತರು ಮೆಣಸಿನಕಾಯಿ ಬೀಜ ಖರೀದಿಗೆ ಬಂದಿದ್ದ ವೇಳೆ ಏಕಾಏಕಿ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಜಿಲ್ಲಾಡಳಿತ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸಿಜೆಂಟಾ ಕಂಪನಿ ವಿತರಕರು 5531–ತಳಿಯ ಮೆಣಸಿನಕಾಯಿ ಬೀಜವನ್ನು ರೈತರಿಗೆ ವಿತರಿಸುತ್ತಿದ್ದಾಗ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ನಿಯಂತ್ರಿಸಿದರು. ಈ ವೇಳೆ ರೈತರು ದಿಕ್ಕಾಪಾಲಾಗಿ ಓಡಿದರು.

‘ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಬೀಜ ಖರೀದಿಸಲು ಸಾವಿರಾರು ರೈತರು ಬಂದಿದ್ದರು. ಆದರೆ, ಕೆಲವೇ ರೈತರಿಗೆ ಬೀಜ ವಿತರಿಸಿ ಕೌಂಟರ್
ಬಂದ್ ಮಾಡಿದ್ದರು. ಹಳ್ಳಿಯಿಂದ ಬಂದಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ’ ಎಂದು ರೈತರು ಆರೋಪಿಸಿದ್ದಾರೆ.

ವಿಷಯ ತಿಳಿದು ಉಪವಿಭಾಗಾಧಿಕಾರಿ ರಮೇಶ್ ಕೋನರೆಡ್ಡಿ, ತಹಶೀಲ್ದಾರ್ ರೆಹಮಾನ್ ಪಾಷಾ, ಕೃಷಿ ಇಲಾಖೆ ಅಧಿಕಾರಿ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಬೋಗಿಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನ ಪಡಿಸಿದರು.

‘ಪ್ರತಿ ರೈತರಿಗೆ 100 ಗ್ರಾಂ ಮೆಣಸಿನ ಬೀಜ ವಿತರಿಸಲಾಗುತ್ತಿದೆ. ಅದಕ್ಕಾಗಿ ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕೊಡಬೇಕು’ ಎಂದು ತಿಳಿಸಿದ್ದಾರೆ. ಆದರೆ, ಹೆಚ್ಚಿನ ರೈತರಿಗೆ ಈ ವಿಷಯವೇ ಗೊತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT