ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಮನೆ, ಕಚೇರಿ ಮೇಲಿನ ಸಿಬಿಐ ದಾಳಿಗೆ ಕಾಂಗ್ರೆಸ್‌ ನಾಯಕರ ಆಕ್ರೋಶ

Last Updated 5 ಅಕ್ಟೋಬರ್ 2020, 5:05 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದಿರುವ ಸಿಬಿಐ ಅಧಿಕಾರಿಗಳ ದಾಳಿಯನ್ನು ಕಾಂಗ್ರೆಸ್‌ನ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ.

ದಾಳಿಯು ಕುತಂತ್ರದ ಭಾಗ, ಬಿಜೆಪಿಯ ಕಪಟ ಆಟಕ್ಕೆ ಸಿಬಿಐ ಕೈಗೊಂಬೆಯಾಗಿದೆ ಎಂಬ ಖಂಡನೆ ವ್ಯಕ್ತವಾಗಿದೆ.

ಕಪಟ ಆಟದ ಕೈಗೊಂಬೆ ಸಿಬಿಐ: ಸುರ್ಜೆವಾಲ

ಮೋದಿ-ಯಡಿಯೂರಪ್ಪ ಜೋಡಿಯ ಬೆದರಿಕೆ ಮತ್ತು ಕುತಂತ್ರಗಳ ಕಪಟ ಆಟವನ್ನು ‘ಕೈಗೊಂಬೆ’ ಸಿಬಿಐ ಮೂಲಕ ಮಾಡಲಾಗಿದೆ. ಡಿಕೆ ಶಿವಕುಮಾರ್‌ ಅವರ ಮೇಲಿನ ಈ ದಾಳಿಯಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಎಳೆಯನ್ನು ಸಿಬಿಐ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಹುಡುಕಬೇಕು. ಆದರೆ, ‘ರೈಡ್ ರಾಜ್’ ಎಂಬುದು ಅವರ ಏಕೈಕ ಕುತಂತ್ರ. ಇವುಗಳಿಗೆಲ್ಲ ಕಾಂಗ್ರೆಸ್‌ನ ಕಾರ್ಯಕರ್ತರು ಮತ್ತು ನಾಯಕರು ಬಗ್ಗುವುದಿಲ್ಲ ಎಂಬುದನ್ನು ಮೋದಿ, ಯಡಿಯೂರಪ್ಪ ಸರ್ಕಾರಗಳು ಮತ್ತು ಬಿಜೆಪಿ ಹೇಳಿದಂತೆ ನಡೆಯುವ ಸಿಬಿಐ, ಇಡಿ, ಆದಾಯ ತೆರಿಗೆಗೆ ಇಲಾಖೆಗಳು ತಿಳಿಯಲಿ. ಜನರಿಗಾಗಿ ಹೋರಾಡುವ ಮತ್ತು ಬಿಜೆಪಿಯ ದುರಾಡಳಿತವನ್ನು ಜಗಜ್ಜಾಹೀರು ಮಾಡುವ ನಮ್ಮ ಸಂಕಲ್ಪವು ಇನ್ನಷ್ಟು ಸದೃಢವಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌‌ ಸುರ್ಜೆವಾಲ ಟ್ವೀಟ್‌ ಮಾಡಿದ್ದಾರೆ

ದಾಳಿಗೆ ಸಿದ್ದರಾಮಯ್ಯ ಆಕ್ರೋಶ

ಬಿಜೆಪಿ ಪ್ರತೀಕಾರದ ರಾಜಕೀಯದಲ್ಲಿ ನಿರತವಾಗಿದೆ. ಈ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಡಿಕೆ ಶಿವಕುಮಾರ್‌ ಅವರ ಮೇಲೆ ನಡೆದಿರುವ ಇವತ್ತಿನ ಸಿಬಿಐ ದಾಳಿಯು ಉಪಚುನಾವಣೆಯಲ್ಲಿನ ನಮ್ಮ ಸಿದ್ಧತೆಯನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಡಿಕೆಶಿ ಮನೆ ಮೇಲೆ ನರೇಂದ್ರ ಮೋದಿಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಅಭದ್ರತೆ ಕಾಡುತ್ತಿದೆ: ಗೌರವ್ ಗೊಗೊಯಿ

‘ನವೆಂಬರ್ 3ರಂದು ಕರ್ನಾಟಕದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಬಿಜೆಪಿ ಮತ್ತು ಗೃಹ ಸಚಿವರು ತಮ್ಮ ಹಳೆಯ ತಂತ್ರಗಳನ್ನು ಜಾರಿಗೆ ತಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ನಿವಾಸದ ಮೇಲೆ ದಾಳಿ ನಡೆಸಲು ಸಿಬಿಐಗೆ ಆದೇಶಿಸಲಾಗಿದೆ. ಬಿಜೆಪಿಯೊಳಗಿನ ಜಗಳವು ಅವರನ್ನು ಚುನಾವಣೆಯಲ್ಲಿ ಸೋಲಿಸುವಂತೆ ಮಾಡುತ್ತದೆ. ಅವರು ಹತಾಶರಾಗಿದ್ದಾರೆ. ಅವರಿಗೆ ಅಭದ್ರತೆ ಕಾಡುತ್ತಿದೆ,’ ಎಂದು ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT