ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಟ ಸಂಹಾರದಿಂದ ಒಳಿತಾಗಲಿದೆ: ಸಿಎಂ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಯತ್ನಾಳ

Last Updated 30 ಜೂನ್ 2021, 21:46 IST
ಅಕ್ಷರ ಗಾತ್ರ

ಬೆಂಗಳೂರು: ‘ದುಷ್ಟ ಸಂಹಾರ ಆಗಬೇಕು.ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬುಧವಾರ ನಡೆದ ಹಕ್ಕು ಬಾಧ್ಯತಾ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇತಿಹಾಸದಲ್ಲಿ ಆದಿಲ್‌ಶಾಹಿ, ಮೊಗಲ್‌ ಮನೆತನಗಳು ಮೆರೆದಾಡಿ ನಾಶ ಆಗಿ ಹೋಯಿತಲ್ಲ. ಅದೇ ರೀತಿ ಆಗಲಿದೆ’ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದವರನ್ನು ಕುರಿತು ಯತ್ನಾಳ ಈ ಹೇಳಿಕೆ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಪಕ್ಷವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ನಮ್ಮ ಹೋರಾಟ ಶೀಘ್ರವೇ ಫಲಕೊಡಲಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ. ಅದಕ್ಕೆ ಕಾಲ ಕೂಡಿಬರಬೇಕು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಈ ಹಿಂದೆ ನೀಡಿದ ಹೇಳಿಕೆಗೆಈಗಲೂ ಬದ್ಧನಾಗಿದ್ದೇನೆ. ಒಳಗೊಂದು ಹೊರಗೊಂದು ಮಾತನಾಡುವ ಜಾಯಮಾನ ನನ್ನದಲ್ಲ’ ಎಂದರು.

ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ ಎಂದು ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ನಾನೂ ಮುಖ್ಯಮಂತ್ರಿಯ ಮಗ ಆಗಿದ್ದರೆ ಆದೇ ರೀತಿ ಹೇಳಿಕೆ ಕೊಡುತ್ತಿದ್ದೆ’ ಎಂದು ವ್ಯಂಗ್ಯವಾಡಿದರು.

ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಕೆಲವರು ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಅಭಿಪ್ರಾಯ ಸಂಗ್ರಹಿಸಲು ವಿಜಯೇಂದ್ರ ಅವರ ಇಬ್ಬರು ಏಜೆಂಟರು ಇದ್ದಾರೆ. ದಿನ ಬೆಳಗಾದರೆ ಅವರನ್ನು ಹೊಗಳುತ್ತಲೇ ಇರುತ್ತಾರೆ ಎಂದು ಲೇವಡಿ ಮಾಡಿದರು.

‘ಇತ್ತೀಚೆಗೆ ಅರುಣ್‌ಸಿಂಗ್‌ ಅವರು ರಾಜ್ಯಕ್ಕೆ ಬಂದಾಗ ನಾಯಕತ್ವ ಬದಲಾವಣೆ ಇಲ್ಲ ಮತ್ತು ಆ ವಿಷಯ ಚರ್ಚಿಸುವುದಿಲ್ಲ ಎಂದೂ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ಫಲಿತಾಂಶವನ್ನು ಏನಾಗಬಹುದು ಎಂದು ಊಹಿಸಿಯೇ ಅವರ ಭೇಟಿಗೆ ಹೋಗಲಿಲ್ಲ. ಭೇಟಿಯಾದರೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬುದು ಗೊತ್ತಿತ್ತು’ ಎಂದು ಯತ್ನಾಳ ಹೇಳಿದರು.

‘ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಪರೀಕ್ಷೆ ಬರೆದಿದ್ದೇನೆ ಎಂದಿದ್ದಾರೆ. ಅವರು ವರಿಷ್ಠರಿಗೆ ಉತ್ತರ ಪತ್ರಿಕೆ ಕೊಟ್ಟಿದ್ದಾರೋ ಇಲ್ಲವೊ ಗೊತ್ತಿಲ್ಲ. ಕಾಗದದ ಮೂಲಕ ಉತ್ತರ ಕೊಟ್ಟಿದ್ದಾರೋ, ರೌಂಡ್‌ ರೌಂಡ್‌ (ಸಿ.ಡಿ) ಅದನ್ನು ಕೊಟ್ಟಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಪಕ್ಷಕ್ಕೆ ಒಳ್ಳೆಯದಾದರೆ ಸಾಕು’ ಎಂದರು.

‘ಬಿಎಸ್‌ವೈ ಬಗ್ಗೆ ಮಾತನಾಡಿದರೆ ನಾವು ಸುಟ್ಟು ಹೋಗುತ್ತೇವೆ’
ಕೊಪ್ಪಳ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಾಯಿಸಲು ನಾವು ದೆಹಲಿಗೆ ಹೋಗುತ್ತಿಲ್ಲ. ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ಹೋಗುತ್ತೇವೆ. ನನ್ನನ್ನು ಬಿಎಸ್‌ವೈ ವಿರೋಧಿ ಎಂಬಂತೆ ಬಿಂಬಿಸಬೇಡಿ. ಅವರ ಬಗ್ಗೆ ಮಾತನಾಡಿದರೆ ನಾವು ಸುಟ್ಟು ಹೋಗುತ್ತೇವೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೆಲವು ವೈಯಕ್ತಿಕ ಸಮಸ್ಯೆಗಳನ್ನು ವರಿಷ್ಠರ ಮಂದೆ ಹೇಳಿಕೊಂಡಿದ್ದೇನೆ. ಇದಕ್ಕೆ ಪರೀಕ್ಷೆ ಬರೆದಿದ್ದು ಎಂದು ಹೇಳಿದ್ದು, ಫಲಿತಾಂಶಕ್ಕೆ ಕಾಯುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT