ಶುಕ್ರವಾರ, ಅಕ್ಟೋಬರ್ 22, 2021
21 °C

ಕಲ್ಲಿದ್ದಲು ಕೊರತೆಗೆ ಎರಡು ದಿನಗಳಲ್ಲಿ ಪರಿಹಾರ: ವಿ.‌ ಸುನೀಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉಂಟಾಗಿರುವ ಕಲ್ಲಿದ್ದಲು ಕೊರತೆಯ ಸಮಸ್ಯೆ ಒಂದೆರಡು ದಿನಗಳಲ್ಲಿ ಪರಿಹಾರವಾಗಲಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಕೆಪಿಟಿಸಿಎಲ್ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಿರಿಯ ಪವರ್ ಮ್ಯಾನ್‌ಗಳಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಡಿಶಾದ ಮಹಾನದಿ ಗಣಿಯಿಂದ ಕಲ್ಲಿದ್ದಲು ತುಂಬಿಕೊಂಡು ಹೊರಟಿರುವ ಒಂದು ರೇಕ್ ಮಂಗಳವಾರ ರಾಜ್ಯಕ್ಕೆ ತಲುಪಲಿದೆ. ಮತ್ತೊಂದು ರೇಕ್ ಬುಧವಾರ ಬರಲಿದೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ' ಎಂದರು.

ಓದಿ: ಕಲ್ಲಿದ್ದಲು ಕೊರತೆ ನೀಗಿಸಿ, ವಿದ್ಯುತ್‌ ಉತ್ಪಾದಿಸಿ: ಸಿದ್ದರಾಮಯ್ಯ ಒತ್ತಾಯ

ಸದ್ಯ ಹತ್ತು ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿತ್ತು. ಅದನ್ನು 14 ರೇಕ್ ಗಳಿಗೆ ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಮಾಡಲಾಗಿದೆ. ಎರಡು ರೇಕ್ ತಕ್ಷಣ ಬರಲಿದ್ದು, ಇನ್ನೆರಡು ರೇಕ್‌ಗಳನ್ನು ನವೆಂಬರ್ ತಿಂಗಳಲ್ಲಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ಆಗಬಹುದು ಎಂಬ ಆತಂಕವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ ಎಂದರು.

ಕೆಲವು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯ ಅವಧಿಯನ್ನು ತುಸು ಕಡಿಮೆ ಮಾಡಲಾಗಿತ್ತು. ಯಾವುದೇ ಉಷ್ಣ ವಿದ್ಯುತ್ ಸ್ಥಾವರದಲ್ಲೂ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಿರಲಿಲ್ಲ ಎಂದು ತಿಳಿಸಿದರು.

ಓದಿ: ವಿದ್ಯುತ್ ಬಳಕೆ ಇಳಿಕೆ, ಕಲ್ಲಿದ್ದಲು ಕೊರತೆ ಇಲ್ಲ- ಕೇಂದ್ರ ಸಚಿವಾಲಯ ಸ್ಪಷ್ಟನೆ

ಮಹಾರಾಷ್ಟ್ರದ ಮಂದಾಕಿನಿ ಮತ್ತು ಬಾರಂಜಿಯಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಆರಂಭಿಸಲು ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಅದನ್ನು ಕೊಡಿಸುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಲಾಗಿದೆ. ಅನುಮತಿ ದೊರತರೆ ಕಲ್ಲಿದ್ದಲು ತೆಗೆಯಲು ಅಗತ್ಯವಿರುವ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು