ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಬದುಕು ತ್ಯಾಗ ಮಾಡಿದ ಕೋರೆ’

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಮೃತ ಮಹೋತ್ಸವಕ್ಕೆ ಜನಸಾಗರ
Last Updated 16 ಅಕ್ಟೋಬರ್ 2022, 5:19 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಭಾಕರ ಕೋರೆ ಅವರು ಕೆಎಲ್‌ಇ ಸಂಸ್ಥೆಯನ್ನು ಬೆಳೆಸಲು ಎಷ್ಟು ಶ್ರಮ, ಸಮಯ ನೀಡಿದ್ದಾರೋ ಅಷ್ಟೇ ಶ್ರಮ– ಸಮಯವನ್ನು ರಾಜಕಾರಣಕ್ಕೆ ನೀಡಿದ್ದರೆ ದೊಡ್ಡ ಸ್ಥಾನದಲ್ಲಿ ಇರುತ್ತಿದ್ದರು. ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗಾಗಿ ಅವರು ತಮ್ಮ ರಾಜಕೀಯ ಬದುಕನ್ನೇ ತ್ಯಾಗ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ಮಾಡಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ, ನಗರದಲ್ಲಿ ಶನಿವಾರ ಆಯೋಜಿಸಿದ್ದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಏಳು ದಾನಿಗಳು ಸೇರಿ 20ನೇ ಶತಮಾನದಲ್ಲಿ ಈ ಸಂಸ್ಥೆ ಕಟ್ಟಿದ್ದಾರೆ. ಇದು 21ನೇ ಶತಮಾನದ ಶೈಕ್ಷಣಿಕ ಅಗತ್ಯಗಳನ್ನೂ ಪೂರೈಸುತ್ತಿದೆ. ಭವಿಷ್ಯದ ಬಗ್ಗೆ ಆ ‘ಸಪ್ತರ್ಷಿ’ಗಳಿಗೆ ಇದ್ದ ದೂರದೃಷ್ಟಿ ಅವರ್ಣನೀಯ’ ಎಂದರು.

‘ಪ್ರಭಾಕರ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈಗಲೂ ಒಂದು ಬುಲೆಟ್‌ ಅವರ ದೇಹದೊಳಗಿದೆ. ಹಾಗಾಗಿ ಅವರನ್ನು ‘ಬುಲೆಟ್‌ ಮ್ಯಾನ್‌’ ಎಂದು ಕಾಲೆಳೆಯುತ್ತೇನೆ ನಾನು. ಆ ದಾಳಿ ನಂತರ ಮರುಜನ್ಮ ಪಡೆದ ಅವರು, ಸಮಾಜಕ್ಕಾಗಿ ಮಾತ್ರ ಬದುಕುತ್ತೇನೆ ಎಂದು ಪ್ರತಿಜ್ಞೆ ಮಾಡಿ, ಅದರಂತೇ ಬದುಕಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್, ‘ಆದರ್ಶ ಸಮಾಜ ಹೇಗಿರಬೇಕು ಎಂದು 12ನೇ ಶತಮಾನದಲ್ಲೇ ಬಸವಾದಿ ಶರಣರು ಹೇಳಿದ್ದಾರೆ. ಕೆಎಲ್‌ಇ ಸಂಸ್ಥೆ ಅದೇ ಆದರ್ಶಗಳನ್ನು ಮುಂದುವರಿಸಿದೆ. ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಸವಣ್ಣನವರ ಆಶಯಗಳೂ ಅಡಗಿವೆ’ ಎಂದು ಹೇಳಿದರು.

ಪ್ರಭಾಕರ ಕೋರೆ ಮಾತನಾಡಿ, ‘ಬೆಳಗಾವಿಯಲ್ಲಿ ಶಾಸಕರ ಭವನ ಕಟ್ಟಬೇಕು, ಪರಿಪೂರ್ಣ ವಿಧಾನ ಮಂಡಲ ಅಧಿವೇಶನ ನಡೆಸಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲಾತಿ ಒದಗಿಸಬೇಕು. ಕೆಎಲ್‌ಇ ಸಂಸ್ಥೆಯಿಂದ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಿದ್ಧವಿದ್ದು, ಸರ್ಕಾರ ಕೈ ಜೋಡಿಸಬೇಕು’ ಎಂದು ಕೋರಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಶಾಸಕ ಬಿ.ಎಸ್.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಪ‍್ರಭಾಕರ ಕೋರೆ ಅವರ ಪತ್ನಿ ಆಶಾತಾಯಿ, ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಹಲವು ಧುರೀಣರು ವೇದಿಕೆ ಮೇಲಿದ್ದರು. ಪ್ರಭಾಕರ ಕೋರೆ ಅವರ ಬದುಕು– ಸಾಧನೆಗಳ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಅಭಿಮಾನಿಗಳು ಅವರಿಗೆ ಪುಸ್ತಕಗಳ ತುಲಾಭಾರ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT