ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಸಂವಾದ: ಬಿಎಸ್‌ವೈ, ವಿಜಯೇಂದ್ರ ‘ಭಿನ್ನ’ ನಡೆ ತಡೆಯುವ ತಂತ್ರ

ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿ ಗುಟ್ಟೇನು?
Last Updated 11 ಅಕ್ಟೋಬರ್ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಶಾಸಕಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮುಂದಿನ ಸಂಭಾವ್ಯ ‘ಭಿನ್ನ’ ನಡೆಯನ್ನು ಆರಂಭದಲ್ಲೇ ಚಿವುಟಿ ಹಾಕಲು ಅವರ ಆಪ್ತರ ಮೇಲೆ ಆದಾಯ ತೆರಿಗೆ(ಐ.ಟಿ) ಇಲಾಖೆ ದಾಳಿ ನಡೆದಿರುವ ಸಾಧ್ಯತೆಯೇ ಹೆಚ್ಚಿದೆ . . ’

‘ಯಡಿಯೂರಪ್ಪ ಅವರ ಆಪ್ತರ ಮೇಲಿನ ಐಟಿ ದಾಳಿ ಗುಟ್ಟೇನು’ ಎಂಬ ವಿಷಯ ಕುರಿತು ಸೋಮವಾರ ನಡೆದ ‘ಪ್ರಜಾವಾಣಿ’ ಸಂವಾದಲ್ಲಿ ಪಾಲ್ಗೊಂಡಿದ್ದ ವಿವಿಧ ಪ್ರಮುಖರು ವ್ಯಕ್ತಪಡಿಸಿದ ಅಭಿಪ್ರಾಯದ ಹೂರಣ ಇದು.

ಸಂಪೂರ್ಣ ಚರ್ಚೆ ವೀಕ್ಷಿಸಲು: www.facebook.com/prajavani.net

ಬ್ಲಾಕ್‌ಮೇಲ್‌ ರಾಜಕಾರಣ

ಕೇಂದ್ರದಲ್ಲಿರುವ ರಾಜ್ಯದ ಶಕ್ತಿಯೊಂದರ ಪ್ರಭಾವದಿಂದ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ತೆರೆಮರೆಗೆ ಸರಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ. ಜನರನ್ನು ದಾರಿ ತಪ್ಪಿಸಲು ಮತ್ತು ಪಕ್ಷದೊಳಗಿನ ಶತ್ರುಗಳನ್ನು ಮಣಿಸಲು ಈ ರೀತಿಯ ತಂತ್ರ ನಡೆದಿರುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ಗುತ್ತಿಗೆದಾರರು ತೆರಿಗೆ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ದಾಳಿ ನಡೆದಿದೆ ಎನ್ನುವುದು ಸರಿಯಲ್ಲ. ರಾಜ್ಯದಲ್ಲಿ ತೆರಿಗೆ ಪಾವತಿಸದ ಹತ್ತಾರು ಜನರು ಇದ್ದಾರೆ. ಅವರ ಮೇಲೆ ಏಕೆ ದಾಳಿ ನಡೆದಿಲ್ಲ? ಬಿಎಂಟಿಸಿ ನೌಕರರಾಗಿಯೇ ಉಮೇಶ್‌ ಉಳಿದಿದ್ದರೆ ಯಾವ ಐಟಿ ಅಧಿಕಾರಿಯೂ ದಾಳಿ ನಡೆಸುತ್ತಿರಲಿಲ್ಲ. ಅವರ ಬಳಿ ಸಿಕ್ಕಿರುವ ದಾಖಲೆಗಳ ಪ್ರಕಾರ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಯಡಿಯೂರಪ್ಪ ಮಧ್ಯೆ ಸಂಪರ್ಕ ಇರುವುದು ಗೊತ್ತಾಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ರಾಜಕೀಯವಾಗಿ ಸುಮ್ಮನಿರಿಸಲು ನೀಡಿರುವ ಸ್ಯಾಂಪಲ್‌ ಡೋಸ್‌ ಇದು. ಪಕ್ಷವನ್ನುಅಧಿಕಾರಕ್ಕೆ ತಂದ ನಾಯಕರನ್ನು ಮಣಿಸುವುದು ಯಾವ ಪಕ್ಷಕ್ಕೂ, ಯಾವ ದೇಶಕ್ಕೂ ಒಳ್ಳೆಯದಲ್ಲ. ಬಿಜೆಪಿ ಹೈಕಮಾಂಡ್‌ನದ್ದು ಬ್ಲಾಕ್‌ ಮೇಲ್‌ ರಾಜಕಾರಣ. ಇದರ ಪರಿಣಾಮ ಎದುರಿಸಬೇಕಾಗುತ್ತದೆ.

- ಎಲ್‌.ಹನುಮಂತಯ್ಯ, ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ

***

ತನಿಖೆಯಿಂದಷ್ಟೇ ಸತ್ಯ ಹೊರಬೀಳಲಿದೆ

ದೇಶದ ಎಲ್ಲೆಡೆ ಅಕ್ಟೋಬರ್‌ ಮೊದಲ ವಾರದಲ್ಲಿ ಐಟಿ ದಾಳಿ ನಡೆದಿದೆ. ಅದೇ ರೀತಿ ಕರ್ನಾಟಕದಲ್ಲೂ ದಾಳಿ ನಡೆದಿದೆ. ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಸೇರಿದಂತೆ ವಿವಿಧ ನಿಗಮಗಳಲ್ಲಿ ಟೆಂಡರ್‌ ಪ್ರಕ್ರಿಯೆಯಲ್ಲಿ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ನಡುವೆ ಅಕ್ರಮ ನಡೆದಿರಬಹುದು ಎನ್ನುವ ಜಾಡು ಹಿಡಿದು ದಾಳಿ ನಡೆದಿದೆಯೇ ಹೊರತು; ಇದಕ್ಕೂ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧ ಇಲ್ಲ. ರಾಜಕೀಯವಾಗಿ ಟಾರ್ಗೆಟ್‌ ನಡೆದಿದೆ ಎನ್ನುವುದು ಸರಿಯಲ್ಲ.

ಈ ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಎಂಜಿನಿಯರ್‌ಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮೇಲೂ ಐಟಿ ದಾಳಿ ನಡೆದಿತ್ತು. ಹಾಗಂತ ತಳಕು ಹಾಕಲು ಸಾಧ್ಯವೇ? ಈಗ ನಡೆದಿರುವುದು ಆರೋಪವೇ ಹೊರತು; ಸತ್ಯ ಅಲ್ಲ. ತನಿಖೆಯಿಂದಷ್ಟೇ ಸತ್ಯ ಹೊರಬೀಳಲಿದೆ.

- ನೆಲಮಂಗಲ ಸುರೇಶ್, ಬಿಜೆಪಿ ವಕ್ತಾರ

***

ತನಿಖಾ ವರದಿಗಳ ಮೇಲೆ ತನಿಖೆ ನಡೆಯಲಿ

ಉಪಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ರಾಜಕೀಯ ಸಂದೇಶವೊಂದನ್ನು ರವಾನಿಸುವ ಉದ್ದೇಶದಿಂದ ಈ ದಾಳಿ ನಡೆದಿದೆ. ಸರ್ಕಾರದಲ್ಲಿ ಯಡಿಯೂರಪ್ಪ ಅವರ ಹಸ್ತಕ್ಷೇಪ ಇದೆಯೇ ? ಅಥವಾ ಪಕ್ಷಕ್ಕೆ ನಿಮ್ಮ ಸೇವೆ ಸಾಕು ಎನ್ನುವ ಉದ್ದೇಶವೇ ಎಂಬುದು ಸ್ಪಷ್ಟತೆ ಇಲ್ಲ. ಆದರೆ, ಯಾವುದೋ ರಾಜಕೀಯ ಸಂದೇಶವನ್ನು ಪರೋಕ್ಷವಾಗಿ ರವಾನಿಸಲಾಗಿದೆ. ಅಕ್ರಮಗಳನ್ನು ಬಯಲಿಗೆ ಎಳೆಯಲು ಎಸಿಬಿಯಂತಹ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಯಬೇಕೇ ಹೊರತು; ಆದಾಯ ತೆರಿಗೆ ಅಧಿಕಾರಿಗಳಿಂದ ಅಲ್ಲ. ಇಲ್ಲಿಯವರೆಗಿನ ತನಿಖಾ ವರದಿಗಳ ಮೇಲೆ ತನಿಖೆ ನಡೆಸುವ ಅಗತ್ಯವಿದೆ. ಈ ದಾಳಿ ರಾಜಕೀಯವೇ, ಉದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬ ಸತ್ಯಾಂಶ ಹೊರಬರಬೇಕು. ಈ ದಾಳಿ ಬಗ್ಗೆ ಸ್ವಪಕ್ಷೀಯರೇ ಆರೋಪ ಮಾಡುತ್ತಿದ್ದು ಇದರಲ್ಲಿ ರಾಜಕೀಯವೂ ಅಡಗಿದೆ.

- ನಾರಾಯಣ ಎ., ರಾಜಕೀಯ ವಿಶ್ಲೇಷಕ

***

ಜನರ ದಿಕ್ಕುತಪ್ಪಿಸುವ ಯತ್ನ

ದೊಡ್ಡ ಮಟ್ಟದ ಗುತ್ತಿಗೆದಾರರು ಅಕ್ರಮದಲ್ಲಿ ಸಿಲುಕಿ ಕೋರ್ಟ್‌ ಮೆಟ್ಟಿಲು ಏರಿದಾಗ ಅಧಿಕಾರಿಗಳೇ ಪೂರಕ ಮಾಹಿತಿ ಒದಗಿಸಿಕೊಡುತ್ತಾರೆ. ಯಡಿಯೂರಪ್ಪ ಅವರ ಬಳಿ ಆಪ್ತನಾಗಿದ್ದ ಸಾಮಾನ್ಯ ಚಾಲಕರೊಬ್ಬರ ಬಳಿ ಟೆಂಡರ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಸಿಕ್ಕಿರುವುದರಿಂದ ಇದಕ್ಕೆ ಬೇರೆ ಆಯಾಮವೇ ಇದೆ. ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿ ಇದಾಗಿದೆ. ಹಿಂದೆ ವಿರೋಧ ಪಕ್ಷಗಳನ್ನು ಮಣಿಸಲು ದಾಳಿ ನಡೆಯುತ್ತಿತ್ತು. ಈ ರೀತಿಯ ದಾಳಿ ಚುನಾವಣೆ ಸಂದರ್ಭದಲ್ಲಿ ಮಾತ್ರ ನಡೆದಿರುವುದು ಜನರನ್ನು ದಿಕ್ಕುತಪ್ಪಿಸುವ ಹುನ್ನಾರವೂ ಹೌದು.

- ವೆಂಕಟರಾವ್‌ ನಾಡಗೌಡ, ಜೆಡಿಎಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT