ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ – ‘ದಮನಕಾರಿ ನೀತಿ:ಜನಸಂಖ್ಯಾ ನಿಯಂತ್ರಣ ಅಸಾಧ್ಯ’

Last Updated 15 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಸಂಖ್ಯಾ ನಿಯಂತ್ರಣ ನೀತಿ ಜನರಿಗೆ ಸ್ಪಂದಿಸುವಂತೆ ಇರಬೇಕೇ ಹೊರತು ಸಂಖ್ಯಾಸ್ಪಂದಿಯಾಗಬಾರದು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸುತ್ತೇವೆ ಎನ್ನುವುದು ಸಂವಿಧಾನ ವಿರೋಧಿ ಕ್ರಮ. ದಮನಕಾರಿ, ಹಿಂಸಾತ್ಮಕ ಹಾಗೂ ಭಯ ಹುಟ್ಟಿಸುವ ಇಂತಹ ನೀತಿಗಳಿಂದ ಜನಸಂಖ್ಯೆಗೆ ಕಡಿವಾಣ ಹಾಕುವುದು ಅಸಾಧ್ಯ. ಜನಪರವಾದಂತಹ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳಿಂದ ಮಾತ್ರ ಗುರಿ ಮುಟ್ಟುವುದು ಸಾಧ್ಯ. . .

‘ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯಕ್ಕೆ ಕತ್ತರಿ ಸರಿಯೇ’ ವಿಷಯ ಕುರಿತು ‘ಪ್ರಜಾವಾಣಿ’ ಗುರುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಚರ್ಚೆಯ ಸಂಕ್ಷಿಪ್ತ ಸಾರ ಇಲ್ಲಿದೆ.

‘ಇದು ಬಿಜೆಪಿ ನೀತಿ ಅಲ್ಲ’

‘ಇದು ನಮ್ಮ ಸರ್ಕಾರ ಅಥವಾ ಪಕ್ಷದ ನೀತಿಯಲ್ಲ. ಸ್ವಾತಂತ್ರ್ಯ ನಂತರ ಈ ದೇಶ ಆಳಿದ ಎಲ್ಲಾ ಸರ್ಕಾರಗಳು ಜನಸಂಖ್ಯೆ ನಿಯಂತ್ರಿಸಲು ಹಲವು ನೀತಿಗಳನ್ನು ರೂಪಿಸಿವೆ. ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಅನುಷ್ಠಾನಗೊಳಿಸಿರುವ ಕಾನೂನು ಇದರ ಮುಂದುವರಿದ ಭಾಗವಷ್ಟೇ’.

‘ಬಿಹಾರ, ಉತ್ತರ ಪ್ರದೇಶ ಹಾಗೂ ಅಸ್ಸಾಂನಲ್ಲಿ ಸಂತಾನ ಫಲವಂತಿಕೆ ಪ್ರಮಾಣ ಇತರ ರಾಜ್ಯಗಳಿಗಿಂತಲೂ ಅಧಿಕವಾಗಿದೆ. ರಾಜ್ಯದ ಸಂಪನ್ಮೂಲವನ್ನು ಸರ್ವರಿಗೂ ಸಮಾನವಾಗಿ ಹಂಚುವ, ಎಲ್ಲರಿಗೂ ಸೌಲಭ್ಯ ಕಲ್ಪಿಸುವ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಉತ್ತರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೆ ತಂದಿವೆ. ಇದನ್ನು ಚುನಾವಣಾ ದೃಷ್ಟಿಕೋನದಲ್ಲಿ ನೋಡಬಾರದು. ಇದು ರಾಜ್ಯಗಳ ಹಿತದೃಷ್ಟಿಯಿಂದ ಮಾಡಿರುವ ಗುಣಾತ್ಮಕ ಕಾನೂನು. ಹೀಗಾಗಿ ಎಲ್ಲರೂ ಸ್ವಾಗತಿಸಬೇಕು’.

‘ಈ ಕಾನೂನು 2022ರಿಂದ ಜಾರಿಗೆ ಬರಲಿದೆ. ಈಗಾಗಲೇ ಏಳು, ಹತ್ತು, ಹನ್ನೊಂದು ಮಕ್ಕಳು ಹೊಂದಿರುವ ಕುಟುಂಬಗಳಿಗೆ ಇದು ಅನ್ವಯವಾಗುವುದಿಲ್ಲ. ಬಲವಂತವಾಗಿ ಯಾರ ಮೇಲೂ ಇದನ್ನು ಹೇರಲಾಗುತ್ತಿಲ್ಲ. ಒಂದೇ ಮಗು ಪಡೆದ ಕುಟುಂಬಕ್ಕೆ ₹1 ಲಕ್ಷ ನೀಡುವುದಾಗಿ ಸರ್ಕಾರವೇ ಪ್ರಕಟಿಸಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜನರನ್ನು ಗಮನದಲ್ಲಿಟ್ಟುಕೊಂಡು ಇಂತಹ ಹಲವು ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ನೀತಿ ಬಗ್ಗೆ ಜನರಲ್ಲಿ ಗೊಂದಲ ಹಾಗೂ ಭಯ ಮೂಡಿಸುವ ಕೆಲಸಕ್ಕೆ ಯಾರೂ ಮುಂದಾಗಬಾರದು’.

‘ನಿರ್ದಿಷ್ಟವಾಗಿ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಈ ನೀತಿ ರೂಪಿಸಿಲ್ಲ. ಇದು ಅಭಿವೃದ್ಧಿಪರವಾದ ನಿಲುವು’.

–ಗೋ.ಮಧುಸೂದನ್‌,ಬಿಜೆಪಿ ಪ್ರಮುಖ

‘ಕಾನೂನುಗಳಿಂದ ಯಾವ ಪ್ರಯೋಜನವೂ ಇಲ್ಲ’

‘ಜನಸಂಖ್ಯೆ ಹೆಚ್ಚಳವು ಅಭಿವೃದ್ಧಿಗೆ ಮಾರಕ ಎಂದು ಹಲವರು ವಾದಿಸುತ್ತಾರೆ. ಈ ಸಂಪನ್ಮೂಲವನ್ನು ಅಭಿವೃದ್ಧಿಗೆ ಪೂರಕವಾಗಿಯೂ ಬಳಸಿಕೊಳ್ಳಬಹುದು ಎಂಬ ವಾದವೂ ಇದೆ. ದಬ್ಬಾಳಿಕೆಯಿಂದ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಗೊಳಿಸುವುದು ಸರಿಯಲ್ಲ’.

‘1979ರಲ್ಲಿ ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಅನುಷ್ಠಾನಗೊಂಡಿತ್ತು. ದಂಪತಿ ಒಂದೇ ಮಗು ಹೊಂದಬೇಕು ಎಂಬ ಕಾನೂನು ತಂದಿದ್ದರು. ಅಂತಹ ಕುಟುಂಬಕ್ಕೆ ವಿಶೇಷ ಸವಲತ್ತುಗಳನ್ನೂ ಒದಗಿಸುವ ಕೆಲಸ ಅಲ್ಲಿನ ಸರ್ಕಾರ ಮಾಡಿತ್ತು. ಹೀಗಾಗಿ ಮೂರೇ ವರ್ಷದಲ್ಲಿ ಶೇ 35ರಷ್ಟು ಜನಸಂಖ್ಯೆ ನಿಯಂತ್ರಿಸಲು ಸಾಧ್ಯವಾಗಿತ್ತು. ಅದೇ ರೀತಿ ನಮ್ಮಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದಿನ ಒಂದು ದಶಕದಲ್ಲಿ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದರೆ ತಕ್ಕಮಟ್ಟಿಗೆ ಯಶಸ್ಸು ಕಾಣಬಹುದಾಗಿತ್ತು’.

‘1971ರಿಂದ 1981ರ ಅವಧಿಯಲ್ಲಿ ಭಾರತದಲ್ಲಿ ಶೇ 2.5 ರಷ್ಟು ಜನಸಂಖ್ಯೆ ಬೆಳವಣಿಗೆ ದರ ಇತ್ತು ಎಂದು 2018–19ರ ಭಾರತೀಯ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2011 ರಿಂದ 2016ರಲ್ಲಿ ಈ ಪ್ರಮಾಣ ಶೇ 1.6ರಷ್ಟಿತ್ತು ಎಂಬುದನ್ನೂ ಅದರಲ್ಲಿ ತಿಳಿಸಲಾಗಿತ್ತು’.

‘ವರದಕ್ಷಿಣೆ ಪಡೆಯುವುದು, ಬಾಲ್ಯ ವಿವಾಹ ಮಾಡುವುದು ಅಪರಾಧ ಎಂದು ಕಾನೂನು ಮಾಡಲಾಗಿದೆ. ಹಾಗಂತ ಇವು ನಿಂತು ಹೋಗಿವೆಯೇ? ಕಾನೂನಿನಿಂದ ಯಾವ ಪ್ರಯೋಜನವೂ ಇಲ್ಲ. ಜನಾಂದೋಲನ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಜನಸಂಖ್ಯಾ ನಿಯಂತ್ರಣ ನೀತಿ ಒಂದು ರಾಜ್ಯಕ್ಕೆ ಸೀಮಿತವಾಗಬಾರದು. ಇದು ರಾಷ್ಟ್ರೀಯ ನೀತಿಯಾಗಬೇಕು’.

–ವಿ.ಎಸ್‌.ಉಗ್ರಪ್ಪ,ಕಾಂಗ್ರೆಸ್‌ ಮುಖಂಡ

‘ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡಿ’

‘ಉತ್ತೇಜನ ನಿರುತ್ತೇಜನದ ಮೂಲಕ ರೂಪಿಸುವ ಜನಸಂಖ್ಯಾ ನೀತಿಯು ಮಾನವ ಹಕ್ಕುಗಳಿಗೆ ಮಾರಕವಾದುದು’ ಎಂದು ಮಾನವ ಹಕ್ಕುಗಳ ಆಯೋಗ ಬಹಳ ವರ್ಷಗಳ ಹಿಂದೆಯೇ ಹೇಳಿದೆ. ಕೆಲವು ರಾಜ್ಯಗಳಲ್ಲಿ ಸಂತಾನ ಫಲವಂತಿಕೆ ದರ ಹೆಚ್ಚಿರಬಹುದು. ಆದರೆ ದೇಶದಲ್ಲಿ ಜನಸಂಖ್ಯಾ ಬೆಳವಣಿಗೆ ಏರುಗತಿ ಪಡೆದಿಲ್ಲ ಎಂಬುದನ್ನು ತಜ್ಞರೇ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸಿದ್ದು ಹೇಗೆ, ಇದಕ್ಕಾಗಿ ಆ ರಾಜ್ಯಗಳು ಅನುಸರಿಸಿದ ನೀತಿ ಎಂತಹುದು ಎಂಬುದನ್ನು ಅರ್ಥಮಾಡಿಕೊಂಡು ಮುಂದಡಿ ಇಡಬೇಕು. ಇತಿಹಾಸದಿಂದ ನಾವು ಯಾವ ಪಾಠವನ್ನೂ ಕಲಿಯುತ್ತಿಲ್ಲ ಎಂಬುದಕ್ಕೆ ಉತ್ತರ ಪ್ರದೇಶ ಸರ್ಕಾರದ ನೀತಿ ಸಾಕ್ಷಿಯಂತಿದೆ’.

‘ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡಿದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂಬುದಕ್ಕೆ ನಮ್ಮ ಮುಂದೆ ಹಲವು ನಿದರ್ಶನಗಳಿವೆ. ಬಡತನ, ಅನಕ್ಷರತೆ, ಮಹಿಳೆಯರ ಮೇಲಿನ ಹಿಂಸೆ, ಕೌಟುಂಬಿಕ ದೌರ್ಜನ್ಯ ಹೆಚ್ಚಿರುವೆಡೆ ಜನಸಂಖ್ಯೆ ಬೆಳವಣಿಗೆ ಅಧಿಕವಾಗಿರುತ್ತದೆ. ಉತ್ತರ ಪ್ರದೇಶ ಸರ್ಕಾರದ ನೀತಿಯು ಯಾವ ವರ್ಗಕ್ಕೆ ಅಪಾಯ ತಂದೊಡ್ಡಲಿದೆ ಎಂಬುದು ಸ್ಪಷ್ಟವಾಗಿದೆ. ಉತ್ತರ ಪ್ರದೇಶದಂತಹ ರಾಜ್ಯಗಳು ಜನಸಂಖ್ಯೆಯ ಗುಣಮಟ್ಟ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕ ಉತ್ತಮಪಡಿಸುವತ್ತ ಗಮನಹರಿಸಬೇಕು’.

‘ಜನಸಂಖ್ಯಾ ನಿಯಂತ್ರಣ ಎಂಬ ಪದವೇ ನಕಾರಾತ್ಮಕ. ಆ ಪದವನ್ನು ಈಗ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಬಳಸುತ್ತಿಲ್ಲ. ಸಾಮಾಜಿಕ ಅಭಿವೃದ್ಧಿಯ ಮೂಲಕ ಜನಸಂಖ್ಯಾ ಅಭಿವೃದ್ಧಿಯನ್ನು ನಿಯಂತ್ರಿಸಬೇಕು’.

–ಟಿ.ಆರ್‌.ಚಂದ್ರಶೇಖರ್‌,ಲೇಖಕ ಹಾಗೂ ಅರ್ಥಶಾಸ್ತ್ರಜ್ಞ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT