ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ: ಡಾ.ಸಿ.ಎನ್‌. ಅಶ್ವತ್ಥನಾರಾಯಣ

ಆನ್‌ಲೈನ್‌ ಸಂವಾದದಲ್ಲಿ ಉಪ ಮುಖ್ಯಮಂತ್ರಿ ಹೇಳಿಕೆ
Last Updated 29 ಆಗಸ್ಟ್ 2020, 17:23 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆ ನಡೆದಿದೆ. ಕಾರ್ಯಪಡೆಯ ಅಂತಿಮ ವರದಿ ಕೈ ಸೇರಿದ ತಕ್ಷಣ ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಲಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಅಸೋಚಾಮ್‌ ಶನಿವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಆಗುವ ಬದಲಾವಣೆ ಮತ್ತು ಬೀರುವ ಪ್ರಭಾವ’ದ ಕುರಿತ ಆನ್‌ಲೈನ್‌ ಸಂವಾದದಲ್ಲಿ ಅವರು ಮಾತನಾಡಿದರು.

‘ನೀತಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಕಾರ್ಯಪಡೆಯ ಜತೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಉಪ ಸಮಿತಿಗಳು ನೀಡಿರುವ ವರದಿಗಳನ್ನೂ ಅಧ್ಯಯನ ಮಾಡಲಾಗಿದೆ’ ಎಂದರು.

‘ರಾಜ್ಯಕ್ಕೆ ಸೇರಿದ ತಜ್ಞರೇ ಇದ್ದ ಸಮಿತಿಯು ಅನೇಕ ಕ್ರಾಂತಿಕಾರಕ ಅಂಶಗಳನ್ನು ನೀತಿಯಲ್ಲಿ ಸೇರಿಸಿದೆ. ಶಿಕ್ಷಣದ ಎಲ್ಲ ಹಂತಗಳಲ್ಲೂ ಉತ್ತಮ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಮುಂದೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೂ ಅಪಾರ ಬದಲಾವಣೆಗಳನ್ನು ಕಾಣಬಹುದು. ಈ ಮೂಲಕ, ಭಾರತವು ಜಗತ್ತಿನ ಜ್ಞಾನ ಕಣಜವಾಗಿ ಹೊರಹೊಮ್ಮಲಿದೆ. ಕರ್ನಾಟಕವೂ ಶಿಕ್ಷಣ ನೆಲೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಇಡೀ ದೇಶದಲ್ಲೇ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕ ಮುನ್ನಡೆಯಲ್ಲಿ ನಿಲ್ಲಲಿದೆ. ಈಗಾಗಲೇ ಸರ್ಕಾರ ಹಾಕಿಕೊಂಡಿರುವ ಯೋಜನೆಯಂತೆ, ತಜ್ಞರು ಕೊಟ್ಟಿರುವ ಸಲಹೆಯಂತೆ ಹಂತ–ಹಂತವಾಗಿ ಅನುಷ್ಠಾನ ಮಾಡಲಾಗುವುದು. ಧಾರವಾಡದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ಉನ್ನತ ಶಿಕ್ಷಣ ಅಕಾಡೆಮಿ ಕೂಡ ಈ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಅದರ ಜೊತೆಯಲ್ಲಿ ಬಹು ಉದ್ದೇಶಿತ ಹಾಗೂ ಬಹುವಿಷಯಗಳನ್ನು ಬೋಧನೆ ಮಾಡುವ ವಿಶ್ವವಿದ್ಯಾಲಯಗಳನ್ನು ಕೂಡ ಸ್ಥಾಪಿಸಲಾಗುವುದು’ ಎಂದರು.

‘ಎಸ್‌ಸಿ– ಎಸ್‌ಟಿ, ಒಬಿಸಿ ವಿದ್ಯಾರ್ಥಿ, ಶಿಕ್ಷಕರಿಗೆ ಕ್ರಿಯಾಯೋಜನೆ’

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಿಗುವಂತೆ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಲು ಇಲಾಖೆಯ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದರು.

ನೀತಿಯ ಅನುಷ್ಠಾನ ಕುರಿತು ಹಿರಿಯ ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಅವರು, ‘ಈ ಸಮುದಾಯಗಳ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಈ ಶಾಲೆಗಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಲು ನೀತಿಯಡಿ ಹೆಚ್ಚಿನ ಅವಕಾಶಗಳಿವೆ’ ಎಂದರು.

‘ಪ್ರಾದೇಶಿಕ ಅಸಮಾನತೆ ನಿವಾರಣೆಗೆ ವಿಶೇಷ ಶೈಕ್ಷಣಿಕ ವಲಯ (ಎಸ್‍ಇಝಡ್) ರಚನೆಗೂ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಶಿಕ್ಷಕ ವೃಂದಕ್ಕೆ ವೃತ್ತಿಪರ ಪ್ರಗತಿಗೆ ವಿಶೇಷ ಯೋಜನೆ ರೂಪಿಸಬೇಕು’ ಎಂದೂ ಸಲಹೆ ನೀಡಿದರು.

‘ಹೊಸ ನೀತಿಯಂತೆ ವಸತಿ ಶಿಕ್ಷಣ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಬೇಕು. ಸ್ವಂತ ನಿವೇಶನ ಹೊಂದಿರುವ ವಸತಿ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿ, ವಸತಿ ಕೊಠಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಪಡಿಸಿ, ಈಗಿರುವ 1.7 ಲಕ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನು 2.5 ಲಕ್ಷಕ್ಕೆ ವಿಸ್ತರಿಸಲು ಕ್ರಮಕೈಗೊಳ್ಳಬೇಕು’ ಎಂದುಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಸಭೆಯಲ್ಲಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯರೂ ಆದಮೇಲ್ಮನೆ ಸದಸ್ಯ ಅರುಣ್ ಶಹಾಪೂರ, ‘ಹೊಸ ನೀತಿ ಎಲ್ಲ ವಯೋಮಾನ,ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT