ಶುಕ್ರವಾರ, ಡಿಸೆಂಬರ್ 4, 2020
21 °C
ರಮೇಶ ಜಾರಕಿಹೊಳಿ ಕೇಂದ್ರಿತ ಚಟುವಟಿಕೆ

ಸಚಿವ ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ: ಬಿಎಸ್‌ವೈ ಆಪ್ತಬಣದ ತಂತ್ರಗಾರಿಕೆ?

ಎಸ್.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರೋಧಿ ಬಣದ ಶಾಸಕರಿಗಿಂತ ಅವರ ಆಪ್ತ ಬಣದ ಶಾಸಕರೇ ಹೆಚ್ಚು ಸಕ್ರಿಯರಾಗಿದ್ದು, ಸಂಪುಟ ವಿಸ್ತರಣೆಗಾಗಿ ಒತ್ತಡ ಹೇರುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸುದ್ದಿ ಮಾಡಿದ್ದೂ ಅಲ್ಲದೆ, ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಒತ್ತಾಯವನ್ನೂ ಹೇರಿದ್ದಾರೆ.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜೂಗೌಡ, ಮುರುಗೇಶ ನಿರಾಣಿ, ಬೆಳ್ಳಿಪ್ರಕಾಶ್‌, ಶಂಕರಪಾಟೀಲ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್‌ ಅವರು ಜಾರಕಿಹೊಳಿ ಮನೆಯಲ್ಲಿ ಸೇರಿ ಸಂಪುಟ ವಿಸ್ತರಣೆ ಸಂಬಂಧ ಸಂದೇಶ ರವಾನಿಸಿದ ಪ್ರಮುಖರು. ಇವರಲ್ಲಿ ಬಹುತೇಕ ಶಾಸಕರು ಮುಖ್ಯಮಂತ್ರಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿರೋಧಿ ಬಣದಲ್ಲಿ ಗುರುತಿಸಿಕೊಂಡಿಲ್ಲ.

ಉಪಚುನಾವಣೆ ಮುಗಿದ ತಕ್ಷಣವೇ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿಯವರಿಗೆ ಮುಂದಿನ ಹೆಜ್ಜೆಯಾಗಿ ವರಿಷ್ಠರ ಭೇಟಿಗೆ ಹಸಿರು ನಿಶಾನೆ ಸಿಗಬೇಕಿದೆ. ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರು ಪ್ರಮಾಣ ಸ್ವೀಕರಿಸುವವರೆಗೆ ಯಡಿಯೂರಪ್ಪ ಅವರಿಗೆ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಈ ಮಧ್ಯೆ ವರಿಷ್ಠರಿಗೆ ಪರೋಕ್ಷವಾಗಿ ಸಂದೇಶ ರವಾನಿಸುವುದು ಯಡಿಯೂರಪ್ಪ ಆಪ್ತ ಬಣದ ಉದ್ದೇಶವಾಗಿದ್ದು, ಅದಕ್ಕೆ ರಮೇಶ ಜಾರಕಿಹೊಳಿ ಅವರನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ವಲಸೆ ಬಂದು ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವವರ ಜತೆಗೆ ಪಕ್ಷದಲ್ಲಿನ ಕೆಲವರಿಗೆ ಸ್ಥಾನ ಕಲ್ಪಿಸಲು ಉದ್ದೇಶಿಸಿದ್ದಾರೆ. ಅದು ಸಾಧ್ಯವಾಗಬೇಕಾದರೆ ಕೆಲವು ಸಚಿವರ ತಲೆದಂಡ ಅಗತ್ಯವಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡದವರನ್ನು ಕೈಬಿಡುವ ಸಂಬಂಧ ಯಡಿಯೂರಪ್ಪ ಈಗಾಗಲೇ ಪಟ್ಟಿಯೊಂದನ್ನು ವರಿಷ್ಠರಿಗೆ ನೀಡಿದ್ದಾರೆ. ಅದಕ್ಕೆ ಒಪ್ಪಿಗೆ ನೀಡುತ್ತಾರೆಯೋ ಇಲ್ಲವೋ ಎಂಬುದರ ಮೇಲೆ ವಿಸ್ತರಣೆಯೊ ಅಥವಾ ಪುನಾರಚನೆಯೊ ಎಂಬುದು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಮುನಿರತ್ನ, ಆರ್‌.ಶಂಕರ್‌, ಎಂ.ಟಿ.ಬಿ.ನಾಗರಾಜ್‌, ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡಬೇಕಿದ್ದರೆ, ವರಿಷ್ಠರ ಒಪ್ಪಿಗೆ ಬೇಕು. ಮುನಿರತ್ನ ಮತ್ತು ಆರ್‌.ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಲು ಸಮಸ್ಯೆ ಆಗುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ಎಂ.ಟಿ.ಬಿ ಮತ್ತು ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದಲ್ಲೇ ತಕರಾರು ಏಳಬಹುದು. ಆದರೆ, ಯಡಿಯೂರಪ್ಪ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂಬ ಇಕ್ಕಟ್ಟಿಗೂ ಸಿಲುಕಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.

‘ವಲಸಿಗರು ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಸಲು ಸಾಧ್ಯವಿಲ್ಲ. ವರಿಷ್ಠರ ಗಮನ ಸೆಳೆಯುವುದು ಇದರ ಹಿಂದಿನ ಉದ್ದೇಶ’ ಎಂದು ಬಿಜೆಪಿಯ ಹಿರಿಯ ಸಚಿವರೊಬ್ಬರು ತಿಳಿಸಿದರು.

ಸಂಪುಟ ವಿಸ್ತರಣೆ ಶೀಘ್ರ: ಸಿ.ಟಿ.ರವಿ

ಚಿಕ್ಕಮಗಳೂರು: ‘ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚಿಸಿ ತೀರ್ಮಾನಿಸಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ದೇವೀರಮ್ಮ ಬೆಟ್ಟದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯವರ ಮನದಲ್ಲಿ ಸಂಪುಟ ಪುನರ್‌ರಚನೆ ಯೋಚನೆ ಇದೆ. ಚಿಕ್ಕಮಗಳೂರು ಜಿಲ್ಲೆಗೂ ಶೀಘ್ರದಲ್ಲಿ ಉಸ್ತುವಾರಿ ಸಚಿವರ ನೇಮಕ ಆಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು