ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ತರಗತಿಗೆ ನಿರ್ಬಂಧ: ಪೋಷಕರ ಆಕ್ರೋಶ

Last Updated 25 ಜೂನ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ಣ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಫಲಿತಾಂಶ ತಡೆಹಿಡಿದಿರುವ ಮತ್ತು ಆನ್‌ಲೈನ್‌ ತರಗತಿ ನಿರ್ಬಂಧಿಸುತ್ತಿರುವ ನಗರದ ಕೆಲವು ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಾಜಿನಗರದಲ್ಲಿರುವ ಶ್ರೀವಾಣಿ ಪ್ರೌಢಶಾಲೆಯ ಎದುರು ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಇಂತಹ ಶಾಲೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದ್ದು ಕೂಡ ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.

‘ನನ್ನ ಇಬ್ಬರು ಮಕ್ಕಳು ಶ್ರೀವಾಣಿ ಶಾಲೆಯಲ್ಲಿ ಓದುತ್ತಿದ್ದಾರೆ. ಅದರಲ್ಲಿ ಒಬ್ಬ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದಾನೆ. ₹63 ಸಾವಿರ ಶುಲ್ಕದ ಪೈಕಿ, ₹43 ಸಾವಿರ ಪಾವತಿಸಿದ್ದೇನೆ. ಅಂದರೆ, ಶೇ 80ರಷ್ಟು ಹಣ ಕಟ್ಟಿದ್ದೇನೆ. ಆದರೂ, ಮಕ್ಕಳ ಹಿಂದಿನ ತರಗತಿಯ ಫಲಿತಾಂಶ ನೀಡುತ್ತಿಲ್ಲ. ಆನ್‌ಲೈನ್‌ ತರಗತಿ ನಿರ್ಬಂಧಿಸಿದ್ದಾರೆ. ಪೂರ್ತಿ ಶುಲ್ಕ ಪಾವತಿಸಲು ಒತ್ತಡ ಹೇರಲಾಗುತ್ತಿದೆ. ನೋಟ್ಸ್‌ಗಳನ್ನು ಹಂಚಿಕೊಳ್ಳದಂತೆ ಬೇರೆ ಮಕ್ಕಳಿಗೂ ಸೂಚನೆ ನೀಡಲಾಗಿದೆ’ ಎಂದು ಪೋಷಕರೊಬ್ಬರು ದೂರಿದರು.

‘ಈ ಬಗ್ಗೆ ವಿಚಾರಿಸೋಣ ಎಂದರೆ ಪ್ರಾಚಾರ್ಯರು, ಶಿಕ್ಷಕರು ಸೇರಿದಂತೆ ಆಡಳಿತ ಮಂಡಳಿಯ ಎಲ್ಲರ ಫೋನ್‌ ಸ್ವಿಚ್ಡ್‌ ಆಫ್ ಆಗಿವೆ. ಎಲ್ಲವನ್ನೂ ಇ–ಮೇಲ್‌ನಲ್ಲಿ ಹೇಳುತ್ತಾರೆ. ನಾವು ಕಳುಹಿಸಿದ ಮೇಲ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಶಾಲೆಗೆ ಬಂದರೆ ಬಾಗಿಲು ಬಂದ್ ಮಾಡಿರುತ್ತಾರೆ. ಶುಲ್ಕ ಕಟ್ಟಿಸಿಕೊಳ್ಳುವ ಕೌಂಟರ್‌ ಮಾತ್ರ ತೆರೆಯಲಾಗಿದೆ’ ಎಂದು ವಿದ್ಯಾರ್ಥಿಯ ತಾಯಿಯೊಬ್ಬರು ಹೇಳಿದರು.

’ಖಾಸಗಿ ಶಾಲೆಗಳು ಶೇ 70ರಷ್ಟು ಬೋಧನಾ ಶುಲ್ಕ ತೆಗೆದುಕೊಳ್ಳಲು ಸರ್ಕಾರ ಸೂಚಿಸಿದೆ. ಈ ಆದೇಶ ನಮಗೆ ಅನ್ವಯವಾಗುವುದಿಲ್ಲ, ಪೂರ್ತಿ ಶುಲ್ಕ ಪಾವತಿಸಿ ಎಂದು ಶಾಲೆಗಳು ಹೇಳುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ, ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದೇವೆ ಎನ್ನುತ್ತಾರೆ. ಎಲ್ಲದಕ್ಕೂ ನ್ಯಾಯಾಲಯವೇ ಮಧ್ಯಪ್ರವೇಶಿಸಬೇಕು ಎಂದರೆ ಶಿಕ್ಷಣ ಸಚಿವರು ಏಕೆ ಬೇಕು’ ಎಂದೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಕ್ಷೇತ್ರದ ಶಿಕ್ಷಣಾಧಿಕಾರಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಜುಲೈ 31ರೊಳಗೆ ದ್ವಿತೀಯ ಪಿಯು ಫಲಿತಾಂಶ

ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 31ರೊಳಗೆ ಫಲಿತಾಂಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳ 12ನೇ ತರಗತಿ ಮಕ್ಕಳಿಗೆ ಜು.31ರೊಳಗೆ ಫಲಿತಾಂಶ ನೀಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ರಾಜ್ಯದಲ್ಲೂ ಅಷ್ಟರೊಳಗೆ ಫಲಿತಾಂಶ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಶೀಘ್ರ: ‘ಶೀಘ್ರದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಬೇಡ, ಅತ್ಯಂತ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಕೋವಿಡ್ ಕಾರ್ಯಪಡೆ ನೀಡಿರುವ ಮಾರ್ಗಸೂಚಿ ಅನುಸಾರ ಸಿದ್ಧತೆಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷೆ ಸಂಬಂಧ ಅಧಿಕಾರಿಗಳ ಕರ್ತವ್ಯಗಳ ಬಗ್ಗೆಯೂ ಆದೇಶ ಮಾಡಲಾಗಿದೆ. ಪರೀಕ್ಷೆಗೆ ಕೆಲ ದಿನಗಳು ಬಾಕಿ ಇರುವಾಗಲೇ ವೇಳಾಪಟ್ಟಿ ಪ್ರಕಟಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT