ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜದ ಮೇಲೆ ಪ್ರೀತಿಯಿದ್ದರೆ ಈಶ್ವರಪ್ಪರನ್ನು ವಜಾ ಮಾಡಲಿ: ಪ್ರಿಯಾಂಕ್

Last Updated 19 ಫೆಬ್ರುವರಿ 2022, 9:43 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯವರಿಗೆ ರಾಷ್ಟ್ರ ಧ್ವಜದ ಮೇಲೆ ಪ್ರೀತಿ, ಗೌರವ ಇದ್ದರೆ ಮೊದಲು ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲು ಯಾಕೆ ಆಗುತ್ತಿಲ್ಲ? ಮುಖ್ಯಮಂತ್ರಿ ಯಾಕೆ ಅಸಹಾಯಕರಾಗಿ ಕುಳಿತಿದ್ದಾರೊ ಗೊತ್ತಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಕ್ಷದ ಶಾಸಕರಾದ ಶರತ್ ಬಚ್ಚೇಗೌಡ ಮತ್ತು ಅನಿಲ್ಚಿಕ್ಕಮಾದು ಜೊತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿಯವರದ್ದು ಬೋಗಸ್ ದೇಶಭಕ್ತಿ’ ಎಂದರು.

‘ಹಲವು ದಿನಗಳಿಂದ ನಾವು ಈಶ್ವರಪ್ಪ ಅವರ ರಾಜೀನಾಮೆ ಕೇಳುತ್ತಿದ್ದೇವೆ. ಆದರೂ, ತಮ್ಮ ಹೇಳಿಕೆಯನ್ನು ಅವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕೇಸರಿ ಧ್ವಜ 200, 300 ವರ್ಷಗಳಲ್ಲಿ ರಾಷ್ಟ್ರೀಯ ಧ್ವಜ ಆಗಲಿದೆ ಎಂದಿದ್ದಾರೆ. ಅವರು ಆರೆಸ್ಸೆಸ್‌ನಿಂದ ಬಂದಿದ್ದಾರೆ. ಅವರ ಬಣ್ಣ ಬಟಾ ಬಯಲಾಗಿದೆ’ ಎಂದರು.

‘ರಾಷ್ಟ್ರ ಧ್ವಜ ಬದಲಾಗಲಿದೆ ಎಂದು ಹೇಳುವುದು ಸಂವಿಧಾನ ವಿರೋಧಿ ಅಲ್ಲವೇ? ಆರೆಸ್ಸೆಸ್‌ನವರು ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ದೊಡ್ಡ ಸ್ವಾತಂತ್ರ್ಯ ಹೋರಾಟಗಾರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.

‘ಈಶ್ವರಪ್ಪನವರು ರಾಜೀನಾಮೆಗೆ ಸಿದ್ಧವಿಲ್ಲವೆಂದರೆ ವಜಾ ಮಾಡಲಿ. ಹೈಕಮಾಂಡ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಏನು ಮಾಡುತ್ತಿದ್ದಾರೆ. ಯತ್ನಾಳ್ ಅವರಿಗೆ ಒಂದು ನೋಟಿಸ್ ಕೊಟ್ಟಿಲ್ಲವೇ’ ಎಂದೂ ಪ್ರಶ್ನಿಸಿದರು.

‘ಕಟೀಲ್ ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಬಿಟ್‌ ಕಾಯಿನ್ ವಿಚಾರ ಬಂದರೂ ಕಟೀಲ್ ಬಾಯಿ ಬಿಡಲಿಲ್ಲ. ಕನಿಷ್ಠ ಸುಳ್ಳನ್ನಾದರೂ ಹೇಳಬೇಕಲ್ಲವೇ? ನೀವು ನಿಜವಾಗಿಯೂ ರಾಷ್ಟ್ರಪ್ರೇಮಿಗಳಾಗಿದ್ದರೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ’ ಎಂದು ಕಟೀಲ್‌ಗೆ ಅವರು ಸವಾಲು ಹಾಕಿದರು.

ಜನ ಎಚ್ಚೆತ್ತುಕೊಳ್ಳಬೇಕು: ಹಿಜಾಬ್‌ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ವಿರೋಧ ಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ‘ಇದರ ಹಿಂದೆ ಹಾವಿನಪುರದಲ್ಲಿರುವ (ನಾಗಪುರ) ಸೂತ್ರದಾರರು ಇದ್ದಾರೆ. ಜನರಿಗೆ ಹಿಂಸೆ ಕೊಡುವುದೇ ಅವರ ಸಿದ್ಧಾಂತ. ಶತಶತಮಾನಗಳಿಂದ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಿಕೊಂಡು ಬಂದಿದ್ದಾರೆ. ಇಂದು ಅಲ್ಪಸಂಖ್ಯಾತ ಮಹಿಳೆಯರು, ನಾಳೆ ಶೂದ್ರರ ಮೇಲೆ ದೌರ್ಜನ್ಯ ನಡೆಸಲಿದ್ದಾರೆ. ಜನ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು‘ ಎಂದರು.

‘ವಿದ್ಯಾರ್ಥಿಗಳ ಮೇಲೆ ಮೊಕದ್ದಮೆ ದಾಖಲಿಸಿರುವುದು ದುರ್ದೈವ. ಇದು ಹೆದರಿಸುವ ತಂತ್ರಗಾರಿಕೆ ಅಷ್ಟೇ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT