ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಹಟದಿಂದ ನೌಕರರಿಗೆ ಹೊರೆ: ಪ್ರಿಯಾಂಕ್‌ ಖರ್ಗೆ

Last Updated 30 ನವೆಂಬರ್ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ಇಲಾಖೆಯ ಸಹಮತಿ ಇಲ್ಲದೇ ಗೋಹತ್ಯೆ ನಿಷೇಧ ಮಸೂದೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಅದರ ಹೊರೆಯನ್ನು ದೇಣಿಗೆ ಹೆಸರಿನಲ್ಲಿ ಸರ್ಕಾರಿ ನೌಕರರ ಮೇಲೆ ಹೊರಿಸುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧದ ಪರಿಣಾಮವಾಗಿ ಜಾನುವಾರುಗಳಿಗೆ ಮೇವು ಪೂರೈಕೆ, ಗೋಶಾಲೆಗಳ ನಿರ್ಮಾಣ ಮತ್ತು ನಿರ್ವಹಣೆ, ಪರ್ಯಾಯವಾಗಿ ಕುರಿ, ಮೇಕೆ ಮಾಂಸ ಪೂರೈಕೆಗೆ ಸಹಾಯಧನ ಸೇರಿದಂತೆ ನಾಲ್ಕು ವರ್ಷಗಳಲ್ಲಿ ₹ 5,280 ಕೋಟಿ ಹೊರೆ ಬೀಳಲಿದೆ ಎಂದು ಆರ್ಥಿಕ ಇಲಾಖೆ ತಿಳಿಸಿತ್ತು. ಮಸೂದೆಯನ್ನು ಒಪ್ಪುವುದು ಸೂಕ್ತವಲ್ಲ ಎಂಬ ತೀರ್ಮಾನವನ್ನೂ ಅಭಿಪ್ರಾಯವನ್ನೂ ನೀಡಿತ್ತು. ಮುಖ್ಯಮಂತ್ರಿ ಹಾಗೂ ಪಶುಸಂಗೋಪನಾ ಸಚಿವರು ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ನಿರ್ಲಕ್ಷಿಸಿ ತೀರ್ಮಾನ ಕೈಗೊಂಡಿದ್ದರು’ ಎಂದರು.

ಗೋವುಗಳ ದತ್ತು ಯೋಜನೆ ಮೂಲಕ ಅಗತ್ಯ ಸಂಪನ್ಮೂಲ ಸಂಗ್ರಹಿಸುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಅದಕ್ಕೆ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದರಿಂದ ಸರ್ಕಾರಿ ನೌಕರರ ವೇತನಕ್ಕೆ ಕೈಹಾಕಿದ್ದಾರೆ. ಸರ್ಕಾರಿ ನೌಕರರಿಂದ ಏಕೆ ಹಣ ಪಡೆಯಬೇಕು? ಬಿಜೆಪಿ ನಾಯಕರಿಗೆ ಶೇಕಡ 40ರಷ್ಟು ಕಮಿಷನ್‌ ಆದಾಯ ಇರುವುದರಿಂದ ಅವರಿಂದ ಹಣ ಪಡೆದರೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.

ಪುಣ್ಯಕೋಟಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಈವರೆಗೆ ಮೂರು ಹೊಸ ಗೋಶಾಲೆಗಳನ್ನು ಮಾತ್ರ ಆರಂಭಿಸಲಾಗಿದೆ. ರಾಜ್ಯದಲ್ಲಿರುವ ಒಟ್ಟು 177 ಗೋಶಾಲೆಗಳಲ್ಲಿ 21,207 ಜಾನುವಾರುಗಳಿವೆ. 151 ಜನರು ಈವರೆಗೆ ಗೋವುಗಳನ್ನು ದತ್ತು ‍ಪಡೆದಿದ್ದಾರೆ ಎಂದರು.

ಕೋವಿಡ್‌ ಬಳಿಕ ರಾಜ್ಯದಲ್ಲಿ ಚರ್ಮೋದ್ಯಮ ಕುಸಿದಿದೆ. ಗೋಹತ್ಯೆ ನಿಷೇಧದಿಂದ ಈ ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. 3.5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಚರ್ಮೋದ್ಯಮ ಅವಲಂಬಿಸಿದ್ದು, ಅವರ ಪುನರ್ವಸತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT