ಶನಿವಾರ, ಜುಲೈ 2, 2022
22 °C

ಪಿಎಸ್‌ಐ ಅಕ್ರಮ: ಮಧ್ಯವರ್ತಿಗಳ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಮಧ್ಯವರ್ತಿಗಳ ಮಾಹಿತಿ ಕಲೆಹಾಕುತ್ತಿದ್ದಾರೆ. 

‘ಹೇಗಾದರೂ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಹಲವು ಅಭ್ಯರ್ಥಿಗಳು ಮಧ್ಯವರ್ತಿಗಳ ಮೂಲಕ ನೇಮಕಾತಿ ವಿಭಾಗದ ಅಧಿಕಾರಿಗಳಿಗೆ ಲಕ್ಷಾಂತರ ಮೊತ್ತ ಸಂದಾಯ ಮಾಡಿದ್ದಾರೆ. ವಿಚಾರಣೆ ವೇಳೆ ಹಲವರು ಈ ಕುರಿತ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರು ಸಂಪರ್ಕಿಸಿದ ವ್ಯಕ್ತಿಗಳು ಯಾರು. ಅವರಿಗೆ ನೀಡಿರುವ ಮೊತ್ತ ಎಷ್ಟು. ಎಷ್ಟು ಕಂತಿನಲ್ಲಿ ಹಣ ಸಂದಾಯ ಮಾಡಿದ್ದಾರೆ. ಅವರ ನಡುವೆ ಯಾವ ಬಗೆಯ ಒಪ್ಪಂದವಾಗಿತ್ತು ಎಂಬ ಮಾಹಿತಿ  ಕಲೆಹಾಕಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಅಕ್ರಮದಲ್ಲಿ ಮಧ್ಯವರ್ತಿಗಳ ಪಾತ್ರ ಮಹತ್ವದ್ದಾಗಿದೆ. ನೇಮಕಾತಿ ವಿಭಾಗದ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ಅಭ್ಯರ್ಥಿಗಳನ್ನು ಸಂಪರ್ಕಿಸಿ ವ್ಯವಹಾರ ಕುದುರಿಸುತ್ತಿದ್ದುದಾಗಿ ಗೊತ್ತಾಗಿದೆ. ನಗದು ರೂಪದಲ್ಲೇ ಅವರು ಅಧಿಕಾರಿಗಳಿಗೆ ಹಣ ಸಂದಾಯ ಮಾಡುತ್ತಿದ್ದರು ಎಂಬ ಮಾಹಿತಿಯೂ ಇದೆ. ಹೀಗಾಗಿ ಕೆಲ ಮಧ್ಯವರ್ತಿಗಳ ವಿವರ ಕಲೆಹಾಕಲಾಗುತ್ತಿದೆ. ‍ವಿಶೇಷ ತನಿಖಾ ತಂಡದವರು ಅವರ ಮೇಲೆ ನಿಗಾ ಇರಿಸಿದ್ದಾರೆ. ಸೂಕ್ತ ಪುರಾವೆಗಳು ಲಭ್ಯವಾದ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೆ ಕರೆತರಲಾಗುತ್ತದೆ’ ಎಂದು ತಿಳಿಸಿವೆ.

‘ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಿವೈಎಸ್‌‍‍‍ಪಿ ಶಾಂತಕುಮಾರ್‌ ಅವರನ್ನು ಮತ್ತೆ ಮೂರು ದಿನ ಸುಪರ್ದಿಗೆ ಪಡೆಯಲಾಗಿದೆ. ಅವರ ವಿಚಾರಣೆ ಮುಂದುವರಿಸಿ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ. ಬಂಧನಕ್ಕೆ ಒಳಗಾಗಿರುವ ಅವರ ಆಪ್ತರ ವಿಚಾರಣೆಯೂ ಮುಂದುವರಿದಿದೆ. ನೇಮಕಾತಿ ವಿಭಾಗದ ಮತ್ತಷ್ಟು ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ’ ಎಂದೂ ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು