ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಡಿವೈಎಸ್ಪಿ, ಪಿಐಗಳ ಕೈವಾಡ?

ಶರಣಾದ ಮಂಜುನಾಥ ಮೇಳಕುಂದಿ
Last Updated 1 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು/ಕಲಬುರಗಿ: 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ ಕಲಬುರಗಿಯ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಿಂದ ರಾಜ್ಯ ರಾಜಧಾನಿಯವರೆಗೂ ವ್ಯಾಪಿಸಿರುವುದು ಖಚಿತವಾಗಿದೆ. ರಾಜ್ಯದ ವಿವಿಧ ಭಾಗಗಳ ಹಲವು ಪೊಲೀಸ್‌ ಅಧಿಕಾರಿಗಳು ಅಕ್ರಮದಲ್ಲಿ ಆರಂಭದಿಂದಲೇ ಭಾಗಿಯಾಗಿರುವ ಸುಳಿವು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಲಭಿಸಿದೆ.

ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಸಿಐಡಿ ನಡೆಸಿರುವ ತನಿಖೆಯಲ್ಲಿ ಖಚಿತವಾಗಿದೆ. ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳನ್ನು ಗುರುತಿಸುವುದು, ಪರೀಕ್ಷಾ ಕೇಂದ್ರಗಳನ್ನು ತೆರೆಯಲು ನಿರಾಕ್ಷೇಪಣಾ ಪತ್ರ ನೀಡುವುದು, ಅಭ್ಯರ್ಥಿಗಳ ಹಂಚಿಕೆ ಸೇರಿದಂತೆ ಆರಂಭಿಕ ಹಂತದಿಂದಲೇ ಕೆಲವು ಪೊಲೀಸ್‌ ಅಧಿಕಾರಿಗಳು ಹಸ್ತಕ್ಷೇಪ ನಡೆಸಿ, ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಮೂವರು ಡಿವೈಎಸ್‌ಪಿಗಳು, ಹತ್ತಕ್ಕೂ ಹೆಚ್ಚು ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು, ಹಲವು ಕಾನ್‌ಸ್ಟೆಬಲ್‌ಗಳು ನೇಮಕಾತಿ ಅಕ್ರಮದಲ್ಲಿ ಶಾಮೀಲಾಗಿರುವ ಕುರಿತು ತನಿಖಾ ತಂಡಕ್ಕೆ ಪ್ರಬಲ ಮಾಹಿತಿ ಲಭ್ಯವಾಗಿದೆ. ಕಲಬುರಗಿ ಜಿಲ್ಲೆಯಲ್ಲೇ ಇಬ್ಬರು ಡಿವೈಎಸ್‌ಪಿಗಳು, ಒಬ್ಬ ಇನ್‌ಸ್ಪೆಕ್ಟರ್‌ ಮತ್ತು ಕೆಲವು ಕಾನ್‌ಸ್ಟೆಬಲ್‌ಗಳು ಅಕ್ರಮಕ್ಕೆ ಕೈಜೋಡಿಸಿರುವ ಶಂಕೆ ಇದೆ. ವಿಚಾರಣೆಗೆ ಹಾಜರಾಗುವಂತೆ ಈ ಎಲ್ಲರಿಗೂ ನೋಟಿಸ್‌ ನೀಡಲು ಸಿದ್ಧತೆ ನಡೆದಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ಪ್ರಕರಣದಲ್ಲಿ ಬಂಧಿತರಾಗಿರುವ ರುದ್ರಗೌಡ ಪಾಟೀಲ ಹಾಗೂ ಕೆಲವು ಅಭ್ಯರ್ಥಿಗಳು ತನಿಖಾ ತಂಡದ ಎದುರು ನೀಡಿರುವ ಹೇಳಿಕೆಗಳನ್ನು ತಾಳೆ ಮಾಡಿದಾಗ ಪೊಲೀಸ್‌ ಅಧಿಕಾರಿಗಳ ಪಾತ್ರದ ಬಗ್ಗೆ ಬಲವಾದ ಸುಳಿವು ದೊರಕಿವೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವಂತೆ ಪೊಲೀಸ್‌ ಅಧಿಕಾರಿಗಳೇ ರುದ್ರಗೌಡ ಪಾಟೀಲಗೆ ಸೂಚನೆ ನೀಡಿದ್ದರು. ಪರೀಕ್ಷೆ ಮುಗಿದ ಬಳಿಕ ಕಾನ್‌ಸ್ಟೆಬಲ್‌ಗಳ ಮೂಲಕ ಅಭ್ಯರ್ಥಿಗಳು ಹಣ ರವಾನಿಸಿದ್ದರು. ಹಣ ಹಂಚಿಕೆ ಕುರಿತು ರುದ್ರಗೌಡ ತೀರ್ಮಾನಿಸಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲಬುರಗಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 25ಕ್ಕೇರಿದೆ. ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮದ ಕುರಿತು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರತ್ಯೇಕ ಪ್ರಕರಣದಲ್ಲಿ ಬಂಧಿತರಾಗಿರುವ 12 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ನೀಡಲಾಗಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅವರನ್ನು ಸಿಐಡಿ ತನಿಖಾ ತಂಡದ ವಶಕ್ಕೆ ನೀಡಲಾಗುತ್ತದೆ.

ಶರಣಾದ ಎಂಜಿನಿಯರ್‌ ಮಂಜುನಾಥ: 20 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಭಾನುವಾರ ಸಿಐಡಿ ಅಧಿಕಾರಿಗಳ ಎದುರು ಶರಣಾದರು.

ಕಲಬುರಗಿಯ ಐವಾನ್‌ ಇ ಶಾಹಿ ಅತಿಥಿಗೃಹದಲ್ಲಿನ ಸಿಐಡಿ ಕ್ಯಾಂಪ್‌ ಕಚೇರಿಗೆಆಟೊದಲ್ಲಿ ಬಂದ ಮಂಜುನಾಥ, ಜೊತೆಗೆ ತಂದಿದ್ದ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಕಚೇರಿ ಒಳಗೆ ಹೋದರು. ಸ್ಥಳದಲ್ಲಿದ್ದ ಮಾಧ್ಯಮದವರನ್ನು ಕಂಡು ‘ನನ್ನದೇನೂ ತಪ್ಪಿಲ್ಲ. ಸುಮ್ಮನೇ ಪ್ರಕರಣದಲ್ಲಿ ಸಿಕ್ಕಿಸುತ್ತಿದ್ದಾರೆ’ ಎನ್ನುತ್ತಲೇ ಮುಂದೆ ಸಾಗಿದರು.

ಇಲ್ಲಿನ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್‌ ಪ್ರತಿಯಲ್ಲಿ ಉತ್ತರಗಳನ್ನು ತಿದ್ದಿಸಿ ಅಕ್ರಮ ಎಸಗಿದ ಆರೋಪ ಇವರ ಮೇಲಿದೆ. ಮಂಜುನಾಥ ಸೇರಿದಂತೆ, ಅಭ್ಯರ್ಥಿಗಳಾದ ರವೀಂದ್ರ ಮೇಳಕುಂದಿ, ಶಾಂತಿಬಾಯಿ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಬಂಧನಕ್ಕೆ ನ್ಯಾಯಾಲಯ ವಾರೆಂಟ್‌ ಹೊರಡಿಸಿತ್ತು.

ಮತ್ತಷ್ಟು ಎಂಜಿನಿಯರ್‌ಗಳು ಭಾಗಿ?: ಮಂಜುನಾಥ ಮೇಳಕುಂದಿ ನಿಕಟವರ್ತಿಗಳಾಗಿರುವ ಜಲ ಸಂಪನ್ಮೂಲ ಇಲಾಖೆಯ ಮತ್ತಷ್ಟು ಎಂಜಿನಿಯರ್‌ಗಳು ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಮೇಲೆ ತನಿಖೆ ಮುಂದುವರಿದಿದೆ.

‘ಹಗರಣದಿಂದ ಹರಿದುಬಂತು ಅಪಾರ ಹಣ’

‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದು ನಿಜ. ಇದಕ್ಕೆ ದೊಡ್ಡ ಮೊತ್ತದ ಹಣ ಹರಿದು ಬಂದಿದ್ದೂ ನಿಜ’ ಎಂದು ಸಿಐಡಿ ವಶದಲ್ಲಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಹಿರಂಗಪಡಿಸಿದ್ದಾಗಿ ಮೂಲಗಳು ತಿಳಿಸಿವೆ.

‘ಪರೀಕ್ಷೆ ವೇಳೆ ಎರಡು ತಂಡಗಳು ವಾಮಮಾರ್ಗ ಅನುಸರಿಸಿವೆ. ರುದ್ರಗೌಡ ಡಿ. ಪಾಟೀಲ ಹಾಗೂ ಸಹಚರರು ಬ್ಲೂಟೂತ್‌ ಉಪಕರಣ ಬಳಸುವ ಉಪಾಯ ಮಾಡಿದರೆ, ಮಂಜುನಾಥ ಮೇಳಕುಂದಿ ತಂಡ ಒಎಂಆರ್‌ ಶೀಟಿನಲ್ಲಿ ಉತ್ತರ ತಿದ್ದುವ ದಾರಿ ಅನುಸರಿಸಿತ್ತು. ಈ ಇಬ್ಬರ ತಂಡಗಳಲ್ಲೂ ದೊಡ್ಡ ಮೊತ್ತದ ಹಣ ಹರಿದಾಡಿದೆ. ಆದರೆ, ಎಷ್ಟು ಎಂದು ಸ್ಪಷ್ಟವಾಗಿ ಗೊತ್ತಿಲ್ಲ’ ಎಂದು ತಪ್ಪೊಪ್ಪಿಕೊಂಡಿರುವುದಾಗಿ ಗೊತ್ತಾಗಿದೆ.

‘ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಯೋಜನೆ ರೂಪಿಸಿದ್ದನ್ನು ಮೊದಲೇ ನನಗೆ ಹೇಳಿದ್ದರು. ರುದ್ರಗೌಡ, ಮಂಜುನಾಥ ಕೂಡ ಕಾಶಿನಾಥ ಸಂಪರ್ಕದಲ್ಲಿದ್ದರು’ ಎಂದು ವಿಚಾರಣೆ ವೇಳೆ ದಿವ್ಯಾ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬ್ಲೂಟೂತ್‌ ಬಳಸಲು ವಿಶೇಷ ತರಬೇತಿ!

ಪರೀಕ್ಷಾ ಕೇಂದ್ರದ ಒಳಗೆ ಬ್ಲೂಟೂತ್‌ ಉಪಕರಣ ಒಯ್ಯುವುದು ಹೇಗೆ? ಅದನ್ನು ಎಲ್ಲಿ, ಹೇಗೆ ಇಟ್ಟುಕೊಳ್ಳಬೇಕು, ಅನುಮಾನ ಬಂದರೆ ಯಾವ ರೀತಿ ಶಬ್ದ ನೀಡಬೇಕು,ಉತ್ತರ ಸ್ಪಷ್ಟವಾಗಿ ಕೇಳಿಸುವಂತೆಹೊರಗಿನವರು ಹೇಳುವುದು ಹೇಗೆ?–ಹೀಗೆ ಎಲ್ಲ ರೀತಿಯ ತರಬೇತಿಯನ್ನೂ ರುದ್ರಗೌಡ ತನ್ನ ಅಭ್ಯರ್ಥಿಗಳಿಗೆ ನೀಡಿದ್ದರು.

ಅಭ್ಯರ್ಥಿಗಳು ಒಳಉಡುಪಿನಲ್ಲಿ ಬ್ಲೂಟೂತ್‌ ಉಪಕರಣ ಇಟ್ಟುಕೊಂಡು ಹೋಗಬೇಕು. ಪರೀಕ್ಷೆ ಆರಂಭವಾದ ಮೇಲೆ ಒಮ್ಮೆ ಕೆಮ್ಮಿದರೆ ಅವರಿಗೆ ಉತ್ತರ ಕೇಳಿಸುತ್ತದೆ ಎಂದರ್ಥ. ಆಗ ಹೊರಗೆ ಮೊಬೈಲ್‌, ಪ್ರಶ್ನೆ ಪತ್ರಿಕೆ ಇಟ್ಟುಕೊಂಡು ಕುಳಿತ ವ್ಯಕ್ತಿ ಉತ್ತರ ಹೇಳಲು ಶುರು ಮಾಡಬೇಕು. ಮಧ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ಮತ್ತೆ ಕೆಮ್ಮಬೇಕು. ಆ ಶಬ್ದ ಕೇಳಿಸಿದ ತಕ್ಷಣ ಹೊರಗಿನ ವ್ಯಕ್ತಿ ಮತ್ತೆ ಸರಿಯಾಗಿ ಹೇಳಬೇಕು. ಪ್ರತಿಯೊಂದು ಪ್ರಶ್ನೆಯ ಸಂಖ್ಯೆಯನ್ನು ಮೂರು ಬಾರಿ, ಅದರ ಉತ್ತರವನ್ನೂ ಮೂರು ಬಾರಿ ಹೇಳುವುದನ್ನು ಚಾಚೂ ತಪ್ಪದಂತೆ ಪಾಲಿಸಬೇಕು ಎಂಬುದನ್ನು ತರಬೇತಿ ವೇಳೆ ಹೇಳಿಕೊಡಲಾಗಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಿಗೆ ಬಂದಿದೆ.

‘ದೈಹಿಕ ಸಹಿಷ್ಣುತಾ ಪರೀಕ್ಷೆಯನ್ನೂ ನಡೆಸಿ’

‘ಪಿಎಸ್‌ಐ ನೇಮಕಾತಿಗೆ ನಡೆದ ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಎರಡು ಎಫ್‌ಐಆರ್‌ಗಳೂ ದಾಖಲಾಗಿವೆ. ಹಾಗಿದ್ದರೆ, ಇದರ ತನಿಖೆ ನಡೆಸುವವರು ಯಾರು’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

‘ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿದ್ದ ಅಭ್ಯರ್ಥಿಗಳಿಗೆ ಮಾತ್ರ ಮತ್ತೆ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಬೇಕು. ಅಲ್ಲದೇ, ನ್ಯಾಯವಾಗಿ ನೇಮಕವಾಗಿದ್ದ ಹಲವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರಿಗೆ ಅನ್ಯಾಯ ಆಗದಂತೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನೂ ಸ್ಪಷ್ಟಪಡಿಸಬೇಕು’ ಎಂದೂ ಭಾನುವಾರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT