ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಹಗರಣ| ₹30 ಲಕ್ಷ ಒಪ್ಪಂದಕ್ಕೆ ಸಹೋದ್ಯೋಗಿ ಸಹಾಯ ಪಡೆದಿದ್ದ ರಚನಾ

ಪಿಎಸ್‌ಐ ನೇಮಕಾತಿ ಅಕ್ರಮ: ನ್ಯಾಯಾಂಗ ಬಂಧನಕ್ಕೆ ರಚನಾ l ವಿಚಾರಣೆ ವೇಳೆ ಹಲವು ಮಾಹಿತಿ ಬಯಲು
Last Updated 6 ಸೆಪ್ಟೆಂಬರ್ 2022, 22:11 IST
ಅಕ್ಷರ ಗಾತ್ರ

ಬೆಂಗಳೂರು: 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿ ರಾಜ್ಯಕ್ಕೆ ಮೊದಲ ರ‍್ಯಾಂಕ್ (ಮಹಿಳಾ ವಿಭಾಗ) ಪಡೆದಿದ್ದ ರಚನಾ ಹನುಮಂತ, ತಾನು ಕೆಲಸ ಮಾಡುತ್ತಿದ್ದ ಕಂಪನಿ ಸಹೋದ್ಯೋಗಿ ಸಹಾಯದಿಂದ ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿಯನ್ನು ಸಂಪರ್ಕಿಸಿ ಒಪ್ಪಂದ ಮಾಡಿಕೊಂಡಿದ್ದ ಮಾಹಿತಿ ಸಿಐಡಿ ತನಿಖೆಯಿಂದ ಗೊತ್ತಾಗಿದೆ.

ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ರಚನಾ ಅವರನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಸಿಐಡಿ ಅಧಿಕಾರಿಗಳು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ, ರಚನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸಿಐಡಿ ವಿಚಾರಣೆ ವೇಳೆ ಅಕ್ರಮದ ಬಗ್ಗೆ ಹಲವು ಮಾಹಿತಿಯನ್ನು ರಚನಾ ಅವರು ಬಾಯ್ಬಿಟ್ಟಿದ್ದಾರೆ.

‘ವಿಜಯಪುರದ ಬಸವನ ಬಾಗೇವಾಡಿಯ ರಚನಾ, ಎಂಜಿನಿಯರಿಂಗ್ ಪದವೀಧರೆ. ವ್ಯಾಸಂಗದ ಬಳಿಕ ಎರಡು ಬಾರಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಎದುರಿಸಿದ್ದರು. ಆದರೆ, ಪರೀಕ್ಷೆಯಲ್ಲಿ ಉತ್ತೀರ್ಣವಾಗಿರಲಿಲ್ಲ. ಹೀಗಾಗಿ, ಕಂಪನಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದರು’ ಎಂದು ಸಿಐಡಿ ಮೂಲಗಳು
ಹೇಳಿವೆ.

‘ಕೆಲಸಕ್ಕಿದ್ದ ಕಂಪನಿಯಲ್ಲಿ ರಚನಾ ಅವರಿಗೆ ಸಹೋದ್ಯೋಗಿಯೊಬ್ಬರ ಪರಿಚಯವಾಗಿತ್ತು. ಅವರ ಜೊತೆ ಹಲವು ವಿಷಯ ಹಂಚಿಕೊಳ್ಳುತ್ತಿದ್ದ ರಚನಾ, ಪಿಎಸ್‌ಐ ಆಗಬೇಕೆಂಬ ಆಸೆ ಹೇಳಿಕೊಂಡಿದ್ದರು. ಪ್ರಕರಣದ ಆರೋಪಿಯೂ ಆಗಿರುವ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಗುರುವ ಬಸವರಾಜ ಸ್ನೇಹಿತರೇ ಆಗಿದ್ದ ಸಹೋದ್ಯೋಗಿ, ಪಿಎಸ್ಐ ಆಗಲು ಸಹಾಯ ಮಾಡುವುದಾಗಿ ಹೇಳಿದ್ದರು. ಬಸವರಾಜನ ಪರಿಚಯ ಸಹ ಮಾಡಿಸಿದ್ದರು.’

‘₹ 35 ಲಕ್ಷ ಕೊಟ್ಟರೆ ಪಿಎಸ್ಐ ಮಾಡಿಸುವುದಾಗಿ ಬಸವರಾಜ ಹೇಳಿದ್ದ. ‘ನನಗೆ ತಂದೆ ಇಲ್ಲ. ತಾಯಿ ಮಾತ್ರವಿದ್ದು, ಬಡ ಕುಟುಂಬ ನಮ್ಮದು’ ಎಂದು ರಚನಾ ಹೇಳಿದ್ದರು. ಅಂತಿಮವಾಗಿ ₹ 30 ಲಕ್ಷಕ್ಕೆ ಒಪ್ಪಂದವಾಗಿತ್ತು. ಸಂಬಂಧಿಕರು, ಸಹೋದರರ ಬಳಿ ₹ 15 ಲಕ್ಷ ಸಾಲ ಪಡೆದಿದ್ದ ರಚನಾ, ಅದನ್ನೇ ಬಸವರಾಜಗೆ ನೀಡಿದ್ದರು. ಅದೇ ಹಣ, ಇನ್ನೊಬ್ಬ ಆರೋಪಿಯಾದ ಆರ್‌ಪಿಐ ಎಸ್‌.ವಿ. ಮಧು ಮೂಲಕ ಪೊಲೀಸ್ ನೇಮಕಾತಿ ವಿಭಾಗದ ಎಫ್‌ಡಿಎ ಹರ್ಷನಿಗೆ ನೀಡಲಾಗಿತ್ತು. ನಂತರವೇ ರಚನಾ ಅವರ ಒಎಂಆರ್‌ ಪ್ರತಿ ತಿದ್ದುಪತಿ ಮಾಡಿ ರ‍್ಯಾಂಕ್ ಬರುವಂತೆ ಮಾಡಲಾಗಿತ್ತು’ ಎಂದೂ ಮೂಲಗಳು
ತಿಳಿಸಿವೆ.

‘ರಚನಾಗೆ ಸಹಾಯ ಮಾಡಿದ್ದ ಸಹೋದ್ಯೋಗಿ, ಯಾವುದೇ ಹಣ ಪಡೆದಿಲ್ಲ. ರಚನಾ ಹಾಗೂ ಬಸವರಾಜ ಅವರನ್ನು ಒಮ್ಮೆ ಮಾತ್ರ ಪರಿಚಯ ಮಾಡಿಕೊಂಡಿದ್ದರು. ಇದಾದ ನಂತರ, ಆರೋಪಿಗಳೇ ಹೆಚ್ಚು ಬಾರಿ ಮಾತನಾಡಿ ಅಕ್ರಮ ಎಸಗಿದ್ದರು. ಸಹೋದ್ಯೋಗಿಯನ್ನು ಈಗಾಗಲೇ ವಿಚಾರಣೆ ಮಾಡಲಾಗಿದೆ. ಅವರ ಹೇಳಿಕೆ ಪಡೆದು, ಪ್ರಕರಣದಲ್ಲಿ ಸಾಕ್ಷಿದಾರರಾಗಿ ಪರಿಗಣಿಸಲಾಗಿದೆ’ ಎಂದೂ ಹೇಳಿವೆ.

ಪಿಎಸ್‌ಐ: ಮತ್ತೊಬ್ಬ ಅಭ್ಯರ್ಥಿ ಬಂಧನ

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಭ್ಯರ್ಥಿ ಎ.ಪಿ. ಮನೋಜ್‌ ಎಂಬುವವರನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

‘ಜೆ.ಪಿ.ನಗರದ ಮಾರೇನಹಳ್ಳಿ ನಿವಾಸಿ ಮನೋಜ್, ಪಿಎಸ್ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 46ನೇ ರ‍್ಯಾಂಕ್ ಪಡೆದಿದ್ದ. ಈತನ ಒಎಂಆರ್ ಪ್ರತಿ ಪರಿಶೀಲಿಸಿದಾಗ, ಅಕ್ರಮ ಎಸಗಿದ್ದು ಪತ್ತೆಯಾಗಿತ್ತು. ಈತನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಏಪ್ರಿಲ್ 30ರಂದು ಎಫ್‌ಐಆರ್ ದಾಖಲಿಸಲಾಗಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ಮನೋಜ್ ನಾಪತ್ತೆಯಾಗಿದ್ದ. ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಬಂದಿರಲಿಲ್ಲ. ಹಲವೆಡೆ ಶೋಧ ನಡೆಸಿದರೂ ಈತನ ಸುಳಿವು ಪತ್ತೆ ಸಾಧ್ಯವಾಗಿರಲಿಲ್ಲ. ಈತನ ಬಂಧನಕ್ಕೆ ನ್ಯಾಯಾಲಯ ಸಹ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು’ ಎಂದೂ ತಿಳಿಸಿವೆ.

10 ದಿನ ಕಸ್ಟಡಿಗೆ: ‘ಮನೋಜ್‌ನನ್ನು ನ್ಯಾಯಾಲಯಕ್ಕೆ ಮಂಗಳವಾರವೇ ಹಾಜರು
ಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT