ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ಪ್ರೇರಣೆ: ರಾಜ್ಯದಲ್ಲಿ ದಾಖಲೆ ಸಂಖ್ಯೆಯಲ್ಲಿ ಅಂಗಾಂಗ ದಾನ

Last Updated 28 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿದ್ದು, ಈ ವರ್ಷ ಈಗಾಗಲೇ 122 ಮಂದಿ ಅಂಗಾಂಗಗಳನ್ನು ದಾನ ಮಾಡಿದ್ದಾರೆ.ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಡಿ (ಸೊಟ್ಟೊ) ಈವರೆಗೆ ಅಂಗಾಂಗ ದಾನ ಮಾಡಿದವರ ಗರಿಷ್ಠ ಸಂಖ್ಯೆ ಇದಾಗಿದೆ.

2021ರ ಅ.29ರಂದು ಮೃತಪಟ್ಟ ನಟ ಪುನೀತ್ ರಾಜ್‌ಕುಮಾರ್,ತಮ್ಮ ಕಣ್ಣುಗಳನ್ನು ದಾನ ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದರು. ನಾರಾಯಣ ನೇತ್ರಾಲಯದಲ್ಲಿಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಪುನೀತ್ ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಒದಗಿಸಲಾಗಿತ್ತು. ಕಳೆದ ವರ್ಷರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಟ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಕುಟುಂ
ಬದ ಸದಸ್ಯರು ದಾನ ಮಾಡಿದ್ದರು.ಪುನೀತ್ ಹಾಗೂ ಸಂಚಾರಿ ವಿಜಯ್ ಅವರ ಪ್ರೇರಣೆಯಿಂದ ಹಲವರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಈ ಮೊದಲು ಜೀವಸಾರ್ಥಕತೆ ಹೆಸರಿನಿಂದ ನೋಂದಾಯಿಸಲಾಗಿದ್ದ ಸೊಟ್ಟೊ, ಅಂಗಾಂಗ ದಾನಕ್ಕೆ ಉತ್ತೇಜನ ನೀಡುವುದು ಹಾಗೂ ಮೃತ ದಾನಿಗಳಿಂದ ಅಂಗಾಂಗ ಒದಗಿಸುವ ಕಾರ್ಯವನ್ನು ಮಾಡುತ್ತಿದೆ.ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ.2019ರಲ್ಲಿ 105 ಮಂದಿಯಿಂದ ಅಂಗಾಂಗಗಳನ್ನು ಸಂಗ್ರಹಿಸಲಾಗಿತ್ತು. ಈವರೆಗೆ ಇದೇ ಗರಿಷ್ಠ ಸಂಖ್ಯೆಯಾಗಿತ್ತು. ಕೋವಿಡ್‌ನಿಂದಾಗಿ 2020ರಲ್ಲಿ35 ಹಾಗೂ2021ರಲ್ಲಿ 70 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದರು.

ಹಲವರಿಗೆ ನೆರವು:‘ಅಂಗಾಂಗ ದಾನಕ್ಕೆ ವಯಸ್ಸಿನ ಮಿತಿಯಿಲ್ಲ. ಒಬ್ಬ ದಾನಿಯು 8 ಜೀವಗಳನ್ನು ಉಳಿಸಬಹುದು. ಪುನೀತ್ ಅವರು ಅಂಗಾಂಗ ದಾನ ಮಾಡಿದ್ದರಿಂದ ಜನರಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚಿದೆ. ಇದರಿಂದಾಗಿ ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗ ದಾನ ನಡೆದಿದೆ’ ಎಂದುಸೊಟ್ಟೊ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂತ್ರಪಿಂಡಕ್ಕೆ ಬೇಡಿಕೆ

ಅಂತಿಮ ಹಂತದ ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೊಟ್ಟೊ ಸಂಸ್ಥೆ ನೆರವಾಗುತ್ತಿದೆ. ಸಂಸ್ಥೆಯಡಿ ಮೂತ್ರಪಿಂಡಕ್ಕಾಗಿ 4,601 ಮಂದಿ, ಯಕೃತ್ತಿಗಾಗಿ 1,267 ಮಂದಿ, ಹೃದಯಕ್ಕಾಗಿ 114 ಮಂದಿ ಹಾಗೂ ಶ್ವಾಸಕೋಶ
ಕ್ಕಾಗಿ 46 ಮಂದಿಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ಯತೆ ಅನುಸಾರ ಸಂಸ್ಥೆಯು ಅಂಗಾಂಗಗಳನ್ನು ಒದಗಿಸುತ್ತಿದೆ.

85 ಸಾವಿರ ಜನ ಪ್ರತಿಜ್ಞೆ

ನೇತ್ರದಾನದ ಹೆಸರು ನೋಂದಣಿಗೆಂದೇ ರಾಜ್‌ಕುಮಾರ್ ನೇತ್ರ ಬ್ಯಾಂಕ್‌ ಮತ್ತು ನಾರಾಯಣ ನೇತ್ರಾಲಯವು ಆನ್‌ಲೈನ್‌ನಲ್ಲೇ ನೇತ್ರದಾನದ ಪ್ರತಿಜ್ಞೆ ತೆಗೆದುಕೊಳ್ಳುವ ಅವಕಾಶವನ್ನು ನೀಡಿತ್ತು. ಇದರಿಂದಾಗಿ ಕಳೆದೊಂದು ವರ್ಷದಲ್ಲೇ ಸುಮಾರು 85 ಸಾವಿರ ಜನರು ಈ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ.

‘ಪುನೀತ್‌ ನಿಧನದ ಒಂದು ತಿಂಗಳ ಅವಧಿಯಲ್ಲಿ ಸುಮಾರು 20 ಸಾವಿರ ಜನರು ನೇತ್ರದಾನದ ಪ್ರತಿಜ್ಞೆ ಮಾಡಿದ್ದರು. ಕಳೆದೊಂದು ವರ್ಷದಲ್ಲಿ ಸುಮಾರು 2 ಸಾವಿರ ನೇತ್ರಗಳನ್ನು ದಾನವಾಗಿ ಸ್ವೀಕರಿಸಲಾಗಿದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT