ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಮರ ಕಡಿತಲೆ: ತಡೆಯಾಜ್ಞೆ ತೆರವಿಗೆ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ವತಿಯಿಂದ ಬೆಂಗಳೂರು ನಗರದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ 7,000 ಮರಗಳನ್ನು ಕಡಿಯುವುದಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌, ಮರಗಳ ಕಡಿತಲೆಗೆ ತಡೆಯಾಜ್ಞೆ ನೀಡಿರುವ ಕುರಿತು ಮಾಹಿತಿ ಪಡೆದರು. ತಡೆಯಾಜ್ಞೆ ತೆರವಿಗೆ ಅಗತ್ಯವಿರುವ ಕ್ರಮಕ್ಕೆ ಸೂಚಿಸಿದರು. ಜಮೀನು ಲಭ್ಯವಿರುವ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸುವಂತೆಯೂ ನಿರ್ದೇಶನ ನೀಡಿದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್‌ಎಚ್‌ಡಿಪಿ) ನಾಲ್ಕನೇ ಹಂತದ ಕಾಮಗಾರಿಗಳಿಗೆ ಯೋಜನಾ ವರದಿ ತಯಾರಿಗೆ ಶೀಘ್ರವಾಗಿ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಪಘಾತ ವಲಯಗಳನ್ನು ಗುರುತಿಸಿ ಸುಧಾರಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಯಾಗಿರುವ ರಸ್ತೆ, ಸೇತುವೆಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡಬೇಕು ಎಂದು ಅವರು ಸೂಚಿಸಿದರು.

ರಾಜ್ಯದ ಬಜೆಟ್‌ ಗಾತ್ರದಲ್ಲಿ ಹೆಚ್ಚಳ ಆಗಿದ್ದರೂ, ಲೋಕೋಪಯೋಗಿ ಇಲಾಖೆಗೆ ನೀಡುತ್ತಿರುವ ಅನುದಾನದಲ್ಲಿ ಐದು ವರ್ಷಗಳಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಇಲಾಖೆಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಸಚಿವರಿಗೆ ತಿಳಿಸಿದರು. ಐದು ವರ್ಷಗಳ ಬಜೆಟ್‌ ಗಾತ್ರ ಮತ್ತು ಅನುದಾನ ಹಂಚಿಕೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಸಲ್ಲಿಸುವಂತೆ ಸಚಿವರು ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು