ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ: ನೋಂದಣಿ ಆರಂಭ

ಖರೀದಿ ಕೇಂದ್ರಗಳಲ್ಲಿ ಮಧ್ಯಾಹ್ನದ ನಂತರ ಸರ್ವರ್‌ ಸಮಸ್ಯೆ ಪರಿಹಾರ
Last Updated 26 ಏಪ್ರಿಲ್ 2022, 17:35 IST
ಅಕ್ಷರ ಗಾತ್ರ

ಬೆಂಗಳೂರು/ಮೈಸೂರು: ಸರ್ವರ್‌ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ಮಂಗಳವಾರ ಮಧ್ಯಾಹ್ನದ ನಂತರ ಸುಗಮವಾಗಿ ಆರಂಭವಾಗಿದೆ.

ರಾಗಿ ಬೆಳೆಗಾರರು ಹೆಸರು ನೋಂದಾಯಿಸಲು ಮೊದಲ ದಿನವಾದ ಸೋಮವಾರವೇ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇದರಿಂದ ಬೇಸತ್ತು ಖರೀದಿ ಕೇಂದ್ರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ರೈತರು ಪ್ರತಿಭಟನೆ ನಡೆಸಿದ್ದರು. ಅವರಿಗೆಲ್ಲಾ ಟೋಕನ್ ಕೊಟ್ಟು ಕಳುಹಿಸಲಾಗಿತ್ತು.

ರಾಗಿ ಹೆಚ್ಚಾಗಿ ಬೆಳೆಯುವ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಹಾಸನ, ಚಾಮರಾಜನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರು ಮಂಗಳವಾರ ಬೆಳಿಗ್ಗೆಯಿಂದಲೇ ಖರೀದಿ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು.
ಸರ್ವರ್ ಸಮಸ್ಯೆ ಸರಿಪಡಿಸಿ ಮಧ್ಯಾಹ್ನದ ನಂತರ ಹೆಸರು ನೋಂದಣಿ ಪ್ರಕ್ರಿಯೆ ಆರಂಭಿಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಹಾಗೂ ಕೆಲವೆಡೆ ಇನ್ನೂ ಸರ್ವರ್‌ ಸಮಸ್ಯೆ ಪರಿಹಾರವಾಗಲಿಲ್ಲ. ಸುತ್ತಮುತ್ತಲ ಗ್ರಾಮಗಳಿಂದ ಬಂದು ಬೆಳಿಗ್ಗೆಯಿಂದ ಕಾದು ಕುಳಿತು ಬೇಸತ್ತ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ರಾಮನಗರ ಜಿಲ್ಲೆಯ ಮಾಗಡಿಯಲ್ಲೂ ನೋಂದಣಿ ಆರಂಭವಾಗಲಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಸರ್ವರ್‌ ಸಮಸ್ಯೆ ಸರಿಯಾದ ಬಗ್ಗೆ ರೈತರಿಗೆ ಮಾಹಿತಿ ಸಿಗದ ಕಾರಣ ಮಂಗಳವಾರ ಪ್ರಕ್ರಿಯೆ ನಡೆದಿಲ್ಲ. ಬುಧವಾರ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನೋಂದಣಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1.14 ಲಕ್ಷ ಮೆಟ್ರಿಕ್ ಟನ್ ಖರೀದಿ: ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಕ್ವಿಂಟಲ್‍ಗೆ ₹3,377 ದರದಲ್ಲಿ ರಾಗಿ ಖರೀದಿಸಲಾಗುತ್ತದೆ. ಉತ್ಪಾದನೆಗೆ ಅನುಗುಣವಾಗಿ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿಸ
ಲಾಗುತ್ತದೆ. ರಾಜ್ಯದಲ್ಲಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇಷ್ಟು ಪ್ರಮಾಣದ ಖರೀದಿಗೆ ನೋಂದಣಿಯಾದ ಕೂಡಲೇ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT