ಭಾನುವಾರ, ಅಕ್ಟೋಬರ್ 24, 2021
22 °C
ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನ

ಆಸ್ಕರ್‌ಗೆ ಅಂತಿಮ ನಮನ: ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಧಾರ್ಮಿಕ ವಿಧಿ ವಿಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರದ ಅಂತಿಮ ಧಾರ್ಮಿಕ ವಿಧಿ ವಿಧಾನಗಳು ಹೊಸೂರು ರಸ್ತೆಯ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಗುರುವಾರ ನಡೆಯಿತು.

ಆಸ್ಕರ್ ಅವರ ಪತ್ನಿ ಬ್ಲಾಸಂ ಫರ್ನಾಂಡಿಸ್‌, ಪುತ್ರ ಓಶನ್‌, ಪುತ್ರಿ ಓಶನಿ, ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಇದ್ದರು.

ಅಂತಿಮ ಪ್ರಾರ್ಥನೆಯ ಸಂದರ್ಭದಲ್ಲಿ ಇದೇ ವೇಳೆ ಪುತ್ರಿ ಓಶನಿ, ಅಪ್ಪನ ರಾಜಕೀಯ ಬದುಕು, ಸಾಮಾಜಿಕ ಚಟುವಟಿಕೆ, ಅಪ್ಪನಿಗೆ ನೆರಳಾಗಿ ನಿಂತು ಕುಟುಂಬ ಪೊರೆದ ಅಮ್ಮನ ಪರಿ, ಅಪ್ಪ ಆಸ್ಪತ್ರೆಯಲ್ಲಿದ್ದ ಕೊನೆಯ 55 ದಿನಗಳ ಕಾಲ ಸಲ್ಲಿಸಿದ ಸೇವೆಯನ್ನು ಮೆಲುಕಿ ಹಾಕಿದರು. ಮಾರ್ಗರೇಟ್‌ ಆಳ್ವಾ ಕೂಡಾ ಆಸ್ಕರ್‌ ಅವರ ಗುಣಗಾನ ಮಾಡಿ, ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಬ್ಲಾಸಂ ಫರ್ನಾಂಡಿಸ್‌ ಭಾವುಕರಾಗಿ ಕಣ್ಣೀರಿಟ್ಟರು.

ಅದಕ್ಕೂ ಮೊದಲು ಬ್ರಿಗೇಡ್ ರಸ್ತೆಯಲ್ಲಿರುವ ಆಸ್ಕರ್ ಅವರ ನಿವಾಸ ರೆಸ್ಟ್ ಹೌಸ್ ಅಪಾರ್ಟ್‌ಮೆಂಟ್‌ಗೆ ತೆರಳಿದ ರಾಹುಲ್ ಗಾಂಧಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಆಸ್ಕರ್ ಅವರ ಪಾರ್ಥಿವ ಶರೀರಕ್ಕೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಬುಧವಾರ ಧಾರ್ಮಿಕ ವಿಧಿ ನಡೆಸಿ, ಅಂತಿಮ ಪಾರ್ಥನೆ ಸಲ್ಲಿಸಿದ ಬಳಿಕ ಬೆಂಗಳೂರಿಗೆ ತರಲಾಗಿತ್ತು. ಗುರುವಾರ ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಡಿ.ಕೆ. ಶಿವಕುಮಾರ್ ಅವರು ಪಕ್ಷದ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು, ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು