ಶನಿವಾರ, ಡಿಸೆಂಬರ್ 3, 2022
21 °C

ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟ: ರೈತಾಪಿ ವರ್ಗಕ್ಕೆ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಹುತೇಕ ಜೂನ್ ತಿಂಗಳು ಪೂರಾ ಮುನಿಸಿಕೊಂಡ ಮಡದಿಯಂತೆ ಬಿಗುಮಾನ ತೋರುತ್ತಾ ಮಳೆರಾಯ ಇಳೆಯೊಂದಿಗೆ ಮಾತು ಬಿಟ್ಟಿದ್ದನು. ಶುಕ್ರವಾರ ಮಾತ್ರ ಜಿಲ್ಲೆಯ ಹಲವು ಕಡೆ ಕೆಲವು ಗಂಟೆಗಳ ಕಾಲ ಸದ್ದು ಮಾಡಿದನು. ಮುನಿಸು ಮರೆತ ಗೆಳತಿಯಂತೆ ಇಳೆಯ ತಬ್ಬಿನಿಂತನು. ಹೀಗಾಗಿ ಮಧ್ಯಾಹ್ನದ ನಂತರ ನಗರದಲ್ಲಿ ಕಂಡದ್ದು ಬರೀ ಮಳೆ, ಮಳೆ, ಮಳೆ...

ಜೂನ್‌ನಲ್ಲಿ ಆಗೊಮ್ಮೆ, ಈಗೊಮ್ಮೆ ಹೊರತುಪಡಿಸಿ ಜಿಲ್ಲೆಯಲ್ಲಿ ಬರೀ ಮೋಡ– ಗಾಳಿಯ ಜುಗಲ್‌ಬಂದಿಯೇ ಕಂಡಿತ್ತು. ಮೃಗಶಿರಾ, ಆರಿದ್ರಾ ಮಳೆಯ ಸಿಂಚನ ಅಪರೂಪವಾಗಿತ್ತು. ಮುಂಗಾರು ಬಿತ್ತನೆ ಮಾಡಿದ್ದ ರೈತರು ಆಸೆಯ ಕಂಗಳ ಹೊತ್ತು ಮುಗಿಲತ್ತ ಮುಖ ಮಾಡಿದ್ದರು. ಆದರೆ ಮೋಡ ಸಾಂದ್ರಗೊಂಡರೂ ನೆಲಕ್ಕೆ ಹನಿಯಲು ಮಳೆರಾಯ ಹೊಯ್ದಾಡುತ್ತಿದ್ದ. ಇದರಿಂದ ಕೃಷಿಕರ ಮೊಗದಲ್ಲಿ ಬಹುತೇಕ ನಿರಾಶೆಯ ಕಾರ್ಮೋಡವೇ ಆವರಿಸಿತ್ತು.

ಬಿತ್ತನೆಯ ಹದಕ್ಕೆ ಕುಡಿಯೊಡೆದು ಹಸಿರಾದರೂ ಮಳೆಯ ಅಮೃತ ಸಿಂಚನವಾಗದೇ ಪೀಕು ಬಾಡುತ್ತಿರುವುದು ಕಂಡು ಕೃಷಿ ಚಟುವಟಿಕೆಗೆ ಮಂಕು ಕವಿದಿತ್ತು. ’ಬರ‘ ಒಡಮೂಡುವುದೇ ಎಂಬ ಚಿಂತೆಯ ಗೆರೆ ಅನ್ನದಾತರಲ್ಲಿ ಮೂಡಿತ್ತು. ಆದರೆ ತುಸು ಬಿರುಸಾಗಿಯೇ ಸುರಿದ ಮಳೆರಾಯ ಇಳೆ ತೋಯ್ದು ತೊಪ್ಪೆಯಾಗಿಸಿದನು. ಹಸಿರೋತ್ಸವಕ್ಕೆ ಮುನ್ನುಡಿ ಬರೆದನು. ಹೀಗಾಗಿ ಬಾಗಲಕೋಟೆ ಅಕ್ಷರಶಃ ಮಲೆನಾಡಿನ ಸ್ವರೂಪ ಪಡೆಯಿತು. ಮೋಡಗಳ ತಾಕಲಾಟ, ಮಳೆಯ ನಿರಂತರತೆ ಥಂಡಿ ವಾತಾವರಣ ಸೃಷ್ಟಿಸಿತು. ಪುನರ್ವಸು ಮಳೆಯೊಂದಿಗೆ ಕುಳಿರ್ಗಾಳಿಯ ಬಿಸುಪು ಮೈ–ಮನಗಳ ಬಿಸಿಯಾಗಿಸಿತು.

ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ರಸ್ತೆ, ಬಯಲು, ಗಿಡ–ಮರಗಳಿಗೆ ಮಜ್ಜನದ ಸಂಭ್ರಮ. ಡಾಂಬರೀಕರಣಗೊಂಡ ರಸ್ತೆಗಳ ಕಪ್ಪು ಹೊಳಪು ಪಡೆಯಿತು. ಜಡಿ ಮಳೆ ಇದ್ದರೂ ಗುಡುಗು–ಮಿಂಚು, ಸಿಡಿಲಿನ ಆರ್ಭಟ ಕಾಣಸಿಗಲಿಲ್ಲ. ಮಳೆಯ ಕಾರಣ ರಸ್ತೆಗಳಲ್ಲಿ ಜನಸಂಚಾರವೂ ಕಡಿಮೆ ಇತ್ತು. ಮೋಡ ಕವಿದ ವಾತಾವರಣ ನಾಲ್ಕು ಗಂಟೆಗೆ ಬೈಗಿನ ಕಳೆಕಟ್ಟಿತ್ತು. ಹೀಗಾಗಿ ಸಂಜೆಯ ಹೊತ್ತಿಗೆ ಇಡೀ ಊರು ಹೊದ್ದು ಮಲಗಿದಂತೆ ತೋರಿತು.

ಮಳೆಯ ಬಿರುಸಿಗೆ ಬಾಗಲಕೋಟೆ ನಗರದ ಸುತ್ತಲೂ ಹಳ್ಳ–ಕೊಳ್ಳಗಳಲ್ಲಿ ನೀರು ಹರಿಯಿತು. ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳಲ್ಲಿ ಕಳೆದೆರಡು ದಿನಗಳಿಂದ ಮಳೆಯ ಮಾಯೆ ಕಾಡುತ್ತಿದೆ. ಹೀಗಾಗಿ ಹೊಲದಲ್ಲಿ ನೀರು ನಿಂತಿರುವುದು, ಒಡ್ಡುಗಳು ಒಡೆದಿರುವುದು ಕಂಡುಬಂದಿತು. ಹಳ್ಳ ತುಂಬಿ ರಸ್ತೆಗಳತ್ತ ನೀರು ಮುಖಮಾಡಿ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಜಾನಮಟ್ಟಿ 7.5 ಸೆಂ.ಮೀ ಮಳೆ ದಾಖಲು

ಕಳೆದ 24 ಗಂಟೆಯಲ್ಲಿ ಬೀಳಗಿ ತಾಲ್ಲೂಕಿನ ಜಾನಮಟ್ಟಿಯಲ್ಲಿ ಅತಿಹೆಚ್ಚು ಮಳೆ 7.5 ಸೆಂ.ಮೀ, ಬಾಡಗಂಡಿ 6.5 ಸೆಂ.ಮೀ, ಬೀಳಗಿ ಪಟ್ಟಣ 4.6, ಹುನಗುಂದ ತಾಲ್ಲೂಕಿನ ಹಿರೇಮಳಗಾವಿಯಲ್ಲಿ 4.3, ಮುಧೋಳ ತಾಲ್ಲೂಕು ಮೆಳ್ಳಿಗೇರಿ 3.2 ಸೆಂ.ಮೀ ಮಳೆ ಸುರಿದಿದೆ.

ಬೀಳಗಿ ತಾಲ್ಲೂಕಿನ ಅನಗವಾಡಿ 2.5, ಸುನಗ 2.05, ಇಳಕಲ್ ತಾಲ್ಲೂಕಿನ ಕರಡಿ 2.3 ಸೆಂ.ಮೀ, ಮುಧೋಳ ತಾಲ್ಲೂಕಿನ ಶಿರೋಳ 1.4, ಹೆಬ್ಬಾಳ 1.3, ಮಳಲಿ 1.1, ಒಂಟಿಗೋಡಿ 1.05, ಎಸ್.ಕೆ.ಬೂದಿಹಾಳ 1 ಸೆಂ.ಮೀ ಮಳೆ ಬಿದ್ದಿದೆ. ಇಳಕಲ್ ತಾಲ್ಲೂಕಿನ ಹಿರೇಶಿಂಗನಗುತ್ತಿ 1.3 ಸೆಂ.ಮೀ, ಚಿಕ್ಕಕೊಡಗಲಿ 1 ಸೆಂ.ಮೀ ಮಳೆಯಾಗಿದೆ.

ಬಾದಾಮಿ ತಾಲ್ಲೂಕಿನ ಲಾಯದಗುಂದಿ, ಮಂಗಳಗುಡ್ಡ ತಲಾ 1.2 ಸೆಂ.ಮೀ, ಬಾಗಲಕೋಟೆ ತಾಲ್ಲೂಕಿನ ಭಗವತಿ 1.3, ಸೀಗಿಕೇರಿ 1.35 ಹಾಗೂ ಬಾಗಲಕೋಟೆ ನಗರದಲ್ಲಿ 1 ಸೆಂ.ಮೀ ಮಳೆ ಬಿದ್ದಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು