ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಅಕಾಲಿಕ ಮಳೆ, ಕೃಷಿಕರಿಗೆ ಆತಂಕ

ಚಿಕ್ಕಜಾಜೂರುನಲ್ಲಿ ರಾಗಿ ನೀರು ಪಾಲು l ಬ್ಯಾಡಗಿ: ಮೆಣಸಿನಕಾಯಿ ರಕ್ಷಣೆಗೆ ಪಡಿಪಾಟಲು
Last Updated 18 ಫೆಬ್ರುವರಿ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಚಿತ್ರದುರ್ಗ, ಮೈಸೂರು, ಧಾರವಾಡ ಜಿಲ್ಲೆಗಳ ಕೆಲವೆಡೆ ಗುರುವಾರ ಅಕಾಲಿಕ ಮಳೆ ಸುರಿದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾಗಿ ಫಸಲು ನೀರು ಪಾಲಾಗಿದೆ. ಹುಬ್ಬಳ್ಳಿ, ಮೈಸೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಸುರಿದ ಮಳೆಗೆ, ಚಿಕ್ಕಜಾಜೂರಿನಲ್ಲಿ ಒಕ್ಕಣೆ ಮಾಡುತ್ತಿದ್ದ ರಾಗಿ ನೀರುಪಾಲಾಯಿತು.ಅಕಾಲಿಕ ವರ್ಷಧಾರೆ ಕೃಷಿ ಚಟುವಟಿಕೆಗೆ ಅಡ್ಡಿಯಾಯಿತು.

ಗುರುವಾರ ಮಧ್ಯಾಹ್ನದ ಬಳಿಕ ಆವರಿಸಿದ ಮೋಡ ಸಂಜೆಯ ಹೊತ್ತಿಗೆ ಮಳೆಯಾಗಿ ಸುರಿಯಲಾರಂಭಿಸಿತು. ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆ ಸುರಿಯಿತು.

ಚಿಕ್ಕಜಾಜೂರಿನ ರೈತರೊಬ್ಬರು ಒಕ್ಕಲು ಕಣದಲ್ಲಿ ರಾಗಿ ಹುಲ್ಲು ಹರಡಿದ್ದರು. ಮಳೆ ಆರಂಭವಾಗುತ್ತಿದ್ದಂತೆ ಹುಲ್ಲನ್ನು ಒಂದೆಡೆ ಗುಡ್ಡೆಹಾಕಲು ಪ್ರಯತ್ನಿಸಿದರು. ಮಳೆ ಬಿರುಸು ಪಡೆದ ಪರಿಣಾಮ ಒಕ್ಕಲು ಮಾಡಿದ್ದ ರಾಗಿ ಹಾಗೂ ಹುಲ್ಲು ನೀರು ಪಾಲಾದವು.ಅಮೃತಾಪುರ ಗ್ರಾಮದಲ್ಲಿ ರೈತರು ಮೆಕ್ಕೆಜೋಳದ ಕಾಳನ್ನು ಮಳೆಯಿಂದ ರಕ್ಷಿಸಲು ಪರದಾಡಿದರು.

ನಿಧಾನವಾಗಿ ಆರಂಭವಾದ ಮಳೆ ಗುಡುಗು, ಸಿಡಿಲು ಕಾಣಿಸಿಕೊಂಡ ಬಳಿಕ ಬಿರುಸು ಪಡೆಯಿತು. ರಸ್ತೆ, ಚರಂಡಿಯಲ್ಲಿ ನೀರು ಹರಿಯಿತು. ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಮಳೆ ತಂಪೆರೆಯಿತು.

ಗುಡುಗು ಸಹಿತ ಜೋರು ಮಳೆ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಮಳೆ ಸುರಿಯಿತು. ಧಾರವಾಡ, ಹುಬ್ಬಳ್ಳಿ ನಗರಗಳಲ್ಲೂ ಬಿರುಸಿನ ಮಳೆಸುರಿಯಿತು.

ಬೆಳಗಾವಿ, ಬೈಲಹೊಂಗಲ, ನಿಪ್ಪಾಣಿ, ಖಾನಾಪುರ, ಸವದತ್ತಿ, ಗೋಕಾಕ ಹಾಗೂ ಎಂ.ಕೆ.ಹುಬ್ಬಳ್ಳಿ ಭಾಗದಲ್ಲಿ ಮಳೆಯಾಯಿತು. ಬೆಳಗಾವಿಯಲ್ಲಿ ಲಕ್ಷ್ಮಿನಗರದ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು.

ಬ್ಯಾಡಗಿಯಲ್ಲಿ ಸಂಜೆ ಗುಡುಗು ಸಹಿತ ಮಳೆ ಸುರಿದ ಪರಿಣಾಮ ಮೆಣಸಿನಕಾಯಿ ಚೀಲಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ರೈತರು ವರ್ತಕರು ಹರಸಾಹಸ ಪಟ್ಟರು. ಹಂಸಭಾವಿಯಲ್ಲಿ ತುಂತುರ ಮಳೆ ಸುರಿಯಿತು.

ಉತ್ತರ ಕನ್ನಡ ಜಿಲ್ಲೆಕರಾವಳಿಯ ಹೊನ್ನಾವರ ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದ್ದರೆ, ಶಿರಸಿಯಲ್ಲೂ ತುಂತುರು ಹನಿ ಬಿದ್ದಿದೆ.‌ ಅಕಾಲಿಕ ಮಳೆ ಕೃಷಿಕ ಆತಂಕಕ್ಕೆ ಕಾರಣವಾಗಿದೆ.

ಮೈಸೂರು ಭಾಗದಲ್ಲಿ ಮಳೆ
ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಹಲವೆಡೆ ಗುರುವಾರ ಸಂಜೆ ಗುಡುಗು–ಸಿಡಿಲು ಸಹಿತ ತುಂತುರು ಮಳೆಯಾಗಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಮತ್ತು ಹಿರೀಸಾವೆಯಲ್ಲಿ ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ ಬಿರುಸಿನ ಮಳೆಯಾಗಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು
ಖಾನಾಪುರ (ಬೆಳಗಾವಿ):
ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ಗುರುವಾರ ಸಿಡಿಲು ಬಡಿದು ಇಟ್ಟಿಗೆ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅಸು ಗ್ರಾಮದ ನಿವಾಸಿ ಗುರುನಾಥ ಪಾಂಡುರಂಗ ನಾರ್ವೇಕರ್ (20)ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT