ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಂಪೆರೆದ ಅಕಾಲಿಕ ಮಳೆ

Last Updated 14 ಮಾರ್ಚ್ 2023, 22:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಕೆಲದಿನಗಳಿಂದ ಬಿಸಿಲ ಧಗೆಯಿಂದ ಬಸವಳಿದಿದ್ದ ಜನರಿಗೆ ಅಕಾಲಿಕ ಮಳೆ ತುಸು ಸಮಾಧಾನ ಮೂಡಿಸಿತು.

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು, ಬೆಟ್ಟಗೆರೆ ಪ್ರದೇಶದಲ್ಲಿ, ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೆಲವೆಡೆ ಆಲಿಕಲ್ಲುಗಳು ಬಿದ್ದಿವೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಪನ್ಯಾ ಮತ್ತು ಗುಂಡುಗುಟ್ಟಿ ಭಾಗದಲ್ಲಿ ಸುಮಾರು 30 ನಿಮಿಷಗಳ ಕಾಲಸುರಿದ ಆಲಿಕಲ್ಲು ಮಳೆಯಿಂದ ಇಡೀ ಪ್ರದೇಶ ಹಾಲಿನಂತೆ ಕಂಗೊಳಿಸುತ್ತಿತ್ತು. ಮಕ್ಕಳು ಹಾಗೂ ಗ್ರಾಮಸ್ಥರು ಆಲಿಕಲ್ಲುಗಳ ರಾಶಿಯನ್ನು ಹಿಡಿದು ಸಂಭ್ರಮಿಸಿದರು.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಹೋಬಳಿಯಲ್ಲಿಯೂ ಬಿರುಸಿನ ಮಳೆಯಾಗಿದೆ. ಮಡಿಕೇರಿ ನಗರ, ಸಿದ್ದಾಪುರ ವ್ಯಾಪ್ತಿಯಲ್ಲಿ ಹಗುರ ಮಳೆಯಾಗಿದೆ. ಮಳೆಯಿಂದ ಕಾಫಿ ಬೆಳೆಗೆ ಸಹಕಾರಿಯಾಗಿದೆ.

ಚಾಮರಾಜನಗರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ 10 ನಿಮಿಷಗಳ ಕಾಲ ತುಂತುರು ಮಳೆಯಾಯಿತು.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಗುಡುಗು–ಮಿಂಚು, ಗಾಳಿಯ ಆರ್ಭಟ ಇತ್ತು. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಸಮೀಪದ ಪ್ರಾಥಮಿಕ ಶಾಲೆ ಚಾವಣಿಯ ಹೆಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾಗಿ ಅರ್ಧತಾಸು ಮಳೆ ಸುರಿದಿದೆ.

ಕಳಸ ತಾಲ್ಲೂಕಿನ ಬಾಳೆಹೊಳೆ, ಹೊರನಾಡು, ಬಲಿಗೆ, ಕಳಕೊಡು ಭಾಗದಲ್ಲಿ ಬಿರುಸಾಗಿ ಸುರಿದಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಕುಂದೂರು ಭಾಗದಲ್ಲಿ ಮಳೆಯಾಗಿದೆ. ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಉತ್ತಮ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾದ ಹಲವೆಡೆ ಮಳೆಯಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣದೊಂದಿಗೆ ಧಗೆಯಿತ್ತು. ಸಂಜೆ ಸಣ್ಣದಾಗಿ ಗುಡುಗು ಸಹಿತ ಅರ್ಧ ತಾಸು ಮಳೆ ಸುರಿಯಿತು.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆಯಿಂದಾಗಿ ಅಡಿಕೆ ಒಣ ಹಾಕಿದ್ದ ಕೃಷಿಕರಿಗೆ ಸಮಸ್ಯೆಯಾಯಿತು. ಕೆಲವೆಡೆ ಅರಣ್ಯಕ್ಕೆ ಸಣ್ಣ ಪ್ರಮಾಣದಲ್ಲಿ ಬಿದ್ದಿದ್ದ ಬೆಂಕಿ ಅಕಾಲಿಕ ಮಳೆಯಿಂದ ಆರಿದ್ದು ವಿಶೇಷವಾಗಿತ್ತು.

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ರಾತ್ರಿ ಸುಮಾರು 7ರ ಬಳಿಕ ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕಲ್ಮಕಾರು, ಕೊಲ್ಲಮೊಗ್ರು ಭಾಗದಲ್ಲೂ ಸಾಧರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT