ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ: ಅಂತಿಮ ವರದಿ ಸಲ್ಲಿಕೆಗೆ ಹೈಕೋರ್ಟ್ ಅಸ್ತು

Last Updated 3 ಫೆಬ್ರುವರಿ 2022, 16:42 IST
ಅಕ್ಷರ ಗಾತ್ರ

ಬೆಂಗಳೂರು:ಮಾಜಿ ಸಚಿವ ರಮೇಶಜಾರಕಿಹೊಳಿ ಲೈಂಗಿಕ ಹಗರಣದ ಸಿ.ಡಿ ಬಹಿರಂಗ ಪ್ರಕರಣದ ತನಿಖೆಯ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಸಲ್ಲಿಸುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಹೈಕೋರ್ಟ್‌ ವಕೀಲರಾದ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಎಸ್‌ಐಟಿ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ‘ಹೈಕೋರ್ಟ್‌ ನಿರ್ದೇಶನದ ಅನುಸಾರ ಅಂತಿಮ ವರದಿಯನ್ನುಎಸ್‌ಐಟಿ ಮುಖ್ಯಸ್ಥರ ಅವಗಾಹನೆಗೆ ತರಲಾಗಿದೆ ಹಾಗೂ ಇದು ಕ್ರಮಬದ್ದವಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥರು ದೃಢೀಕರಿಸಿದ್ದಾರೆ’ ಎಂದು ವಿವರಿಸಿದರು.

‘ತನಿಖಾ ವರದಿ ಸರಿ ಇದೆಯೊ ಅಥವಾ ತಪ್ಪಿದೆಯೊ ಎಂಬುದನ್ನು ನಿರ್ಧರಿಸುವ ಅಧಿಕಾರ ವ್ಯಾಪ್ತಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಮಾತ್ರ ಇದೆ. ಈ ಕುರಿತಂತೆ ವಿಚಾರಣಾ ಕೋರ್ಟ್‌ ಪರಿಶೀಲನೆ ನಡೆಸುತ್ತದೆ. ಆದ್ದರಿಂದ, ಅಂತಿಮ ವರದಿ ಸಲ್ಲಿಕೆಗೆ ಅವಕಾಶ ನೀಡಬೇಕು’ ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಈ ಪ್ರಕರಣದಲ್ಲಿಸಂತ್ರಸ್ತೆ ಯಾವುದೇ ತಕರಾರು ತೆಗೆಯಬಹುದಾದ ಅವಕಾಶಗಳನ್ನು ಮುಕ್ತವಾಗಿರಿಸಲಾಗಿದೆ. ಈ ತಕರಾರುಗಳನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಪರಿಶೀಲಿಸಬೇಕು. ಅಂತೆಯೇ ಎಸ್‌ಐಟಿ ಕಾನೂನು ಬದ್ಧತೆ ಪ್ರಶ್ನಿಸಿದ ಅರ್ಜಿಯನ್ನು ಮುಂದೆ ನಿರ್ಧರಿಸಲಾಗುವುದು’ ಎಂದು ತಿಳಿಸಿದೆ. ಎಸ್‌ಐಟಿ ಪರ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್ ಹಾಜರಿದ್ದರು.

ಅರೆನಗ್ನ: ವಿಚಾರಣೆ ಕೈಬಿಟ್ಟ ನ್ಯಾಯಪೀಠ:ಈ ಹಿಂದೆ ಇದೇ ಪ್ರಕರಣದ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಶ್ರೀಧರ್ ಎನ್. ಭಟ್ ಎಂಬುವರು ಹೈಕೋರ್ಟ್‌ಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

‘ನಾನು ಉದ್ದೇಶಪೂರ್ವಕ
ವಾಗಿ ಈ ರೀತಿ ನಡೆದುಕೊಂಡಿರಲಿಲ್ಲ. ನನಗೆ ತಪ್ಪಿನ ಅರಿವಾಗಿದೆ. ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ಅಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಲ್ಲೂ ವಿನಯಪೂರ್ವಕವಾಗಿ ಬೇಷರತ್ ಕ್ಷಮೆ ಕೋರುತ್ತೇನೆ’ ಎಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಇದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ‘ನಿಮ್ಮ ವಿರುದ್ಧದ ಪ್ರಕ್ರಿಯೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿಎಚ್ಚರಿಕೆಯಿಂದ ಇರಬೇಕು’ ಎಂದು ಶ್ರೀಧರ್ ಭಟ್‌ಗೆ ಸೂಚಿಸಿ ಪ್ರಕರಣವನ್ನು ವಿಲೇವಾರಿ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT