ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟದ ಪ್ರತಿಕ್ರಿಯೆ | ಮಾಹಿತಿ ಹಕ್ಕು ಕಾಯ್ದೆ: ಈಡೇರದ ಆಶಯ

Last Updated 19 ಜೂನ್ 2022, 12:23 IST
ಅಕ್ಷರ ಗಾತ್ರ

ಸಾಮಾನ್ಯ ವ್ಯಕ್ತಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳುವ ಹಕ್ಕಿದೆ. ಪ್ರಭಾವಿ ಅಧಿಕಾರಿಯೇ ಆಗಿರಲಿ, ರಾಜಕಾರಣಿ ಇರಲಿ. ಇವರು ಮಾಡಿರುವ ಭ್ರಷ್ಟಾಚಾರಗಳನ್ನು ಪ್ರಶ್ನೆ ಮಾಡುವ ಹಕ್ಕು ಸಾಮಾನ್ಯ ವ್ಯಕ್ತಿಗಿದೆ. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ನ್ಯಾಯ ಸಿಗುವ ತನಕ ಇವರ ಹೆಸರನ್ನು ಗೋಪ್ಯವಾಗಿ ಇಡಬೇಕು. ಅಂತಹ ಹೊಸ ಕಾನೂನು ಜಾರಿ ಆಗಲಿ. ಅಲ್ಲದಿದ್ದರೆ ಭ್ರಷ್ಟರನ್ನ ನಿರ್ಮೂಲನೆ ಮಾಡುವುದು ತುಂಬಾ ಕಷ್ಟವಾಗಲಿದೆ.

–ಎಸ್‌.ಎನ್‌.ಮಂಜುಪ್ರಸಾದ್, ಸರಗೂರು ತಾಲ್ಲೂಕು, ಮೈಸೂರು ಜಿಲ್ಲೆ

***

ಇತ್ತೀಚೆಗೆ ನಾಯಿಕೊಡೆಗಳಂತೆ ತಲೆಯೆತ್ತಿರುವ ಆರ್‌ಟಿಐ ಕಾರ್ಯಕರ್ತರು ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳನ್ನು ಹೆದರಿಸಿ ಹಣ ವಸೂಲಿ ಮಾಡುವ ಪ್ರವೃತ್ತಿಗೆ ಇಳಿದಿದ್ದಾರೆ. ಕೆಲವು ಆರ್‌ಟಿಐ ಕಾರ್ಯಕರ್ತರು, ಉದ್ಯಮಿಗಳಾಗಿ ಮಾರ್ಪಾಡಾಗಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರುವ ಮತ್ತು ಮಾಹಿತಿಯು ಸಾಮಾನ್ಯನಿಗೂ ದೊರೆಯಲಿ ಎನ್ನುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದ ಈ ಕಾಯ್ದೆ ದುರುಪಯೋಗ ಆಗುತ್ತಿರುವುದೇ ಹೆಚ್ಚು. ಇಂತಹವರಿಂದ ಮಾಹಿತಿ ಹಕ್ಕು ಕಾಯ್ದೆ ಮೌಲ್ಯ ಹಾಳಾಗಬಾರದೆಂಬುದೇ ನಮ್ಮ ಆಶಯ.

- ಅಜ್ಜಹಳ್ಳಿ ಅರುಣ್, ಮದ್ದೂರು

***

2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆಯು ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಮುಖ ಸದುದ್ದೇಶ ಹೊಂದಿದ್ದರೂ, ಇಲ್ಲಿಯವರೆಗೆ ಈ ಕಾಯ್ದೆಯ ಮಾಹಿತಿ ಜನಸಾಮಾನ್ಯರಿಗೆ ಅಷ್ಟಾಗಿ ತಿಳಿದಿಲ್ಲ. ಕಾಯ್ದೆಯ ಮಾಹಿತಿ ಇದ್ದವರು ದುರ್ಬಳಕೆ ಮಾಡಿಕೊಂಡಿದ್ದೇ ಹೆಚ್ಚು. ಈ ಕಾಯ್ದೆ ಅಧಿಕಾರಿಗಳನ್ನು ಬೆದರಿಸುವ ತಂತ್ರವಾಗಿ ಬಳಕೆಯಾಗುತ್ತಿರುವುದೇ ಅಧಿಕ. ಯಾವುದೇ ರೀತಿಯ ಸದುದ್ದೇಶಗಳಿಲ್ಲದೇ ಕೇವಲ ಬೆದರಿಸುವ, ಬೆದರಿಸಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಮಾತ್ರ ಅರ್ಜಿಗಳ ಸಲ್ಲಿಕೆ ಆಗುತ್ತಿರುವುದು ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತಿದೆ.

– ರಾಮಕೃಷ್ಣ, ತರೀಕೆರೆ ತಾಲ್ಲೂಕು

***

ಮಾಹಿತಿ ಹಕ್ಕು ಕಾಯ್ದೆಯು ಪ್ರಜೆಗಳೇ ಪ್ರಭುಗಳು ಎಂಬುದನ್ನು ಸಾಧಿಸಬೇಕಾಗಿತ್ತು. ಆದರೆ, ಇಂದು ಆಗಿರುವುದಾದರೂ ಏನು ಎಂದು ಯೋಚಿಸುವಂತಾಗಿದೆ. ಈ ಕಾಯ್ದೆಯನ್ನು ಗುರಾಣಿಯಾಗಿ ಉಪಯೋಗಿಸಿ ಹೊಟ್ಟೆ ತುಂಬಿಸುವ ಮಂದಿಗಳು ಒಂದೆ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಆಗುವ ಮೊದಲು ಈ ಕಾಯ್ದೆಯನ್ನು ಮೊಣಚುಗೊಳಿಸಿ ಅರಾಜಕತೆ ನಿವಾರಿಸುವ ತಂತ್ರಜ್ಞಾನವನ್ನು ನಾವಿಂದು ಅಳವಡಿಸಿಕೊಳ್ಳಲೇ ಬೇಕಾಗಿದೆ.

– ಕೊಡಕ್ಕಲ್ ಶಿವಪ್ರಸಾದ್, ಸಂಸ್ಥಾಪಕ ಅಧ್ಯಕ್ಷ, ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ, ಶಿವಮೊಗ್ಗ

***

ಭ್ರಷ್ಟಾಚಾರ, ಅವ್ಯವಹಾರದ ವಿರುದ್ಧ ಕಾನೂನಾತ್ಮಕವಾಗಿ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಒಂದು ಅಸ್ತ್ರ ಮಾಹಿತಿ ಹಕ್ಕು ಕಾಯ್ದೆ. ಆದರೆ, ಇದನ್ನು ಅಧಿಕಾರಿಗಳು ವ್ಯವಸ್ಥೆ ಹಾಳು ಮಾಡುತ್ತಿದೆ. ಈ ಕಾನೂನಿನಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ಇದ್ದರೂ ವಸೂಲಿ ಮಾಡುವ ವಿಧಾನ ಇಲ್ಲ. ಆದ್ದರಿಂದ ಈ ಕಾಯ್ದೆಯಲ್ಲಿ ಬದಲಾವಣೆ ತಂದು ಸೂಕ್ತವಾದ ಮಾಹಿತಿ ನೀಡದ ವ್ಯಕ್ತಿಗೆ ಕಾನೂನು ಕ್ರಮ ಜರುಗಿಸುವಂತೆ ಬದಲಾವಣೆ ಅಗತ್ಯ. ಜತೆಗೆ. ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯ್ದೆ ಮುಂದಿಟ್ಟು ಹಣ ಸುಲಿಗೆ ಮಾಡುವುದನ್ನು ನಿಲ್ಲಿಸಬೇಕು. ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ಅನುಕೂಲ ಆಗುವ ಕೆಲಸ ಮಾಡಬೇಕು.

– ಆಕಾಶ ಬೇವಿನಕಟ್ಟಿ, ಸಾಮಾಜಿಕ ಕಾರ್ಯಕರ್ತ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT