ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಕಾವೇರಿ: ಎಲ್ಲಿದೆ ಹೆಚ್ಚುವರಿ ನೀರು?

ನೀರಿನ ಇಳುವರಿಬೇಕು ಮರು ಅಂದಾಜು
Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕರ್ನಾಟಕದ ಮೇಕೆ ದಾಟು ಮತ್ತು ತಮಿಳು ನಾಡಿನ ಕಾವೇರಿ–ವೈಗೈ – ಗುಂಡಾರ್‌ ನದಿ ಜೋಡಣೆ ಯೋಜನೆಯು ಎರಡೂ ರಾಜ್ಯಗಳ ಮಧ್ಯೆ ಮತ್ತೊಮ್ಮೆ ವಿರಸಕ್ಕೆ ಕಾರಣವಾಗಿದೆ. ಎರಡೂ ರಾಜ್ಯಗಳು ತಮ್ಮ ಯೋಜನೆಗಳನ್ನು ಪುಷ್ಟೀಕರಿಸುತ್ತಾ ಮತ್ತೊಂದು ರಾಜ್ಯದ ಯೋಜನೆಯನ್ನು ಟೀಕಿಸುತ್ತಿವೆ. ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಮಧ್ಯೆ ನೀರು ಹಂಚಿಕೆಯಾದ ಬಳಿಕ ಹೆಚ್ಚುವರಿ ನೀರನ್ನು ಬಳಸಿ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಾದಿಸಲಾಗುತ್ತಿದೆ. ಆದರೆ, ಕಾವೇರಿಯಲ್ಲಿ ಹೆಚ್ಚುವರಿ ನೀರು ಲಭ್ಯವಿದೆಯೇ? ಇದ್ದರೆ ಎಷ್ಟು? ಅದರಿಂದ ಎರಡೂ ರಾಜ್ಯಗಳು ಯಾವೆಲ್ಲ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬುದರ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆದಿದೆಯೇ? ಖಂಡಿತಾ ಇಲ್ಲ!

ಕಾವೇರಿ ಮತ್ತು ಅದರ ಉಪನದಿಗಳಲ್ಲಿ ನೀರಿನ ಇಳುವರಿ ಪ್ರಮಾಣವನ್ನು ಅಂದಾಜು ಮಾಡಿದ್ದು 1972ರಲ್ಲಿ. ಆ ಬಳಿಕ ಮಳೆಯ ವಿಧಾನದಲ್ಲಿ (ರೈನ್‌ ಪ್ಯಾಟರ್ನ್) ಆಗಿರುವ ಬದಲಾವಣೆ, ಅಚ್ಚುಕಟ್ಟು ಪ್ರದೇಶ ಸೇರಿ ಕಾವೇರಿ ಕಣಿವೆ ಪ್ರದೇಶದಲ್ಲಿನ ಭೂಬಳಕೆ ಮತ್ತು ನೀರಿನ ಇಳುವರಿ ಬಗ್ಗೆ ಸಮೀಕ್ಷೆ, ಅಧ್ಯಯನ ನಡೆದಿಲ್ಲ. ಹೀಗಾಗಿ ಮೊದಲಿಗೆ ಮರುಅಂದಾಜು ನಡೆಸಬೇಕು. ಆ ಬಳಿಕವೇ ಹೊಸ ಯೋಜನೆಗಳ ಬಗ್ಗೆ ಆಲೋಚಿಸುವುದು ಸೂಕ್ತ.

ನಾಲ್ಕು ರಾಜ್ಯಗಳಲ್ಲಿ ಬರುವ ಕಾವೇರಿ ಜಲಾನಯನ ಪ್ರದೇಶವು ಒಟ್ಟು 81,155 ಚ.ಕಿ.ಮೀ ವ್ಯಾಪ್ತಿ ಹೊಂದಿದ್ದು, 1972ರ ಅಂದಾಜಿನ ಪ್ರಕಾರ 740 ಟಿಎಂಸಿ ಅಡಿಗಳಷ್ಟು ನೀರು ಲಭ್ಯವಿದೆ. ಇದನ್ನು ಆಧರಿಸಿಯೇ ನಾಲ್ಕು ರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡಲಾಯಿತು. ಸುಮಾರು 83 ಟಿಎಂಸಿ ಅಡಿಗಳಷ್ಟು ನೀರು ಹೆಚ್ಚುವರಿ ಲಭ್ಯವಿದ್ದು, ಇವುಗಳ ಬಳಕೆಗೆ ಎರಡೂ ರಾಜ್ಯಗಳು ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸಲು ಪೈಪೋಟಿಯಲ್ಲಿವೆ. 10 ವರ್ಷಗಳಲ್ಲಿ 2 ಅಥವಾ 3 ವರ್ಷ ಮಾತ್ರ ಅಧಿಕ ನೀರಿನ ಹರಿವು ಇರುತ್ತದೆ. ಅದರ ಆಧಾರದಲ್ಲಿ ಬೃಹತ್‌ ಯೋಜನೆಗಳ ಅಗತ್ಯವಿದೆಯೇ?

ಹೆಚ್ಚುವರಿ ನೀರಿನ ಬಳಕೆಯಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಆಗುವ ಪ್ರಯೋಜನ ಅಥವಾ ದುಷ್ಪರಿಣಾಮಕ್ಕಿಂತ ಎರಡೂ ರಾಜ್ಯಗಳು ಬಳಸಲು ಬಯಸಿರುವ ಆ ಹೆಚ್ಚುವರಿ ಪ್ರಮಾಣದ ನೀರು ಲಭ್ಯವಿದೆಯೇ? ಇದ್ದರೆ ಎಷ್ಟು ವರ್ಷಗಳಿಗೊಮ್ಮೆ ಲಭ್ಯವಾಗಬಹುದು ಎಂಬುದು ಅತಿಮುಖ್ಯವಾದ ಪ್ರಶ್ನೆ. ಯಾವುದೇ ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವು ಮುಖ್ಯವಾಗಿ ಎರಡು ಅಂಶಗಳನ್ನು ಅವಲಂಭಿಸಿದೆ. ಅವುಗಳೆಂದರೆ; ಮೊದಲನೆಯದು ಮಳೆ ಪ್ರಮಾಣ ಮತ್ತು ಅಲ್ಲಿನ ಭೂ ಬಳಕೆ ವಿಧಾನ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಕಳೆದ ವರ್ಷ ‘ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯ ಚಿತ್ರಣ’ ಎಂಬ ಅಧ್ಯಯನ ವರದಿಯನ್ನು ಹೊರತಂದಿದೆ. ಕಳೆದ 30 ವರ್ಷಗಳಲ್ಲಿ (1990– 2018) ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ ಮಳೆ ಪ್ರಮಾಣ, ಮಳೆ ದಿನಗಳು, ಬರ, ನೆರೆ, ಉಷ್ಣಾಂಶ ಮತ್ತು ಆರ್‌ಎಚ್‌ ಸಾಂದ್ರತೆಯನ್ನು ಅದಕ್ಕೂ ಹಿಂದಿನ 30 ವರ್ಷಗಳಿಗೆ (1960– 1990) ಹೋಲಿಸಲಾಗಿದೆ. ಇತ್ತೀಚಿನ ಅವಧಿಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ, ರಾಜ್ಯದ ಕೆಲವೆಡೆ ಮಳೆಯು ಗಣನೀಯ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆ ಆಗಿರುವುದು ಕಂಡು ಬಂದಿದೆ.

ಕಾವೇರಿ ಜಲಾನಯನದ ಒಟ್ಟು ವಿಸ್ತೀರ್ಣ ಪ್ರದೇಶದಲ್ಲಿ ಕಾವೇರಿ (ಕೊಡಗು) ಮತ್ತು ಕಬಿನಿ (ಕೇರಳದ ವೈನಾಡು) ಉಗಮ ಪ್ರದೇಶದ ವಿಸ್ತೀರ್ಣ ಕೇವಲ ಶೇ 5ರಷ್ಟು ಮಾತ್ರ ಇದೆ. ಆದರೆ, ಇಲ್ಲಿ ಉತ್ಪತ್ತಿ ಆಗುವ ನೀರಿನ ಪ್ರಮಾಣವು ಒಟ್ಟು ನೀರಿನ ಪ್ರಮಾಣದ ಶೇ 50ಕ್ಕೂ ಹೆಚ್ಚು ಎಂಬುದು ಗಮನಾರ್ಹ. 740 ಟಿಎಂಸಿ ಅಡಿಗಳ ಪೈಕಿ 350ರಿಂದ 400 ಟಿಎಂಸಿ ಅಡಿಗಳಷ್ಟು ನೀರು ಇಲ್ಲೇ ಲಭ್ಯವಾಗುತ್ತದೆ. ಜಾಗ ಕಡಿಮೆ ಆದರೂ ಇಳುವರಿ ಪ್ರಮಾಣ ಅತ್ಯಧಿಕ. ಅಧ್ಯಯನವೊಂದರ ಪ್ರಕಾರ, ಮಳೆಯ ಪ್ರಮಾಣ, ಮಳೆಯ ದಿನ ಮತ್ತು ಮಳೆ ಹಂಚಿಕೆಯಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಭೂಬಳಕೆಯಲ್ಲಿ ಆಗಿರುವ ಬದಲಾವಣೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯು ಪಶ್ಚಿಮಘಟ್ಟ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದು ಭೂಬಳಕೆ ಮತ್ತು ಮಳೆ ತರುವ ಅರಣ್ಯದಲ್ಲಿ ಸಾಕಷ್ಟು ಬದಲಾವಣೆ ಆಗಿರುವು ದನ್ನು ದಾಖಲಿಸಿದೆ. ಈ ಬದಲಾವಣೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ.

ಕಾವೇರಿ–ವೈಗೈ–ಗುಂಡಾರ್‌‌ ಯೋಜನೆ ರಾಷ್ಟ್ರೀಯ ಮಟ್ಟದ ನದಿ ಜೋಡಣೆ ಯೋಜನೆಯ ಒಂದು ಭಾಗವಾಗಿದೆ. ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ ಜೋಡಣೆಯ ಮಹತ್ವದ ಯೋಜನೆಯನ್ನುಕೇಂದ್ರ ಸರ್ಕಾರವು ಕೈಗೆತ್ತಿಕೊಂಡಿದೆ. ಮಹಾನದಿಯ ಹೆಚ್ಚುವರಿ ನೀರನ್ನು ಕೃಷ್ಣಾ, ಪೆನ್ನಾರ್‌, ಕಾವೇರಿ, ವೈಗೈ ಮತ್ತು ಗುಂಡಾರ್‌ ಜಲಾನಯನ ಪ್ರದೇಶಕ್ಕೆ ತಿರುಗಿಸುವ ಯೋಜನೆ ಹಮ್ಮಿಕೊಂಡಿದೆ. ಕಾವೇರಿಯಿಂದ 45 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ವೈಗೈ–ಗುಂಡಾರ್‌ ಜಲಾನಯನ ಪ್ರದೇಶಕ್ಕೆ ತಿರುಗಿಸುವ ಯೋಜನೆ ಇದು. ‘ಅಂತರ್ ಜಲಾನಯನ ಪ್ರದೇಶಕ್ಕೆ ನೀರನ್ನು ತಿರುಗಿಸಲು ಸಾಧ್ಯವಿಲ್ಲ’ ಎಂಬ ವಾದಕ್ಕೆ ನಮ್ಮವರು ಅಂಟಿಕೊಂಡು ಕೂತಿದ್ದಾರೆ. ಹೆಚ್ಚುವರಿ ನೀರಿನ ಲಭ್ಯತೆ ಇದೆಯೆ ಇಲ್ಲವೇ ಎಂಬ ಅಧ್ಯಯನದ ಅಗತ್ಯವನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ. ಹೆಚ್ಚುವರಿ ನೀರೇ ಇಲ್ಲವಾದರೆ ಮಳೆ ಇಲ್ಲದ ವರ್ಷಗಳಲ್ಲಿ ಎಲ್ಲಿಂದ ಹರಿಸುತ್ತಾರೆ?

ಮೇಕೆದಾಟು (ಸಮತೋಲಿತ ಜಲಾಶಯ) 67 ಟಿಎಂಸಿ ಅಡಿ ಹೆಚ್ಚುವರಿ ನೀರು ಬಳಸಿಕೊಳ್ಳುವ ಯೋಜನೆ. ಇದರಿಂದ ರಾಜ್ಯಕ್ಕೆ ಎರಡು ರೀತಿಯ ಉಪಯೋಗಗಳಿವೆ. ಕುಡಿಯುವ ನೀರಿನ ಯೋಜನೆ ಮತ್ತು ವಿದ್ಯುತ್‌ ಉತ್ಪಾದನೆ ಕೈಗೊಳ್ಳಲು ಉದ್ದೇಶಿಸಲಾಗಿದೆ.

ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಿದ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ತಮಿಳುನಾಡಿಗೆ ಪ್ರತಿ ತಿಂಗಳು ಬಿಡಬೇಕಾದ ಪ್ರಮಾಣವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿದೆ. ಈಗ ಕುಡಿಯುವ ನೀರಿನ ಉದ್ದೇಶದ ಬಳಕೆಗೆ ಕೆಆರ್‌ಎಸ್‌ ಮತ್ತು ಕಬಿನಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಮುಂಬರುವ ದಿನಗಳಲ್ಲಿ ಎರಡು ಪಟ್ಟು ನೀರು ಬೇಕಾಗುತ್ತದೆ. ಮೇಕೆದಾಟು ಯೋಜನೆ ಮಾಡುವುದರಿಂದ ಆ ಸಮಸ್ಯೆ ಇತ್ಯರ್ಥವಾಗುತ್ತದೆ. ನೀರಿನ ಸಂಗ್ರಹ ಇರುವುದರಿಂದ ತಮಿಳುನಾಡಿಗೆ ನೀರು ಹರಿಸುವುದು ಸಮಸ್ಯೆ ಆಗುವುದಿಲ್ಲ.

ಲೇಖಕ: ನಿವೃತ್ತ ನಿರ್ದೇಶಕ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ನಿರೂಪಣೆ: ಎಸ್‌. ರವಿಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT