ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20 ಸಾವಿರ ಕೋಟಿ ಬೆಳೆ ಸಾಲ ಗುರಿ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

ರಾಜ್ಯದ 28 ಲಕ್ಷ ರೈತರಿಗೆ ಸಾಲ ವಿತರಿಸಲು ಕ್ರಮ
Last Updated 19 ಫೆಬ್ರುವರಿ 2021, 22:07 IST
ಅಕ್ಷರ ಗಾತ್ರ

ಬೆಂಗಳೂರು: 2021–22 ರ ಸಾಲಿನಲ್ಲಿ 28 ಲಕ್ಷ ರೈತರಿಗೆ ₹20 ಸಾವಿರ ಕೋಟಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆ ಸಾಲ ವಿತರಿಸುವ ಗುರಿ ಇದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ (ಬಿ.ಡಿ.ಸಿ.ಸಿ) ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ನಬಾರ್ಡ್‌ಗೆ ಮನವಿ ಸಲ್ಲಿಸಲಾಗಿದೆ. ರೈತರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

‘ಈ ಸಾಲಿನಲ್ಲಿ 24.50 ಲಕ್ಷ ರೈತರಿಗೆ ₹15,300 ಕೋಟಿ ಸಾಲ ವಿತರಣೆ ಗುರಿ ಹಾಕಿಕೊಳ್ಳಲಾಗಿತ್ತು. ಈವರೆಗೆ 22,02,931 ಲಕ್ಷ ರೈತರಿಗೆ ₹13,739.28 ಕೋಟಿ ಸಾಲ ವಿತರಿಸಲಾಗಿದೆ. ಮಾರ್ಚ್‌ 31 ರೊಳಗೆ ನೂರಕ್ಕೆ ನೂರು ಗುರಿ ತಲುಪುತ್ತೇವೆ’ ಎಂಬುದಾಗಿ ಅವರು ವಿಶ್ವಾಸವ್ಯಕ್ತಪಡಿಸಿದರು.

‘ಸಹಕಾರ ಇಲಾಖೆಯಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸಲು ಕಾಯ್ದೆಯಲ್ಲಿ ಯಾವುದೇ ತೊಡಕುಗಳಿದ್ದರೆ ಅದನ್ನು ನನ್ನ ಅಥವಾ ಇಲಾಖೆಯ ಗಮನಕ್ಕೆ ತಂದರೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ಅವರು ಭರವಸೆ ನೀಡಿದರು.

21 ಡಿಸಿಸಿ ಬ್ಯಾಂಕ್‌ಗಳಲ್ಲಿ ಸರ್ಕಾರದ ಷೇರು ಬಂಡವಾಳ ಹೂಡಲು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ಪ್ರತಿ ಬ್ಯಾಂಕ್‌ಗಳಿಗೆ ತಲಾ ₹10 ಲಕ್ಷ ಹೂಡಿಕೆ ಮಾಡುವ ಚಿಂತನೆ ಇದೆ. ಈ ಕುರಿತು ಶೀಘ್ರವೇ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಸೋಮಶೇಖರ್‌ ಹೇಳಿದರು.

5 ಸಾವಿರ ಜನರಿಗೆ ಉದ್ಯೋಗ: ಹಾಲು ಒಕ್ಕೂಟ ಸೇರಿ ಸಹಕಾರ ಇಲಾಖೆಯ ಹಲವು ಅಂಗ ಸಂಸ್ಥೆಗಳಿಂದ ಕೋವಿಡ್‌ ಸಂದರ್ಭದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ ಮಾಡುವಂತೆ ಆದೇಶ ನೀಡಲಾಗಿತ್ತು. ಈಗ ಬೆಂಗಳೂರು ಹಾಲು ಒಕ್ಕೂಟದಿಂದ 279 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಲಬುರ್ಗಿ ಡಿಸಿಸಿ ಬ್ಯಾಂಕ್‌ ಹೊರತುಪಡಿಸಿ ಉಳಿದ ಎಲ್ಲ ಬ್ಯಾಂಕ್‌ಗಳೂ ರೈತರಿಗೆ ಸಮರ್ಪಕವಾಗಿ ಸಾಲ ನೀಡುವ ಮತ್ತು ಇನ್ನಿತರ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿವೆ. ಇದೀಗ ಕಲಬುರ್ಗಿ ಡಿಸಿಸಿ ಬ್ಯಾಂಕ್‌ಗೆ ಸುಮಾರು ₹200 ಕೋಟಿ ಅನುದಾನ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಇದರಿಂದ ಆ ಭಾಗದ ರೈತರಿಗೆ ಹಲವು ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಸೋಮಶೇಖರ್‌ ತಿಳಿಸಿದರು.

ವೆಬ್‌ಸೈಟ್ ಅನಾವರಣ
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವೆಬ್‌ಸೈಟ್ ಅನ್ನು ಸಚಿವ ಎಸ್.ಟಿ.ಸೋಮಶೇಖರ್ ಅವರು ಅನಾವರಣಗೊಳಿಸಿದರು. ಜೊತೆಗೆ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿರುವ ಸಾಲ ವಿತರಣೆ, ಸೌಲಭ್ಯ, ಸೇವೆಗಳು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT