ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ನಿರ್ದೇಶನದಂತೆ ಸರ್ಕಾರ: ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

Last Updated 5 ಅಕ್ಟೋಬರ್ 2021, 21:16 IST
ಅಕ್ಷರ ಗಾತ್ರ

ರಾಮನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕೀಲುಗೊಂಬೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪದ ಕೃಪಾಕಟಾಕ್ಷ ಮತ್ತು ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಿಡದಿಯಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಕಳೆದ ಹಲವು ದಿನಗಳಿಂದ ಆರ್‌ಎಸ್‌ಎಸ್‌ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಈ ಸಂಘಟನೆ ಹೇಗೆ ಕೆಲಸ ಮಾಡುತ್ತದೆ ಹಾಗೂ ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತದೆ ಎಂಬುದನ್ನು ತಿಳಿದು ಆಘಾತ ಆಯಿತು. ಸಂಘದ ಐಡಿಯಾಲಜಿ ಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ದೇಶದ ನಾಗರಿಕ ಸೇವೆ ಅಧಿಕಾರಿಗಳು ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ’ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ. ನಮ್ಮ ರಾಜ್ಯದ ಬಿಜೆಪಿ ಸರ್ಕಾರದ ಎರಡನೇ ಮುಖ್ಯಮಂತ್ರಿ ಕೇಶವಕೃಪಕ್ಕೆ ಏಕೆ ಹೋಗುತ್ತಾರೆ? ಎಲ್ಲಿಯೇ ಹೋದರೂ ಆರೆಸ್ಸೆಸ್ ಕಚೇರಿಗಳಿಗೆ ಯಾಕೆ ಹೋಗುತ್ತಾರೆ?’ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ‘ರಾಜ್ಯದಲ್ಲಿ ಇರುವುದು ಸಂಪೂರ್ಣ ಆರ್‌ಎಸ್‌ಎಸ್‌ ಸರ್ಕಾರ. ಆದರೆ ಕೇಶವಕೃಪಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್‌ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ. ಆರ್‌ಎಸ್‌ಎಸ್‌ ಅನ್ನೇ ಕೇಂದ್ರಬಿಂದು ಆಗಿಸಿಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೇ ವಿಸರ್ಜಿಸಿ ಹೊಸ ಪಕ್ಷ ರಚನೆಯತ್ತ ಅದು ಅಲೋಚನೆ ಮಾಡಿತ್ತು ಎಂದು ಕುಮಾರಸ್ವಾಮಿ ದೂರಿದರು.

ವಿಶ್ವಾಸ ಮೂಡಿಸಿ: ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕದಿಂದ ಮತಾಂತರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ ಮುಂತಾದ. ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಿದ್ದಿದ್ದರೆ ಮತಾಂತರ ಎನ್ನುವ ಶಬ್ದವೇ ಕೇಳುತ್ತಿರಲಿಲ್ಲ. ಸ್ವಯಂ ಪ್ರೇರಿತರಾಗಿ ಬೇರೆ ಧರ್ಮಕ್ಕೆ ಜನ ಹೋಗುತ್ತಿರುವ ಉದಾಹರಣೆ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಹೋದರು. ಇದು ಇಂದಿನ ಸಮಸ್ಯೆ ಅಲ್ಲ ಎಂದರು.

‘ಐಎಎಸ್‌ ಅಧಿಕಾರಿಯಾದರೆ ತಪ್ಪೇನು’

ಹೊಸದುರ್ಗ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಶ್ರಮಪಟ್ಟು ಓದಿ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗುವುದರಲ್ಲಿ ತಪ್ಪೇನಿದೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್‌ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ನಡೆದ ಸೇವೆ ಮತ್ತು ಸಮರ್ಪಣ ಅಭಿಯಾನ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ 4,000ರಿಂದ 5,000 ಮಂದಿ ವ್ಯವಸ್ಥಿತವಾಗಿ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನಾಗಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಪ್ರಧಾನಿಯನ್ನಾಗಿ ಮಾಡಿರುವಾಗ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನಾಗಿ ಮಾಡುವುದು ಕಷ್ಟವೇನೂ ಅಲ್ಲ’ ಎಂದರು.

‘ಕುಮಾರಸ್ವಾಮಿ ತಂದೆ ಪ್ರಧಾನಿಯಾಗಬಹುದು, ರಾಜ್ಯದ ಮುಖ್ಯಮಂತ್ರಿ ಆಗಬಹುದು, ಪತ್ನಿ ಎಂಎಲ್‌ಎ ಆಗಬಹುದು, ಮಗ ಎಂಪಿ ಅಭ್ಯರ್ಥಿಯಾಗಿ ನಿಲ್ಲಬಹುದು, ರೇವಣ್ಣ ಎಂಎಲ್‌ಎ ಹಾಗೂ ಮಂತ್ರಿ ಆಗಬಹುದು, ಭವಾನಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಬಹುದು. ಹೀಗೆ ಇವರ ಕುಟುಂಬದವರು ಪ್ರಧಾನಿ, ಎಂಪಿ, ಎಂಎಲ್‌ಎ, ಮಂತ್ರಿ ಆಗಬಹುದು. ಆರ್‌ಎಸ್‌ಎಸ್‌ ಕಾರ್ಯಕರ್ತರು ಶ್ರಮಪಟ್ಟು ಐಎಎಸ್‌, ಐಪಿಎಸ್‌ ಅಧಿಕಾರಿಗಳಾದರೆ ನಿಮಗೇನು ಕಷ್ಟ? ಈ ರೀತಿ ಅಪಪ್ರಚಾರ ಮಾಡುವುದು ಬಿಡಿ’ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಟ್ವೀಟ್‌ ಮೂಲಕ ಸ್ಪಷ್ಟನೆ

ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ಬೆನ್ನಲ್ಲೇ ಈ ಕುರಿತು ಟ್ವೀಟ್‌ ಮೂಲಕ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

‘ಯಾವುದೇ ಸಂಘ, ಪಕ್ಷದ ವಿರುದ್ಧ ನಾನು ಟೀಕೆ ಮಾಡಿಲ್ಲ. ಆರ್‌ಎಸ್‌ಎಸ್‌ ಕುರಿತು ಕೆಲವು ಲೇಖಕರು ಬರೆದ ಪುಸ್ತಕಗಳನ್ನು ಓದಿದ್ದು, ಆ ಅಂಶಗಳನ್ನಷ್ಟೇ ಹೇಳಿದ್ದೇನೆ. ಪ್ರಸ್ತುತ ದೇಶ ಹೋಗುತ್ತಿರುವ ಹಾದಿ ಗಮನಿಸಿದರೆ ಜನರ ಮುಂದೆ ಸತ್ಯ ಇಡುವುದು ಅಗತ್ಯವೆಂದು ನನಗೆ ಅನಿಸಿತು. ಸತ್ಯ ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಈ ಬಗ್ಗೆ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT