ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿಸಿದ ಮರಳು ಮಾಫಿಯಾ

ನಿರ್ಮಾಣ ವಲಯದಲ್ಲಿ ಎಂ– ಸ್ಯಾಂಡ್‌ ಬಳಕೆ
Last Updated 15 ನವೆಂಬರ್ 2021, 22:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮರಳಿನ ಬೇಡಿಕೆ–ಪೂರೈಕೆ ವ್ಯವಸ್ಥೆಗಳೇ ‘ಕೃತಕ ಅಭಾವ’ ಸೃಷ್ಟಿಸಿ ವ್ಯವಹಾರ ಕುದುರಿಸುವ ಕಾರಣದಿಂದ ದರ ಗಗನಕ್ಕೆ ಏರಿ, ಈ ವ್ಯಾಪಾರ ದಂಧೆಯಾಗಿ ಮಾರ್ಪಟ್ಟಿದೆ. ಎಂ–ಸ್ಯಾಂಡ್‌ (ಮ್ಯಾನುಫ್ಯಾಕ್ಚರ್ಡ್‌ ಸ್ಯಾಂಡ್‌) ಲಭ್ಯ ಇದ್ದರೂ ನದಿ ಮರಳಿನ ಗುಣಮಟ್ಟ ಹೆಚ್ಚು ಎಂಬ ಭಾವನೆಯಿಂದ ‘ಮಾಫಿಯಾ’ ಸ್ವರೂಪ ಪಡೆದಿದೆ ಎನ್ನುವುದು ಕಟ್ಟಡ ನಿರ್ಮಾಣ ವಲಯದ ಅಭಿಪ್ರಾಯ.

ಮರಳು ಕೊರತೆ ನೀಗಿಸಲು ಮೂರು ವರ್ಷದ ಹಿಂದೆ ಮಲೇಷ್ಯಾದಿಂದ ಆಮದು ಮಾಡಿಕೊಂಡ ಟನ್‌ಗಟ್ಟಲೆ ಮರಳು, ನವ ಮಂಗಳೂರು ಮತ್ತು ಆಂಧ್ರಪ್ರದೇಶದ ಕೃಷ್ಣ ಪಟ್ಟಣಂ ಬಂದರು ಹಾಗೂ ಸ್ಟಾಕ್‌ ಯಾರ್ಡ್‌ಗಳಲ್ಲಿ ದಾಸ್ತಾನಿದೆ. ಬಂದರುಗಳಲ್ಲಿ 2.50 ಲಕ್ಷ ಟನ್‌ಗೂ ಹೆಚ್ಚು, ಸ್ಟಾಕ್‌ ಯಾರ್ಡ್‌ಗಳಲ್ಲಿ 1.50 ಲಕ್ಷ ಟನ್‌ಗೂ ಹೆಚ್ಚು ಮರಳು ಕೊಳ್ಳುವವರೇ ಇಲ್ಲದೆ ರಾಶಿ ಬಿದ್ದಿದೆ.

ರಾಜ್ಯದಲ್ಲಿ ಗುರುತಿಸಿದ ನೈಸರ್ಗಿಕ ಮರಳು ನಿಕ್ಷೇಪಗಳ ಪೈಕಿ 251ನ್ನು ಹರಾಜು ಮಾಡಲಾಗಿದೆ. ಉಳಿದ 102 ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ (ಎಚ್‌ಜಿಎಂಲ್‌) ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮಕ್ಕೆ (ಕೆಎಸ್‌ಎಂಸಿ– ಹಿಂದಿನ ಎಂಎಂಎಲ್‌) ವಹಿಸಿ ಗ್ರಾಹಕರಿಗೆ ಪೂರೈಸಲು ಹೊಸ ಮರಳು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಸಂಸ್ಥೆಗಳ ಅವಧಿ ಮುಗಿದ ಬಳಿಕ ಆ ನಿಕ್ಷೇಪಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಹೊಣೆಯನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳಲಿದೆ. ಜೊತೆಗೆ ಉಡುಪಿ, ಮಂಗಳೂರಿನಲ್ಲಿ ತಲಾ 4, ಕೊಪ‍್ಪಳ, ರಾಯಚೂರು ಜಿಲ್ಲೆಯಲ್ಲಿ ತಲಾ 1 ಮರಳು ನಿಕ್ಷೇಪ‍ ಗುರುತಿಸಲಾಗಿದೆ.

ಮರಳು ಗಣಿಗಾರಿಕೆ, ವ್ಯಾಪಾರದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳಿಲ್ಲ. ಅಂತರ್‌ ಜಿಲ್ಲಾ ಮರಳು ಸಾಗಣೆಗೆ ನಿರ್ಬಂಧಗಳಿದ್ದರೂ ಕರಾವಳಿ ಭಾಗದಿಂದ ಬೆಂಗಳೂರು, ಕೇರಳಕ್ಕೆ ವಾಮಮಾರ್ಗದಿಂದ ಸಾಗಣೆಯಾಗಿ ಮರಳು ಮಾಫಿಯಾ ದೊಡ್ಡ ಪ್ರಮಾಣದಲ್ಲಿ ದುಡ್ಡು ಕೊಳ್ಳೆ ಹೊಡೆಯಿತು.

ನದಿ ಮರಳಿಗೆ ಬಂಗಾರದ ಬೆಲೆ, ಜೊತೆಗೆ ಸಿಗದೇ ಇದ್ದಾಗ ಎಂ–ಸ್ಯಾಂಡ್‌ಗೆ ಬೇಡಿಕೆ ಹೆಚ್ಚಿತು. ಈಗ ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ ಶೇ 80ರಿಂದ 95ರಷ್ಟು ಜನ ಎಂ– ಸ್ಯಾಂಡ್‌ ಬಳಸುತ್ತಾರೆ.

ತುಮಕೂರು, ಚಿಕ್ಕಬಳ್ಳಾಪುರ ಭಾಗದಲ್ಲೂ ಎಂ– ಸ್ಯಾಂಡ್‌ ಬೇಡಿಕೆ ಹೆಚ್ಚುತ್ತಿದೆ. ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರ ಕರ್ನಾಟಕ ಭಾಗದಲ್ಲಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ನದಿ ಪಾತ್ರ ಅಗಲವಾಗಿದ್ದು, ಅಲ್ಲಿ ಮರಳು ತೆಗೆಯುತ್ತಾರೆ. ಕರಾವಳಿಯ ಮೂರು ಜಿಲ್ಲೆಗಳ ಜನರು ನದಿ ಮರಳು ನಂಬಿದ್ದಾರೆ.

ಮರಳು ಆಮದಿನಿಂದ ಕೈಸುಟ್ಟುಕೊಂಡ ಕಂಪನಿಗಳು: ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮತ್ತು ಎಂಟು ಖಾಸಗಿ ಕಂಪನಿಗಳು ವಿದೇಶದಿಂದ ಮರಳು ಆಮದು ಪರವಾನಗಿ ಪಡೆದುಕೊಂಡಿವೆ. ಈ ಪೈಕಿ, ಎಂಎಸ್‌ಐಎಲ್‌, ಚೆನ್ನೈನ ಇಂಟೆಗ್ರೇಟೆಡ್‌ ಸರ್ವೀಸ್‌ ಪಾಯಿಂಟ್‌, ಟಿಎಂಟಿ ಮತ್ತು ಆಕಾರ್‌ ಎಂಟರ್‌ಪ್ರೈಸಸ್‌ ಕಂಪನಿಗಳು ಮಾತ್ರ ಆಮದು ಮಾಡಿವೆ. ಮಲೇಷ್ಯಾದಿಂದ ಎಂಎಸ್‌ಐಎಲ್‌ ಎರಡು ಬಾರಿ ಒಟ್ಟು 1.03 ಲಕ್ಷ ಟನ್‌ ಆಮದು ಮಾಡಿಕೊಂಡಿದೆ. ಅದರಲ್ಲಿ 14,750 ಟನ್‌ ಮಾರಾಟವಾಗಿದೆ. ಉಳಿದ 89 ಸಾವಿರ ಟನ್‌ ಕೃಷ್ಣ
ಪಟ್ಟಣಂ ಬಂದರಿನಲ್ಲಿದೆ. ಮರಳು ಆಮದಿಗೆ ಎಂಎಸ್‌ಐಎಲ್‌ ₹28 ಕೋಟಿ ವ್ಯಯ ಮಾಡಿದೆ. ಅದರ ಮಾರಾಟದಿಂದ ನಿರ್ವಹಣಾ ಶುಲ್ಕ ಕೇವಲ ₹67.97 ಲಕ್ಷ ಸಂಗ್ರಹವಾಗಿದೆ!

‘ಆಂಧ್ರಪ್ರದೇಶದ ಕೃಷ್ಣಪಟ್ಟಣಂ ಬಂದರಿಗೆ ಮರಳು ತರಲು ಪ್ರತಿ ಟನ್‌ ಮರಳಿಗೆ ₹2,300 ವೆಚ್ಚವಾಗಿದೆ. ಸಾಗಣೆ ವೆಚ್ಚ ₹1,100, ಜಿಎಸ್‌ಟಿ ಶೇ 5, ಇತರ ತೆರಿಗೆ ಸೇರಿ ಟನ್‌ಗೆ ₹1,000ರಿಂದ ₹1,500 ಲಾಭ ಇಟ್ಟುಕೊಂಡು ಬೆಂಗಳೂರಿನಲ್ಲಿ ಟನ್‌ಗೆ ₹4,000 ನಿಗದಿಪಡಿಸಲಾಗಿತ್ತು. ಬೇಡಿಕೆ ಕುಸಿದಾಗ ಟನ್‌ಗೆ ₹2,700ರ ದರದಲ್ಲಿ ಮಾರಾಟ ಮಾಡಲಾಗಿದೆ. ಕೋವಿಡ್‌ನಿಂದ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಬೇಡಿಕೆ ಇಲ್ಲದೆ ಮರಳು ಉಳಿದಿದೆ’ ಎಂದು ಎಂಎಸ್‌ಐಎಲ್‌ ಅಧಿಕಾರಿಯೊಬ್ಬರು ಹೇಳಿದರು.

‘ಮರಳು ಆಮದಿನಿಂದ ₹ 5 ಕೋಟಿ ನಷ್ಟ’

‘2018ರಲ್ಲಿ ₹11 ಕೋಟಿ ಹೂಡಿಕೆ ಮಾಡಿ ಮಲೇಷ್ಯಾದಿಂದ 56,400 ಟನ್‌ ಮರಳನ್ನು ನವ ಮಂಗಳೂರು ಬಂದರಿಗೆ ತರಿಸಿದ್ದೆವು. ಟನ್‌ಗೆ ₹ 2,200 ಸಾಗಣೆ ವೆಚ್ಚವಾಗಿದೆ. ಬೇಡಿಕೆ ಇಲ್ಲದ್ದರಿಂದ ಟನ್‌ಗೆ ₹ 1,400ಕ್ಕೆ ಮಾರಿದೆವು. ಅಷ್ಟೂ ಮರಳು ಖಾಲಿ ಮಾಡಲು ಎರಡು ವರ್ಷ ಬೇಕಾಯಿತು.₹ 5 ಕೋಟಿ ನಷ್ಟ ಆಗಿದೆ’ ಎಂದು ಮರಳು ಆಮದು ಮಾಡಿದ್ದ ಚೆನ್ನೈನ ಇಂಟೆಗ್ರೇಟೆಡ್‌ ಸರ್ವೀಸ್‌ ಪಾಯಿಂಟ್‌ ಕಂಪನಿಯ ನಿರ್ದೇಶಕರೊಬ್ಬರು ತಿಳಿಸಿದರು.

***

ನದಿ ಮರಳಿನಿಂದ ಬೇಡಿಕೆ ನೀಗಿಸಲು ಸಾಧ್ಯವಾಗದೇ ಇರುವುದರಿಂದ ಎಂ–ಸ್ಯಾಂಡ್ ಪರ್ಯಾಯ ಆಯ್ಕೆಯಾಗಿ ಹೊರಹೊಮ್ಮಿದೆ. ನಿರ್ಮಾಣ ವಲಯ ಈಗ ನದಿ ಮರಳು ಆಶ್ರಯಿಸಿಲ್ಲ. ಎಂ– ಸ್ಯಾಂಡ್‌ ವ್ಯಾಪಕವಾಗಿ ಬಳಕೆಯಾಗುತ್ತಿದೆ

-ಜಿ.ಎಂ. ರವೀಂದ್ರ, ಅಧ್ಯಕ್ಷ, ಭಾರತೀಯ ಬಿಲ್ಡರ್‌ಗಳ ಒಕ್ಕೂಟ (ಬೆಂಗಳೂರು ಕೇಂದ್ರ)

***

ರಾಜ್ಯದಲ್ಲಿ ಮರಳು ಸ್ಥಿತಿ (ಟನ್‌ಗಳಲ್ಲಿ)

ವಾರ್ಷಿಕ ಬೇಡಿಕೆ; 4.50 ಕೋಟಿ

ಎಂ– ಸ್ಯಾಂಡ್‌; 3 ಕೋಟಿ

ನದಿ ಮರಳು; 50 ಲಕ್ಷ,

ಹೊರ ರಾಜ್ಯಗಳಿಂದ; 20 ಲಕ್ಷ

ಕೊರತೆ; 80 ಲಕ್ಷ


=============

ರಾಜ್ಯದಲ್ಲಿ ಮರಳು ದರ

ಮರಳು ವಿಧ ; ದರ (ಟನ್‌ಗೆ ₹ ಗಳಲ್ಲಿ)

ಎಂ–ಸ್ಯಾಂಡ್‌; 800–1,200

ನದಿ ಮರಳು; 2,400- 3,000

––––––––––––––––––

ರಾಜ್ಯದಲ್ಲಿ ಎಂ– ಸ್ಯಾಂಡ್‌ ಉತ್ಪಾದಿಸುವ ಕ್ರಷರ್‌ಗಳು– 545

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT