ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪಕ್ಷಗಳು ಯಶಸ್ಸು ಕಂಡಿದ್ದು ಕಡಿಮೆ: ರೆಡ್ಡಿಗೆ ಎಂಪಿ ಸಂಗಣ್ಣ ಕರಡಿ ಕೌಂಟರ್

Last Updated 25 ಡಿಸೆಂಬರ್ 2022, 10:26 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದೆ ಹಲವರು ಹೊಸ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿದ್ದರೂ ಯಶಸ್ಸು ಕಂಡಿದ್ದು ಕಡಿಮೆ. ಆದ್ದರಿಂದ ಜನಾರ್ದನ ರೆಡ್ಡಿ ಕಟ್ಟಿದ ಹೊಸ ಪಕ್ಷದ ಬಗ್ಗೆ ಈಗಲೇ ಏನೂ ಹೇಳುವುದು ಸರಿಯಲ್ಲ" ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಂಗಾರಪ್ಪ ಮತ್ತು ಬಿ.ಎಸ್‌. ಯಡಿಯೂರಪ್ಪ ಹಿಂದೆ ಹೊಸ ಪಕ್ಷಗಳನ್ನು ಕಟ್ಟಿದಾಗ ಯಶಸ್ಸು ಕಂಡಿದ್ದು ಕಡಿಮೆ. ಎಲ್ಲರಿಗೂ ಅವರದ್ದೇ ಆದ ಧ್ಯೇಯ ಹಾಗೂ ಧೋರಣೆಗಳು ಇರುತ್ತವೆ. ರೆಡ್ಡಿ ಅವರಿಗೆ ತಮ್ಮ ಯೋಜನೆಗಳ ಬಗ್ಗೆ ಗಟ್ಟಿ ನಂಬಿಕೆ ಇರಬಹುದು. ಮುಂಬರುವ ಚುನಾವಣೆಯಲ್ಲಿ ರೆಡ್ಡಿ ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪರಿಣಾಮ ಬೀರುತ್ತದೆ ಎನ್ನುವುದು ಈಗಲೇ ಹೇಳುವುದು ಕಷ್ಟ’ ಎಂದು ಅಭಿಪ್ರಾಯಪಟ್ಟರು.

‘ರಾಜಕಾರಣದಲ್ಲಿ ಹೊಸ ಪಕ್ಷಗಳ ಉದಯ ಸಹಜ. ಜನಾರ್ದನ ರೆಡ್ಡಿ ಮೊದಲು ಬಿಜೆಪಿಯಲ್ಲಿಯೇ ಇದ್ದ ಕಾರಣ ಅವರ ಬೆಂಬಲಿಗರಲ್ಲಿ ಗೊಂದಲವಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು’ ಎಂದರು.

ರೆಡ್ಡಿ ಜಿಲ್ಲೆಯ ಬಿಜೆಪಿ ಮುಖಂಡರನ್ನು ಸಂಪರ್ಕ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಗೆ ‘ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಸಂಸದನಾಗಿ ನನಗಿನ್ನು ಒಂದೂವರೆ ವರ್ಷ ಅಧಿಕಾರವಿದೆ. ನನ್ನ ಮುಂದಿನ ರಾಜಕೀಯವೂ ಬಿಜೆಪಿಯಲ್ಲಿಯೇ ಇರುತ್ತದೆ. ಬೇರೆ ಪಕ್ಷಕ್ಕೆ ಹೋಗುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲೇಬೇಡಿ’ ಎಂದು ಹೇಳಿದರು.

‘ಬಿಜೆಪಿಯಲ್ಲಿದ್ದ ಕಾರ್ಯಕರ್ತರಿಗೆ ರೆಡ್ಡಿಯ ಹೊಸ ಪಕ್ಷದ ಬಗ್ಗೆ ಆಸಕ್ತಿ ಇದ್ದರೂ ಇರಬಹುದು. ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಹಳಷ್ಟು ಜನರ ಜೊತೆಗೆ ಅವರು ನಂಟು ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT