ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾನಿ: ಸಚಿವ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ ಖಂಡನೆ

Last Updated 18 ಡಿಸೆಂಬರ್ 2021, 6:07 IST
ಅಕ್ಷರ ಗಾತ್ರ

ಬೆಂಗಳೂರು: 'ಬೆಳಗಾವಿ ನಗರದಲ್ಲಿ ಪ್ರಾತಸ್ಮರಣೀಯ ವೀರನಾದ, ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

'ಪ್ರತಿ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತ ಭಾರತೀಯ ಪುತ್ರರು ಅವರು. ಇವರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಭಾಷಾ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ' ಎಂದಿದ್ದಾರೆ.

'ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸಬೇಕೆಂದು ವಿನಂತಿಸುತ್ತೇನೆ' ಎಂದು ತಿಳಿಸಿದ್ದಾರೆ.

ಸಚಿವ ಗೋವಿಂದ ಕಾರಜೋಳ ಖಂಡನೆ

'ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಂಡರು, ದುಷ್ಕರ್ಮಿಗಳು ಮಾಡಿದ ಅಪಮಾನ ಹೇಯಕೃತ್ಯ. ಇದು ಖಂಡನಾರ್ಹ. ಶಿವಾಜಿ ಮಹಾರಾಜರ ಪೂರ್ವಜರು ಕರ್ನಾಟಕದವರು. ಯಾವುದೇ ಜಾತಿ, ಮತ, ಪಂಥ, ಭಾಷೆಗೆ ಸೀಮಿತವಾದ ಸಂಕುಚಿತ ಮನೋಭಾವ ಸಲ್ಲದು' ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿ ದೇಶಕ್ಕೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿವರು. ಬ್ರಿಟಿಷರ ವಿರುದ್ಧ ಕಾದಾಡಿ ನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದವರು. ಸನಾತನ ಹಿಂದೂ ಧರ್ಮದ ರಕ್ಷಕ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವಿದ್ವಂಸಕ ಕುಕೃತ್ಯ. ಇಂತಹ ಘಟನೆ ಅಕ್ಷಮ್ಯ. ಕಿಡಿಗೇಡಿಗಳು ಮಾಡಿದ ಈ ಕೃತ್ಯದಿಂದ ನಾಗರಿಕರಾರು ವಿಚಲಿತರಾಗದೇ ಶಾಂತಿ ಕಾಪಾಡಬೇಕು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT