ಸೋಮವಾರ, ಅಕ್ಟೋಬರ್ 18, 2021
25 °C

ಭ್ರಷ್ಟರಿಗೆ ಶಿಕ್ಷೆಯ ಭಯವೇ ಇಲ್ಲ: ಸಂತೋಷ್‌ ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭ್ರಷ್ಟರಿಗೆ ಶಿಕ್ಷೆಯ ಭಯವೇ ಇಲ್ಲದಂತಾಗಿದೆ. ಹೀಗಾಗಿ ಅವರು ಅವ್ಯಾಹತವಾಗಿ ಹಗರಣಗಳನ್ನು ಮಾಡುತ್ತಿದ್ದಾರೆ. ಸ್ವಾರ್ಥ ಮತ್ತು ದುರಾಸೆಯೂ ಇದಕ್ಕೆ ಕಾರಣ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬರುವವರಿಗೆ ಭವ್ಯ ಸ್ವಾಗತ ನೀಡುವ ಪರಿಪಾಠ ಹೆಚ್ಚುತ್ತಿರುವುದು ವಿಷಾದನೀಯ. ಜನರ ಈ ಮನೋಧೋರಣೆ ಬದಲಾಗಬೇಕು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ ತಿಳಿಸಿದರು.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಹಾಗೂ ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ (ಎಐಯುವೈಎಸ್‌ಸಿ) ರಾಜ್ಯ ಸಮಿತಿ ಹಮ್ಮಿಕೊಂಡಿದ್ದ ‘ಕೆಪಿಎಸ್‌ಸಿ ಸ್ವಚ್ಛಗೊಳಿಸಿ; ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ’ ಕುರಿತ ವೆಬಿನಾರ್‌ನಲ್ಲಿ ಭಾನುವಾರ ಮಾತನಾಡಿದರು.

‘ಈಗಿನ ಕೆಪಿಎಸ್‌ಸಿ ಅಧ್ಯಕ್ಷರ ನೇಮಕವು ಕಾನೂನುಬಾಹಿರ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟರಿಗೆ ಮಣೆ ಹಾಕುತ್ತಿರುವುದಕ್ಕೆ ಇದೊಂದು ನಿದರ್ಶನ. ಲಂಚಕೊಟ್ಟು ಸರ್ಕಾರಿ ಸೇವೆಗೆ ಸೇರುವವರು ಲಂಚಕೋರರಾಗುತ್ತಿದ್ದಾರೆ. ಅರ್ಹತೆಯ ಆಧಾರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ನಾವು ಭ್ರಷ್ಟರಾಗುವುದು ತಪ್ಪುತ್ತದೆ’ ಎಂದು ತಿಳಿಸಿದರು.

ಅಖಿಲ ಭಾರತ ಎಐಡಿವೈಒ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ‘ಸರ್ಕಾರಗಳು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತಿಲ್ಲ. ಹೇರಳವಾಗಿರುವ ಮಾನವ ಸಂಪನ್ಮೂಲದ ಸದ್ಬಳಕೆಯೂ ಆಗುತ್ತಿಲ್ಲ. ದಕ್ಷ ಆಡಳಿತಗಾರರನ್ನು ಸೃಷ್ಟಿಸಬೇಕಿರುವ ಕೆಪಿಎಸ್‌ಸಿ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ಸರ್ಕಾರದ ಮುಖ್ಯಸ್ಥರು ತಮ್ಮ ಹಿಂಬಾಲಕರನ್ನೇ ಈ ಸಂಸ್ಥೆಯ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದಾರೆ. ಇದು ವಿಪರ್ಯಾಸ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು