ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್‌ ಕುಟುಂಬ: ಜಮೀನು ಮಂಜೂರು ರದ್ದು

ಸಂಡೂರು ತಹಶೀಲ್ದಾರ್‌ ‘ತಲೆದಂಡ’ಕ್ಕೆ ಕಾರಣವಾಗಿದ್ದ ವಿವಾದ
Last Updated 28 ಆಗಸ್ಟ್ 2022, 19:51 IST
ಅಕ್ಷರ ಗಾತ್ರ

ಬಳ್ಳಾರಿ: ಸಂಡೂರು ತಹಶೀಲ್ದಾರ್‌ ಎಚ್‌.ಜೆ.ರಶ್ಮಿ ಅವರ ವರ್ಗಾವಣೆಗೆ ಕಾರಣವಾಗಿದ್ದ, ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಸರ್ವೆ ನಂಬರ್‌ 123ರ 47.63 ಎಕರೆ ಸರ್ಕಾರಿ ಜಮೀನು ಮಂಜೂರಾತಿ ರದ್ದುಪಡಿಸಿ ಬಳ್ಳಾರಿ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದರಿಂದಾಗಿ ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌ ಕುಟುಂಬ ಜಮೀನಿನ ಮೇಲೆ ಹೊಂದಿದ್ದ ಹಿಡಿತ ತಪ್ಪಿದಂತಾಗಿದೆ.ಹನುಮನ ಮಗ ಹೊನ್ನೂರ ಎಂಬುವವರಿಗೆ ಜಮೀನು ಮಂಜೂರಾಗಿದ್ದು, ಅವರಿಂದ ಮಾಜಿ ಸಚಿವ ಸಂತೋಷ್‌ ಲಾಡ್‌ ಕುಟುಂಬ ಕ್ರಯಕ್ಕೆ ಪಡೆದಿತ್ತು ಎಂದು ಪ್ರತಿಪಾದಿಸಲಾಗಿತ್ತು.

ಉಪ ವಿಭಾಗಾಧಿಕಾರಿ ಆಕಾಶ್‌ ಶಂಕರ್‌ ಜುಲೈ 14ರಂದು ಜಮೀನು ಮಂಜೂರಾತಿ ರದ್ದುಪಡಿಸಿದ್ದರಿಂದ ಲಾಡ್ ಕುಟುಂಬದ ಮಾಲೀಕತ್ವ ಅನೂರ್ಜಿತಗೊಂಡಿದೆ. ಈ ಪ್ರಕರಣದಲ್ಲಿ ಇನ್ನೂ 16 ರೈತರು ಪ್ರತಿವಾದಿಗಳಾಗಿದ್ದಾರೆ.

‘47.63 ಎಕರೆ ಸರ್ಕಾರಿ ಭೂಮಿ ಮಂಜೂರಾತಿ ರದ್ದತಿಗೆ ಉಪ ವಿಭಾಗಾಧಿಕಾರಿಗೆ ಶಿಫಾರಸು ಮಾಡಿದ್ದೇ ರಶ್ಮಿ ವರ್ಗಾವಣೆಗೆ ಕಾರಣ’ ಎಂದು ಹೇಳಲಾಗಿತ್ತು. ತಹಶೀಲ್ದಾರ್‌ ಮೇಲೆ ಸ್ಥಳೀಯ ಶಾಸಕರು ಅಸಮಾಧಾನಗೊಂಡಿದ್ದರು. ಅದನ್ನು ನೇರವಾಗಿ ಹೇಳಲಾಗದೆ, ತಹಶೀಲ್ದಾರ್‌ ಶಿಷ್ಟಾಚಾರ ಪಾಲಿಸುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಗೌರವ ಕೊಡುವುದಿಲ್ಲ ಎಂದು ಆರೋಪಿಸಿ ವಿಧಾನಸಭೆಯಲ್ಲಿ ದೂರಿದ್ದರು. ಬಳಿಕ ರಶ್ಮಿ ಅವರ ವರ್ಗಾವಣೆ ಆಗಿತ್ತು ಎನ್ನಲಾಗಿದೆ.

ಉಪ ವಿಭಾಗಾಧಿಕಾರಿ ಕೊಟ್ಟ ಕಾರಣ: 47.63 ಎಕರೆ ಜಮೀನು ಸರ್ಕಾರಿ ಜಮೀನು. ಕಾಲಂ (12) ರಲ್ಲಿ ರಾಳಗುಡ್ಡ ಎಂದಿದ್ದು, ಕೈ ಬರಹದ ಪಹಣಿಯಲ್ಲಿ ಹನುಮನ ಮಗ ಹೊನ್ನೂರ ಎಂಬ ಹೆಸರಿಗೆ ಖಾತೆ ಇದೆ. ಆದರೆ, ಹಕ್ಕು ಬದಲಾವಣೆ ಸಂಖ್ಯೆ ಇರುವುದಿಲ್ಲ. 47.63 ಎಕರೆ ಜಮೀನನ್ನು ಒಬ್ಬ ರೈತನಿಗೆ ಮಂಜೂರು ಮಾಡಿ ಭೂ ಮಂಜೂರಾತಿ ಅಧಿನಿಯಮ ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸಲು ಮೂಲ ದಾಖಲೆಗಳು ಲಭ್ಯ ಇರುವುದಿಲ್ಲ.

‘ಮೂಲ ಮಂಜೂರಾತಿದಾರ ಹನುಮನಿಂದ ಹೀರೋಜಿ ಲಾಡ್‌, ವಿನಾಯಕ ಲಾಡ್‌, ಅಶೋಕ್‌ ಲಾಡ್‌, ಸಂತೋಷ್ ಲಾಡ್‌, ಶಿವಾಜಿರಾವ್‌ ಪೋಳ್‌ ಮತ್ತು ರೂಪ ಯು. ಲಾಡ್‌ ಈ ಜಮೀನು ಖರೀದಿಸಿರುವುದಕ್ಕೆ ನೋಂದಾಯಿತ ಪತ್ರ, ಹಕ್ಕು ಬದಲಾವಣೆ ಪತ್ರ ಹಾಜರುಪಡಿಸಿರುವುದಿಲ್ಲ. 1992–97ರವರೆಗೆ ಪಹಣಿಯಲ್ಲಿ ನಮೂದಾಗಿರುವ ‍ಪಟ್ಟಾದಾರರೆಲ್ಲರೂ ಕ್ರಯದ ಮೂಲಕ ಹಕ್ಕು ಬದಲಾವಣೆ ಹೊಂದಿರುವುದಾಗಿ ಹೇಳಿದ್ದಾರೆ. ಪ್ರತಿವಾದಿಗಳು ಜಮೀನಿನ ಸ್ವಾಧೀನಾನುಭವದಲ್ಲಿ ಇಲ್ಲದಿರುವುದು ಕಂಡುಬಂದಿರುತ್ತದೆ’ ಎಂದು ಎ.ಸಿ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಕಾರಣಕ್ಕೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು, ಪಹಣಿಯಲ್ಲಿ ಅನಧಿಕೃತವಾಗಿ ನಮೂದಾಗಿರುವ ಹೆಸರುಗಳನ್ನು ರದ್ದುಪಡಿಸಿ ‘ಸರ್ಕಾರ’ ಎಂದು ನಮೂದಿಸಲು ಸಂಡೂರು ತಹಶೀಲ್ದಾರ್‌ಗೆಉಪ ವಿಭಾಗಾಧಿಕಾರಿ ಆದೇಶಿಸಿದ್ದಾರೆ.

ವ್ಯಾಜ್ಯ ಸಿವಿಲ್‌ ನ್ಯಾಯಾಲಯದಲ್ಲಿದೆ: ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌
‘ಮಾಳಾಪುರ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ಕೂಡ್ಲಿಗಿ ಸಿವಿಲ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಕಾನೂನು ಹೋರಾಟ ಮುಂದುವರಿಯಲಿದೆ’ ಎಂದು ಕಾಂಗ್ರೆಸ್‌ ಮುಖಂಡ ಸಂತೋಷ್‌ ಲಾಡ್‌ ಸ್ಪಷ್ಟಪಡಿಸಿದ್ದಾರೆ.

‘ಜಮೀನು ಮಂಜೂರಾತಿ ರದ್ದತಿಯಿಂದ ಉಪ ವಿಭಾಗಾಧಿಕಾರಿ ಆಕಾಶ್‌ ಶಂಕರ್‌ ಆದೇಶವನ್ನು ನಮ್ಮ ಕುಟುಂಬದ ಸದಸ್ಯರು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT