ಸೋಮವಾರ, ಮಾರ್ಚ್ 20, 2023
30 °C

ಪ್ರಾಂಶುಪಾಲರ ಹುದ್ದೆಗೆ ವಯೋಮಿತಿ ನಿಗದಿ: ತೀವ್ರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ನೇಮಕಕ್ಕೆ 55 ವರ್ಷ ವಯೋಮಿತಿ ನಿಗದಿ‍ಪಡಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿರುವ ಸಂಘ, ಪ್ರಾಂಶುಪಾಲರ ಹುದ್ದೆಯ ನೇಮಕಕ್ಕೆ ನಿಗದಿಪಡಿಸಿರುವ ವಯೋಮಿತಿಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದೆ.

ಯುಜಿಸಿಯ ನಿಯಮಾವಳಿಯಲ್ಲೂ ವಯೋಮಿತಿಯ ಪ್ರಸ್ತಾವ ಇಲ್ಲ. ಹೀಗಿರುವಾಗ ಸರ್ಕಾರದ ಈ ನಡೆ ಸರಿಯಲ್ಲ. ಇದನ್ನು ತೆಗೆದು ಹಾಕದಿದ್ದರೆ ಅಧ್ಯಾಪಕರು  ನ್ಯಾಯಾಲಯದ ಮೆಟ್ಟಿಲೇರುವುದು ಖಚಿತ. ಇದರಿಂದ ಇಡೀ ನೇಮಕಾತಿ ಪ್ರಕ್ರಿಯೆಯೇ ಸ್ಥಗಿತಗೊಳ್ಳಲಿದೆ ಎಂದೂ ಸಂಘ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ 435 ಸರ್ಕಾರಿ ಕಾಲೇಜುಗಳ ಪೈಕಿ 1ರಲ್ಲಿ ಮಾತ್ರ ಕಾಯಂ ಪ್ರಾಂಶುಪಾಲ ಇದ್ದಾರೆ. ಉಳಿದ ಕಡೆ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 12 ವರ್ಷಗಳಿಂದ ಕಾಯಂ ಪ್ರಾಂಶುಪಾಲರ ನೇಮಕ ಆಗಿಲ್ಲ. ಯುಜಿಸಿ ನಿಯಮದ ನೆಪವೊಡ್ಡಿ ಪ್ರಾಂಶುಪಾಲರ ಹುದ್ದೆಗಳಿಗೆ ಅಧ್ಯಾಪಕರುಗಳಿಗೆ ನೀಡುತ್ತಿದ್ದ ಪದೋನ್ನತಿಯನ್ನು ನಿರಾಕರಿಸಲಾಗಿತ್ತು. ಇದೀಗ ವಯೋಮಿತಿ ನಿಗದಿಪಡಿಸಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರಿಂದ ಅಧ್ಯಾಪಕ ವರ್ಗದಲ್ಲಿ ನಿರಾಶೆ ಮೂಡಿದೆ. ಅಲ್ಲದೆ, ಪ್ರಾಂಶುಪಾಲ ಹುದ್ದೆಗಳು ಸರ್ಕಾರಿ ಕಾಲೇಜುಗಳ ಹೆಚ್ಚಿನ ಅಧ್ಯಾಪಕರಿಗೆ ದೊರೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದೂ ಮನವಿಯಲ್ಲಿ ಸಂಘ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು