ಭಾನುವಾರ, ಮೇ 16, 2021
22 °C

ಅತ್ಯಾಚಾರ ಪ್ರಕರಣ: ರಮೇಶ ಜಾರಕಿಹೊಳಿ ವಿಚಾರಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದ ಸಂಬಂಧ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಮಂಗಳವಾರ (ಏ. 20) ವಿಶೇಷ ತನಿಖಾ ದಳದ (ಎಸ್‌ಐಟಿ) ಎದುರು ಹಾಜರಾಗುವ ಸಾಧ್ಯತೆ ಇದ್ದು, ಅವರನ್ನು ವಿಚಾರಣೆಗೆ ಒಳಪಡಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಕೊರೊನಾ ಸೋಂಕು ತಗುಲಿದ್ದರಿಂದಾಗಿ ಈ ಹಿಂದೆ ವಿಚಾರಣೆಗೆ ರಮೇಶ ಗೈರಾಗಿದ್ದರು. ಕೆಲ ದಿನಗಳ ಹಿಂದೆಯೇ ಅವರು ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಏಪ್ರಿಲ್ 20ರಂದು ಸಂಜೆ 4 ವಿಚಾರಣೆಗಾಗಿ ಬೆಂಗಳೂರು ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಬರುವಂತೆ ನೋಟಿಸ್ ನೀಡಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘ನೋಟಿಸ್ ಪ್ರತಿ ನೀಡಲು ರಮೇಶ ಮನೆ ಇರುವ ಗೋಕಾಕಗೆ ಅಧಿಕಾರಿಗಳು ಹೋಗಿದ್ದರು. ಆದರೆ, ಅವರು ಲಭ್ಯ ರಾಗಲಿಲ್ಲ. ಹೀಗಾಗಿ, ರಮೇಶ ಸಹೋದ ರರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಕಚೇರಿಗೆ ನೋಟಿಸ್ ಪ್ರತಿ ಅಂಟಿಸಿ ಬರಲಾಗಿದೆ. ಪರ್ಯಾಯ ಮಾರ್ಗದಲ್ಲೂ ನೋಟಿಸ್‌ ಕಳುಹಿಸಲಾಗಿದೆ’ ಎಂದೂ ತಿಳಿಸಿವೆ.

‘ಇದೊಂದು ಗಂಭೀರ ಪ್ರಕರಣ. ಸಂತ್ರಸ್ತೆಯು ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಆದರೆ, ಆರೋಪಿ ವಿಚಾರಣೆಗೆ ಬಂದಿಲ್ಲ. ಈ ಬಾರಿಯೂ ಅವರು ವಿಚಾರಣೆಗೆ ಹಾಜರಾಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಸ್‌ಐಟಿ ಮೂಲಗಳು ಹೇಳಿವೆ.

ಕಬ್ಬನ್‌ ಪಾರ್ಕ್‌ ಠಾಣೆ ಪ್ರಕರಣ: ಮಾರ್ಚ್‌ 2ರಂದು ಸಿ.ಡಿ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಹೋಗಿದ್ದ ಸಂತ್ರಸ್ತೆ, ವಕೀಲರ ಮೂಲಕ ಕಬ್ಬನ್ ಪಾರ್ಕ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ರಮೇಶ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮಾ. 30ರಂದು ನ್ಯಾಯಾಲಯದ ಎದುರು ಹಾಜರಾಗಿದ್ದರು. ‘ಕೆಲಸದ ಆಮಿಷವೊಡ್ಡಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ಸಿಆರ್‌ಪಿಸಿ 164ರಡಿ ಹೇಳಿಕೆ ಸಹ ನೀಡಿದ್ದರು. ಅದೇ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಿರುವ ತನಿಖಾಧಿಕಾರಿ ಎಂ.ಸಿ. ಕವಿತಾ, ಸಂತ್ರಸ್ತೆ ಹೇಳಿಕೆ ಸಂಗ್ರಹ ಹಾಗೂ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಗಳನ್ನು ಈಗಾಗಲೇ ಪೂರೈಸಿದ್ದಾರೆ.

ಆರೋಪಿಯನ್ನೂ ವಿಚಾರಣೆಗೆ ಒಳಪಡಿಸುವುದಕ್ಕಾಗಿ ರಮೇಶ ಜಾರಕಿಹೊಳಿ ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಕೊರೊನಾ ಸೋಂಕು ತಗುಲಿದ್ದರಿಂದಾಗಿ ರಮೇಶ ಅವರು, ವಕೀಲರ ಮೂಲಕ ಕಾಲಾವಕಾಶ ಕೋರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು