ಸೋಮವಾರ, ಮಾರ್ಚ್ 1, 2021
28 °C
ಜಿಲ್ಲಾಡಳಿತ ಸ್ಪಷ್ಟನೆ

ಹುಣಸೋಡು ಸ್ಫೋಟ ಪ್ರಕರಣ: 15 ಕಾರ್ಮಿಕರ ಪೈಕಿ ಸಿಕ್ಕಿದ್ದು ಐವರ ಮೃತದೇಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಬ್ಬಲಗೆರೆ–ಹುಣಸೋಡು ಮಧ್ಯೆ ಇರುವ ಜಲ್ಲಿ ಕ್ರಷರ್‌ ಬಳಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೈಟ್‌ ಗುರುವಾರ ರಾತ್ರಿ ಸ್ಫೋಟಿಸಿ, ಬಿಹಾರ ಮೂಲದ ಸುಮಾರು 15 ಕಾರ್ಮಿಕರು ಮೃತಪಟ್ಟಿದ್ದಾರೆ.

ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೈಟ್‌ ಬಾಕ್ಸ್‌ಗಳು ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಸ್ಥಳದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಸ್ಥಳೀಯರಾದ ನಾಗರಾಜಪ್ಪ ತಿಳಿಸಿದರು.

ಭೂಕಂಪನದ ಸಮಯದಲ್ಲೇ ಈ ಘಟನೆ ನಡೆದಿದೆ. ಭೂಮಿ ಕಂಪಿಸಿದಾಗ ಘರ್ಷಣೆಯಿಂದ ಸ್ಫೊಟವಾಗಿರಬಹುದು ಎಂದು ಕೆಲವರು ಹೇಳಿದರೆ, ಸ್ಫೋಟದಿಂದಲೇ ಭೂಕಂಪನದ ಅನುಭವವಾಗಿದೆ ಎಂದು ಹಲವರು ಅನಿಸಿಕೆ ವ್ಯಕ್ತಪಡಿಸಿದರು.

ಐವರ ಮೃತದೇಹ ಪತ್ತೆ
ಶಿವಮೊಗ್ಗ:
ಅಬ್ಬಲಗೆರೆ–ಹುಣಸೋಡು ಜಲ್ಲಿ ಕ್ರಷರ್‌ ಬಳಿ ಡೈನಾಮೈಟ್‌ ಸ್ಫೋಟಗೊಂಡ ಸ್ಥಳದಲ್ಲಿ ಶುಕ್ರವಾರ ಐವರ ಮೃತದೇಹಗಳು ಮತ್ತೆಯಾಗಿವೆ. ಎಲ್ಲರೂ ಬಿಹಾರ ಮೂಲದ ಕಾರ್ಮಿಕರು ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.

ಜಮೀನಿನ ಮಾಲೀಕ ಅವಿನಾಶ್ ಕುಲಕರ್ಣಿ, ಕ್ರಷರ್ ನಿರ್ವಹಣೆ ಮಾಡುತ್ತಿದ್ದ ನರಸಿಂಹ, ಸುಧಾಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಬಾಂಬ್‌ ನಿಷ್ಕ್ರಿಯ ದಳ ತಪಾಸಣೆ: ಸ್ಫೋಟದ ಸ್ಥಳದಲ್ಲಿ ಇನ್ನೂ ಜೀವಂತ ಸ್ಫೋಟಕಗಳು ಇರಬಹುದು ಶಂಕೆ ಇದ್ದ ಕಾರಣ ಯಾರಿಗೂ ಪ್ರವೇಶ ನೀಡಿರಲಿಲ್ಲ. ಮೃತದೇಹಗಳನ್ನು ಸಾಗಿಸಲು ಮುಂದಾಗಿರಲಿಲ್ಲ. ಬೆಳಿಗ್ಗೆ 11ರ ವೇಳೆಗೆ ಬಾಂಬ್‌ ನಿಷ್ಕ್ರಿಯ ದಳ, ವಿಧಿವಿಜ್ಞಾನ ತಜ್ಷರು, ಗಣಿ ಮತ್ತು ಭೂ ವಿಜ್ಞಾನಿಗಳನ್ನು ಒಳಗೊಂಡ ತಂಡ ಮಂಗಳೂರು, ಬೆಂಗಳೂರಿನಿಂದ ಆಗಿಸಿ, ಸ್ಥಳ ಪರಿಶೀಲನೆ ನಡೆಸಿದರು. ಸಜೀವ ಸ್ಫೋಟಕಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿದ ನಂತರ ಛಿದ್ರಗೊಂಡ ದೇಹಗಳನ್ನು ಒಟ್ಟುಗೂಡಿಸಿ, ಅಂಬುಲೆನ್ಸ್ ಮೂಲಕ ಸಾಗಿಸಿದರು.

ದೊರಕದ ಸ್ಫೋಟಕ ಸರಬರಾಜು ಮಾಹಿತಿ: ಹುಣಸೋಡು, ಅಬ್ಬಲಗೆರೆ, ಕಲ್ಲುಗಂಗೂರು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ ಸುತ್ತಮುತ್ತ ಸುಮಾರು 100 ಕಲ್ಲು ಕ್ವಾರಿಗಳು, ಕ್ರಷರ್‌ಗಳಿವೆ. ಅವುಗಳಲ್ಲಿ ಅರ್ಧಷ್ಟು ಪರವಾನಗಿ ಹೊಂದಿದ್ದರೆ, ಉಳಿದವು ಅನಧಿಕೃತ. ಸ್ಫೋಟ ನಡೆದ ಎಸ್‌ಎಸ್‌ ಕ್ರಷರ್‌ಗೆ ಎಂ ಸ್ಯಾಂಡ್‌ ತಯಾರಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ, ಭಾರಿ ಪ್ರಮಾಣದ ಸ್ಫೋಟಕಗಳನ್ನು ಏಕೆ ತಂದಿದ್ದರು ಎನ್ನುವ ಕುರಿತು ವಶಕ್ಕೆ ಪಡೆದ ಆರೋಪಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

ಇದ್ದ ಕಾರ್ಮಿಕರು ಎಷ್ಟು?
ಸ್ಫೋಟದ ಸ್ಥಳದಲ್ಲಿ ಗುರುವಾರ ರಾತ್ರಿ ಲಾರಿ ಚಾಲಕ, ಕ್ಲೀನರ್, ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸೇರಿದ 15ರಿಂದ 20 ಜನರು ಇದ್ದರು ಎನ್ನಲಾಗಿದೆ. ಆದರೆ, ಮೃತದೇಹ ಸಿಕ್ಕಿರುವುದು ಐವರದು ಮಾತ್ರ. ಹಾಗಾಗಿ, ಉಳಿದವರು ಆ ಸಮಯದಲ್ಲಿ ಅಲ್ಲಿದ್ದದರೆ, ಇಲ್ಲ ಅವರ ದೇಹಗಳು ಬೂದಿಯಾಗಿ ಹೋಗಿವೆಯೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸಚಿವರಾದ ಮುರುಗೇಶ್ ನಿರಾಣಿ, ಕೆ.ಎಸ್‌.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಸ್ಥಳಕ್ಕೆ ಭೇಟಿ ನೀಡಿದ್ದರು.

ನಾಲ್ಕು ತಿಂಗಳ ಹಿಂದಿನ ಘಟನೆ ಏನು?
ಹುಣಸೋಡು ಬಳಿ ನಡೆದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಹರಿಹಾಯ್ದರು.

ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಸಮೀಪದ ಊರುಗಡೂರು ಬಳಿ ಭಾರಿ ಪ್ರಮಾಣದ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದವು. ಅವುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಕರಣ ದಾಖಲಿಸದೇ ಆರೋಪಿಗಳನ್ನು ಬಿಟ್ಟಿದ್ದರು. ಇದರ ಹಿಂದೆ ನಮ್ಮಂಥ ರಾಜಕಾರಣಿಗಳ ಕೈವಾಡವಿದೆ. ಅಂದು ಕಠಿಣ ಕ್ರಮ ಕೈಗೊಂಡಿದ್ದರೆ ಇಂದು ಇಷ್ಟೊಂದು ಪ್ರಮಾಣದ ಸ್ಫೋಟಕ ಸಾಗಣೆಗೆ ಭಯಪಡುತ್ತಿದ್ದರು. ಈಗ ಮುಗ್ಧ ಕಾರ್ಮಿಕರ ಜೀವ ಬಲಿಯಾಗಿದೆ. ಅದೇ ದೊಡ್ಡವರು ಸತ್ತಿದ್ದರೆ ಹೀಗೆ ಬಿಡುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಲಂಚ ಸಿಗುವ ಕಾರಣಕ್ಕೇ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿಲ್ಲ. ಇಂತಹ ಅಕ್ರಮದ ಹಿಂದೆ ಹಲವು ರಾಜಕಾರಣಿಗಳು ಶಾಮೀಲಾಗಿದ್ದಾರೆ. ಹಲವು ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬದ ಒಡೆತನದಲ್ಲೇ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್ ಆರೋಪಿಸಿದರು.

ಇವನ್ನೂ ಓದಿ...
     

    ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು