ರಾಜ್ಯಗಳ ಆಡಳಿತ ವಶಕ್ಕೆ ಕೇಂದ್ರದ ಯತ್ನ: ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯ ಆಡಳಿತ ಸೇವೆಯ ಸಿಬ್ಬಂದಿ ನಿಯಮ–1954ಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯಗಳ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಪತ್ರ ಬರೆದಿರುವ ಅವರು, ‘ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ತಿದ್ದುಪಡಿಗಳು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿವೆ. ಅದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಪ್ರತಿಪಕ್ಷಗಳ ಜತೆ ಚರ್ಚಿಸಿ ಕೇಂದ್ರ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕಾಯ್ದೆ ತಿದ್ದುಪಡಿ ಪ್ರಸ್ತಾವ ಕುರಿತು ಇದೇ 12ರಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಇದೇ 25ರೊಳಗೆ ಅಭಿಪ್ರಾಯವನ್ನು ನೀಡುವಂತೆಯೂ ಕೋರಲಾಗಿದೆ. ಕೇಂದ್ರ ಸರ್ಕಾರವು ಮೂರು ತಿದ್ದುಪಡಿಗಳನ್ನು ಪ್ರಸ್ತಾಪಿಸಿದ್ದು, ಅವು ರಾಜ್ಯಗಳ ಆಡಳಿತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪಕ್ಕೆ ಎಡೆಮಾಡಲಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರವು ಬೇಕೆಂದಾಗ ತನ್ನ ಸೇವೆಗೆ ಕರೆಸಿಕೊಳ್ಳುವ ಮತ್ತು ಬೇಡ ಎಂದಾಗ ರಾಜ್ಯಗಳಿಗೆ ವಾಪಸ್ ಕಳುಹಿಸುವುದಕ್ಕೆ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸುವ ಪ್ರಸ್ತಾವವಿದೆ. ಕೇಂದ್ರ ಸರ್ಕಾರದ ಸೂಚನೆಯನ್ನು ರಾಜ್ಯಗಳು ಪಾಲಿಸದಿದ್ದರೆ ಕೇಂದ್ರವು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುವ ಪ್ರಸ್ತಾವವೂ ಇದೆ. ರಾಜ್ಯ ಸರ್ಕಾರಗಳ ಅಧಿಕಾರಿಗಳ ಮೇಲೆ ಕೇಂದ್ರವು ಹಿಡಿತ ಸಾಧಿಸುವುದು ಆಡಳಿತ ವ್ಯವಸ್ಥೆಯ ನಿಯಂತ್ರಣಕ್ಕೂ ದಾರಿಯಾಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರಾಜ್ಯಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮೋದಿಯವರ ಈ ಸರ್ವಾಧಿಕಾರಿ ಧೋರಣೆ ಒಕ್ಕೂಟ ವ್ಯವಸ್ಥೆಗೆ ವಿರೋಧವಾದುದು. ಈಗಾಗಲೇ ಆರು ರಾಜ್ಯಗಳು ಈ ಪ್ರಸ್ತಾವವನ್ನು ವಿರೋಧಿಸಿವೆ. ರಾಜ್ಯ ಸರ್ಕಾರವೂ ಈ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಿಳಿ ಹೇಳಬೇಕು. ವಿರೋಧ ಪಕ್ಷಗಳ ಮುಖಂಡರ ಸಭೆ ಕರೆದು, ಚರ್ಚಿಸಿದ ಬಳಿಕ ರಾಜ್ಯದ ವಿರೋಧವನ್ನು ದಾಖಲಿಸಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.