ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಟಿ. ದೇವೇಗೌಡ ‘ಕೈ’ ಹಿಡಿಯದಂತೆ ತಂತ್ರಗಾರಿಕೆ

ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಸಿದ್ದರಾಮಯ್ಯ ತಂತ್ರಕ್ಕೆ ಸ್ವಪಕ್ಷೀಯರಿಂದಲೇ ತಡೆ
Last Updated 22 ಫೆಬ್ರುವರಿ 2021, 20:53 IST
ಅಕ್ಷರ ಗಾತ್ರ

ಮೈಸೂರು: ತವರಿನಲ್ಲಿ ಜೆಡಿಎಸ್‌ ಬಲ ಕುಂದಿಸಲು ಹಾಗೂ ಬಿಜೆಪಿಯ ನೆಲೆ ವಿಸ್ತರಣೆಯನ್ನು ತಡೆಯುವುದಕ್ಕಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೆಣೆದಿದ್ದ ತಂತ್ರಗಾರಿಕೆಗೆ ಸ್ವಪಕ್ಷೀಯರೇ ತಡೆಯೊಡ್ಡಿದ್ದಾರೆ ಎಂಬುದು ತಿಳಿದುಬಂದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮನ್ನು ಪರಾಭವಗೊಳಿಸಿದ್ದ ಈ ಭಾಗದ ಒಕ್ಕಲಿಗರ ನಾಯಕ, ಈಗ ಜೆಡಿಎಸ್‌ನಿಂದ ಮಾನಸಿಕವಾಗಿ ದೂರವಾಗಿರುವ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ರೂಪಿಸಿದ್ದರು ಎನ್ನಲಾಗಿದೆ.

‘ಜಿ.ಟಿ.ಡಿ ಕಾಂಗ್ರೆಸ್‌ ಸೇರಿದರೆ, ತಮ್ಮ ವಿರುದ್ಧದ ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ ಕಳಚುವುದರ ಜೊತೆಗೆ ಆ ಸಮುದಾಯದ ಮತ ಸೆಳೆಯಲು ಅನುಕೂಲವಾಗುತ್ತದೆ ಹಾಗೂ ಮೈಸೂರು–ಚಾಮರಾಜನಗರ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಅವರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಬಲವರ್ಧನೆಯ ಕನಸು ಕಂಡಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಜೆಡಿಎಸ್‌ ಬಲ ಕುಂದಿಸಲು ಅಸ್ತ್ರವಾಗಿಯೂ ಬಳಸಿಕೊಳ್ಳಬಹುದು’ ಎಂಬುದು ಸಿದ್ದರಾಮಯ್ಯ ಆಲೋಚನೆಯಾಗಿತ್ತು. ಇದಕ್ಕೆ ಪೂರಕವಾದ ಚಟುವಟಿಕೆ ನಡೆದಿದ್ದವು ಎಂಬುದನ್ನು ಆಪ್ತ ವಲಯ ಖಚಿತಪಡಿಸಿದೆ.

ಜಿ.ಟಿ.ಡಿ ಸಹ ಕೆಲವು ಷರತ್ತು ಮುಂದಿಟ್ಟಿದ್ದರು. ಜಿಲ್ಲೆಯಲ್ಲಿನ ತಮ್ಮ ಬೆಂಬಲಿಗ ಶಾಸಕರೊಬ್ಬರನ್ನೂಕಾಂಗ್ರೆಸ್‌ಗೆ ಕರೆ ತರಲಿದ್ದು, ಅವರಿಗೂ ಅವಕಾಶ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ.

‘ಈ ಬೆಳವಣಿಗೆ ತಿಳಿಯುತ್ತಿದ್ದಂತೆಯೇ ಎಚ್‌.ಡಿ.ಕುಮಾಸ್ವಾಮಿ ಅವರ ಆಪ್ತ ಶಾಸಕರೊಬ್ಬರು ಸೇರಿದಂತೆ ಕಾಂಗ್ರೆಸ್‌ನ ಮಾಜಿ ಸಚಿವ, ಮಾಜಿ ಶಾಸಕರು ಒಟ್ಟಾಗಿ, ಜಿ.ಟಿ.ದೇವೇಗೌಡರ ಸೇರ್ಪಡೆಗೆ ಅವಕಾಶವೇ ಸೃಷ್ಟಿಯಾಗದಂತೆ ರಾಜಕೀಯ ಚಕ್ರವ್ಯೂಹ ರಚಿಸಿದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿ.ಟಿ.ದೇವೇಗೌಡ ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ಭವಿಷ್ಯದಲ್ಲಿ ನಿಮಗೆ ತಲೆ ನೋವಾಗಲಿದ್ದಾರೆ. ಈಗಾಗಲೇ ಸಹಕಾರಿ ರಂಗದಲ್ಲಿ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಜಿಟಿಡಿ ಪುತ್ರ ಹರೀಶ್‌ಗೌಡನ ಆಕ್ರಮಣಕಾರಿ ಪ್ರವೃತ್ತಿಯಿಂದ, ಮುಂದೆ ನಿಮ್ಮ ಪುತ್ರರ ರಾಜಕೀಯ ಭವಿಷ್ಯ ಮಸುಕಾಗಲಿದೆ ಎಂಬುದನ್ನು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಮೂಲಕ ಸಿದ್ದರಾಮಯ್ಯ ಕಿವಿಗೆ ಹಾಕಿದರು. ಇದರಿಂದ ಜಿಟಿಡಿ ಸೇರ್ಪಡೆಗೆ ಹಿನ್ನಡೆಯಾಯ್ತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT