ಗುರುವಾರ , ಮಾರ್ಚ್ 30, 2023
32 °C

ಮಂಥನ ಸಮಾವೇಶ- ಮೂರ್ಖರು ಮಾತ್ರ ಸುಮ್ಮನಿದ್ದಾರೆ: ರೈತ ನಾಯಕ ಹರ್ನೇಕ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಸಂಬಂಧಿ ಕರಾಳ ಕಾಯ್ದೆಗಳನ್ನು ಬುದ್ಧಿ ಇರುವ ಎಲ್ಲರೂ ವಿರೋಧಿಸುತ್ತಿದ್ದಾರೆ. ಮೂರ್ಖರು ಮಾತ್ರ ಈ ವಿಚಾರದಲ್ಲಿ ಸುಮ್ಮನಿದ್ದಾರೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಸಂಚಾಲಕ ಹರನೇಕ್‌ ಸಿಂಗ್‌ ಹೇಳಿದರು.

ಕರ್ನಾಟಕ ಜನಶಕ್ತಿ ಸಂಘಟನೆ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಐತಿಹಾಸಿಕ ರೈತಾಂದೋಲನ ಕಲಿಸುವ ಪಾಠ– ತೋರುವ ಹಾದಿ: ಮಂಥನ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ಈಗಿನ ಸಂದರ್ಭದಲ್ಲಿ ಮೂರ್ಖರು ಮಾತ್ರ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯ. ಬುದ್ಧಿ ಇರುವವರು ಸುಮ್ಮನಿರುವುದಿಲ್ಲ. ಕೃಷಿ ಕಾಯ್ದೆಗಳನ್ನು ವಿರೋಧಿಸದೇ ಇರುವವರು ಮೂರ್ಖರ ಪಟ್ಟಿಗೆ ಸೇರುತ್ತಾರೆ’ ಎಂದರು.

ದೇಶದ ಸಾರ್ವಭೌಮತೆಗೆ ವಿರುದ್ಧವಾದ ಕಾಯ್ದೆಗಳನ್ನು ಜನರ ಮೇಲೆ ಹೇರಲು ಕೇಂದ್ರ ಸರ್ಕಾರ ಹೊರಟಿದೆ. ಬೆಳೆಗಳನ್ನು ಬೆಳೆದು ದೇಶವನ್ನೇ ಪೊರೆಯುವ ರೈತರನ್ನು ನಾಶಮಾಡಲು ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ತಂದಿದೆ. ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಕಾಯ್ದೆಗಳ ವಿರುದ್ಧದ ಹೋರಾಟ ವರ್ಷ ಪೂರೈಸಿದೆ. ಈಗಲೂ ರೈತರು ತಮ್ಮ ಬೇಡಿಕೆ ಈಡೇರದೇ ಹೆಜ್ಜೆ ಹಿಂದಕ್ಕೆ ಇಡುವುದಿಲ್ಲ ಎಂದು ಹೇಳಿದರು.

ರೈತರ ಹಕ್ಕುಗಳು ಮತ್ತು ಹೋರಾಟವನ್ನು ಬೇರೆಯವರು ನಿರ್ಧರಿಸುವ ಕಾಲ ಮುಗಿದಿದೆ. ಕೆಲವರು ಚುನಾವಣೆ ಸಮೀಪಿಸಿದಾಗ ರೈತರ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರು. ಇನ್ನು ಹಾಗಾಗಲು ಸಾಧ್ಯವಿಲ್ಲ. ರೈತರೇ ತಮ್ಮ ಹಕ್ಕುಗಳ ಕುರಿತು ಮಾತನಾಡುತ್ತಾರೆ ಮತ್ತು ಹೋರಾಟದ ದಿಕ್ಕನ್ನು ನಿರ್ಧರಿಸುತ್ತಾರೆ ಎಂದು ಹರನೇಕ್‌ ತಿಳಿಸಿದರು.

ಪಂಜಾಬ್‌ನಲ್ಲಿ ಆರಂಭವಾದ ಹೋರಾಟ ದೆಹಲಿ ಗಡಿ ತಲುಪಿ ವರ್ಷವಾಯಿತು. ಆರಂಭದಿಂದಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚಳವಳಿ ಮುರಿಯಲು ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ಎಲ್ಲ ವಿಚಾರಧಾರೆಗಳ ರೈತ ಸಂಘಟನೆಗಳೂ ಒಗ್ಗೂಡಿ ನಡೆಸುತ್ತಿರುವ ಹೋರಾಟದಲ್ಲಿ ಒಡಕು ಸೃಷ್ಟಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನಾಯಕಿ ಸವಿತಾ ಕುರಗಂಟಿ ಮಾತನಾಡಿ, ‘ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ಎಷ್ಟು ಅಪಾಯಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಕಾಯ್ದೆಯ ದುಷ್ಪರಿಣಾಮ ಕುರಿತು ನೂರಾರು ಸಾಕ್ಷ್ಯಗಳಿವೆ. ಆದರೆ, ಅದು ಉತ್ತಮವಾದ ಕಾಯ್ದೆ ಎಂಬುದನ್ನು ನಿರೂಪಿಸುವ ಒಂದು ಸಾಕ್ಷ್ಯವೂ ಕೇಂದ್ರ ಸರ್ಕಾರದ ಬಳಿ ಇಲ್ಲ’ ಎಂದು ಹೇಳಿದರು.

‘ನಮ್ಮ ಊರು– ನಮ್ಮ ಭೂಮಿ’ ಆಂದೋಲನದ ವಿ. ಗಾಯತ್ರಿ, ‘ಕೃಷಿ ಕಾಯ್ದೆಗಳಿರುವ ಹಿಂದಿರುವ ಅಂತರರಾಷ್ಟ್ರೀಯ ಹುನ್ನಾರ’ದ ಕುರಿತು ಮತ್ತು ಪ್ರಾಧ್ಯಾಪಕ ಡಾ.ಬಿ.ಸಿ. ಬಸವರಾಜ್‌, ‘ಕೃಷಿ ಕಾಯ್ದೆಗಳು ಮತ್ತು ಕಾರ್ಪೋರೇಟ್‌ ಹಿತಾಸಕ್ತಿ’ ಕುರಿತು ಮಾತನಾಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಟಿ. ಯಶವಂತ್‌ ಮಾತನಾಡಿದರು. ಕರ್ನಾಟಕ ಜನಶಕ್ತಿಯ ರಾಜ್ಯ ಘಟಕದ ಕಾರ್ಯದರ್ಶಿ ಕುಮಾರ್‌ ಸಮತಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನೂರ್‌ ಶ್ರೀಧರ್‌ ಇದ್ದರು.

‘ಫ್ಯಾಸಿಸ್ಟ್‌ವಾದಕ್ಕೆ ಬೆಂಬಲವಿಲ್ಲ’

‘ದೆಹಲಿಯ ಸಿಂಘು ಗಡಿಯಲ್ಲಿ ರೈತ ಹೋರಾಟದ ಸ್ಥಳದಲ್ಲಿ ನಡೆದ ದಲಿತ ಯುವಕನ ಹತ್ಯೆ ಫ್ಯಾಸಿಸ್ಟ್‌ವಾದಿಗಳಿಂದ ಆಗಿದೆ. ಹಿಂದೂ ಫ್ಯಾಸಿಸ್ಟ್‌ ಶಕ್ತಿಗಳು ಸಿಖ್‌ ಫ್ಯಾಸಿಸ್ಟ್‌ ಶಕ್ತಿಗಳ ಮೂಲಕ ಈ ಕೃತ್ಯ ಎಸಗಿವೆ. ಯಾವುದೇ ಬಗೆಯ ಫ್ಯಾಸಿಸ್ಟ್‌ವಾದವನ್ನೂ ಸಂಯುಕ್ತ ಕಿಸಾನ್‌ ಮೋರ್ಚಾ ಬೆಂಬಲಿಸುವುದಿಲ್ಲ’ ಎಂದು ಹರನೇಕ್‌ ಸಿಂಗ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು