ಸೋಮವಾರ, ನವೆಂಬರ್ 30, 2020
21 °C

ಶಿರಾ ಉಪ ಚುನಾವಣೆ: ದಾಖಲೆ ಬರೆದ ಬಿಜೆಪಿ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ಬಿಜೆಪಿ ಕಾರ್ಯಕರ್ತರ ಸಂಭ್ರಮ

ತುಮಕೂರು: ಪಕ್ಷದ ಅಸ್ತಿತ್ವವೇ ಇಲ್ಲದ ಶಿರಾದಲ್ಲಿ ಇದೇ ಮೊದಲಬಾರಿಗೆ ಉಪ ಚುನಾವಣೆಯಲ್ಲಿ ಕಮಲ ಅರಳಿ ನಿಂತಿದೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ‘ಕೆ.ಆರ್.ಪೇಟೆ ಮಾದರಿ’ಯನ್ನು ಸ್ವಲ್ಪ ಮಟ್ಟಿಗೆ ಬದಲಿಸಿಕೊಂಡು ‘ಶಿರಾ ಮಾದರಿ’ಯಾಗಿ ಪ್ರಯೋಗಿಸಿದ್ದು ಜಯ ತಂದುಕೊಟ್ಟಿದೆ.

ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಅನುಸರಿಸಿದ ತಂತ್ರಗಾರಿಕೆ ಇಲ್ಲೂ ಫಲ ನೀಡಿದೆ. ಅಲ್ಲಿನ ಪ್ರಯೋಗದ ಜತೆಗೆ ಪಕ್ಷ ಸಂಘಟಿಸಿದ್ದು ಗೆಲುವಿನ ದಡ ಸೇರಿಸಿದೆ.

ಬೂತ್‌ಮಟ್ಟದಿಂದ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಅದೇ ಹುರುಪನ್ನು ಕೊನೆಯ ಹಂತ ದವರೆಗೂ ತೆಗೆದುಕೊಂಡು ಹೋಗಿದ್ದು ದೊಡ್ಡಮಟ್ಟದ ಗೆಲುವಿಗೆ ಸಹಕಾರಿಯಾಗಿದೆ. ಡಾ.ಸಿ.ಎಂ. ರಾಜೇಶ್‌ಗೌಡ ಯುವಕ, ಹೊಸಮುಖ ಎಂಬ ಕಾರಣಕ್ಕೂ ಯುವ ಸಮುದಾಯ ಬೆಂಬಲಿಸಿದೆ.

ಪಕ್ಷ  ಸಂಘಟನೆ ಜತೆಗೆ ಜೆಡಿಎಸ್ ಮತಬುಟ್ಟಿಗೆ ನೇರವಾಗಿ ಬಿಜೆಪಿ ಕೈಹಾಕಿತು. ಆ ಪಕ್ಷದ ಪ್ರಮುಖ ನಾಯಕ ರನ್ನು ತನ್ನತ್ತ ಸೆಳೆದು ಆರಂಭದಲ್ಲೇ ಆಘಾತ ನೀಡಿತು. ಪಕ್ಷಕ್ಕೆ ಬಂದ ನಾಯಕರ ‘ಶಕ್ತಿ’ ಬಳಸಿಕೊಂಡು ಮತಗಳ ಕ್ರೋಡೀಕರಣ ಮಾಡಿತು. ಆರ್ಥಿಕ ಸಂಪನ್ಮೂಲದ ಜತೆಗೆ ಅಧಿಕಾರದ ಬಲವನ್ನೂ ಪ್ರಯೋಗಿಸಿತು.

ಎರಡು ವಾರ ಕ್ಷೇತ್ರದಲ್ಲೇ ಉಳಿದು ವಿಜಯೇಂದ್ರ ಕಾರ್ಯತಂತ್ರ ರೂಪಿಸಿದ್ದು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಗೌಡ ಪಕ್ಷ ಸಂಘಟಿಸಿದ್ದು ನೆರವಿಗೆ ಬಂತು. ಜಾತಿವಾರು ಸಭೆಗಳನ್ನು ನಡೆಸಿ ಆ ಸಮುದಾಯದ ನಾಯಕರನ್ನು ಬಳಸಿ ಕೊಂಡು ಮತ ಗಳು ಚದುರದಂತೆ ನೋಡಿಕೊಳ್ಳಲಾಯಿತು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮೂಲಕ ಪರಿಶಿಷ್ಟ ಜಾತಿಯ ಮತಗಳನ್ನು ಸೆಳೆಯಲಾ ಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಿ ಕ್ಷೇತ್ರದಲ್ಲಿ ನಿರ್ಣಾ ಯಕ ಸಂಖ್ಯೆಯಲ್ಲಿರುವ ಯಾದವ ಸಮುದಾಯದ ಮತಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸ ನಡೆಯಿತು. ಇದರ ನಡುವೆ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಯಾದವ ಸಮುದಾಯದ ನಾಯಕ ರಘುವೀರಾರೆಡ್ಡಿ ಅವರನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭೇಟಿ ಮಾಡಿದರು.

ಸಮುದಾಯದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ರೆಡ್ಡಿ ಅವರು ಕ್ಷೇತ್ರಕ್ಕೆ ಬಂದು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡದಂತೆ ನೋಡಿ ಕೊಂಡಿದ್ದು ಯಾದವರ ಮತಗಳು ಪಕ್ಷದ ಪರವಾಗಿ ಗಟ್ಟಿಗೊಳ್ಳಲು ಸಾಧ್ಯ ವಾಯಿತು. ನಿಗಮ ರಚನೆ ಜತೆಗೆ ಈ ಸಮು ದಾಯದ 40ಕ್ಕೂ ಹೆಚ್ಚು ದೇಗುಲಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿತ್ತು. ಈ ನೆರವಿನ ಫಲ ಕಾಡುಗೊಲ್ಲ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಗೋಚರಿಸಿದೆ. ಹೆಚ್ಚಿನ ಮತಗಳು ಈ ಭಾಗದಿಂದಲೇ ಬಂದಿರುವುದು ಆ ಸಮುದಾಯ ಬೆಂಬಲಿಸಿರುವುದಕ್ಕೆ ಸಾಕ್ಷಿಯಾಗಿದೆ. ಮದಲೂರು ಕೆರೆಗೆ ನೀರು ಹರಿಸುವ ಭರವಸೆ ಆ ಭಾಗದಲ್ಲಿ ಸಾಕಷ್ಟು ಮತಗಳನ್ನು ತಂದುಕೊಟ್ಟಿದೆ.

ಒಗ್ಗಟ್ಟು ಮತ್ತು ಒಳಪೆಟ್ಟು?: ಕಾಂಗ್ರೆಸ್‌ ನಾಯಕರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಒಟ್ಟಾಗಿ ಜಯಚಂದ್ರ ಪರ ಪ್ರಚಾರ ನಡೆಸಿದರು. ಜಿಲ್ಲೆಯ ಮೂವರು ಹಿರಿಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೂ ಸೋಲಿನ ಅಂತರ 10 ಸಾವಿರ ದಾಟಿದೆ. ಸೋಲಿನ ಅಂತರ ಹೆಚ್ಚಾಗಲು ‘ಒಳ ಪೆಟ್ಟು’ ಕಾರಣವಾಗಿರಬಹುದೇ ಎಂಬ ಚರ್ಚೆಯೂ ಪಕ್ಷದ ಆಂತರಿಕ ವಲ ಯದಲ್ಲಿ ನಡೆದಿದೆ. ಸಂಪನ್ಮೂಲದ ಕೊರತೆಯೂ ಕಾಡಿತು ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕೊರೊನಾ ಸೋಂಕಿನಿಂದ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿಲ್ಲ.

ಜೆಡಿಎಸ್ ಎಂದೂ ಇಷ್ಟೊಂದು ಕಳಪೆ ಪ್ರದರ್ಶನ ತೋರಿದ್ದಿಲ್ಲ. ಆರಂಭದಲ್ಲೇ ಪ್ರಮುಖ ನಾಯಕರು ಪಕ್ಷ ತೊರೆದಿದ್ದು ದೊಡ್ಡ ಪೆಟ್ಟು ನೀಡಿತು. ಚುನಾವಣೆ ಹತ್ತಿರ ಬಂದಂತೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರು. ಜಿಲ್ಲೆಯ ನಾಯಕರಾದ ಶ್ರೀನಿವಾಸ್, ಬೆಮಲ್ ಕಾಂತರಾಜು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿಲ್ಲ. ಕ್ಷೇತ್ರದಲ್ಲಿ ಕಾರ್ಯಕರ್ತರಿದ್ದರೂ ಪಕ್ಷ ಮುನ್ನಡೆಸುವ ನಾಯಕರಿಲ್ಲದೆ ಸೊರಗಿತು. ಈ ಅವಕಾಶವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತು.

ಮೊದಲ ಬಾರಿಗೆ ಬಿಜೆಪಿ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಕಮಲದ ಬಾವುಟ ಹಾರಿದೆ.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್‌ಗೌಡ 76,564 ಮತಗಳನ್ನು ಪಡೆದು ಗೆಲುವಿನ ಪತಾಕೆ ಹಾರಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ 63,150 ಮತಗಳನ್ನು ಪಡೆದರೆ, ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ 36,783 ಮತ ಗಳಿಸಿದರು.

ಮತ ಎಣಿಕೆ ನಡೆದ 24 ಸುತ್ತುಗಳಲ್ಲಿಯೂ ರಾಜೇಶ್‌ ಗೌಡ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 13,414ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

2018ರ ಸಾರ್ವತ್ರಿಕ ಚುನಾವಣೆ ಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ 16 ಸಾವಿರ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಇಲ್ಲಿ ಪರಂಪರಾಗತ ಎದುರಾಳಿಗಳಾಗಿದ್ದವು. ಕುಂಚಿಟಿಗ ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರೇ ನಿರ್ಣಾಯಕರಾಗಿದ್ದರು. ಬಿಜೆಪಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದ ಎಲ್ಲ ಸಮುದಾಯಗಳ ಮತಗಳನ್ನು ಪಡೆದಿದೆ.

 ಅಭಿವೃದ್ಧಿಗೆ ಮನ್ನಣೆ: ರಾಜೇಶ್ ಗೌಡ

‘ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ನೋಡಿ ಜನರು ಮತ ಹಾಕಿದ್ದಾರೆ. ಶಿರಾ ತಾಲ್ಲೂಕಿನ ಮತದಾರರಿಗೆ ನಾನು ಋಣಿ’ ಎಂದು ನೂತನ ಶಾಸಕರಾಗಿ ಆಯ್ಕೆಯಾಗಿರುವ ಡಾ.ಸಿ.ಎಂ.ರಾಜೇಶ್‌ಗೌಡ ತಿಳಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರನ್ನು ತಲುಪಿವೆ. ಎಲ್ಲ ಸಮುದಾಯದವರು ನಮ್ಮ ಕೈ ಹಿಡಿದಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು